ಶೂದ್ರರಿಗೆ ಆತ್ಮ ಗೌರವ ತಂದವರು ಕುವೆಂಪು
ಕ.ಪ್ರ.ವಾರ್ತೆ ಹಾಸನ ಡಿ. 30
ಶೂದ್ರ ಸಮುದಾಯಗಳಿಗೆ ಆತ್ಮ ಗೌರವ ತಂದುಕೊಟ್ಟ ಮಹಾನ್ ಚೇತನ ರಾಷ್ಟ್ರಕವಿ ಕುವೆಂಪು. ಆದರೆ ಈ ಸಮುದಾಯಗಳ ಮೇಲೆ ಕುವೆಂಪು ವಿಚಾರಗಳ ಪರಿಣಾಮ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ವಿಷಾದನೀಯ ಎಂದು ಸಾಹಿತಿ ಹಾಗೂ ಮೈಸೂರಿನ ಪ್ರಾಧ್ಯಾಪಕ ಪ್ರೊ. ಕೃಷ್ಣೇಗೌಡ ವಿಷಾದಿಸಿದರು.
ನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮತ್ತು ಬಿ.ಜಿ.ಎಸ್. ಸಮಾಜ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಅದೇ ಶಕ್ತಿ: ವಿಚಾರಗಳಿಗೆ ಮಾನವನ ಬದುಕನ್ನು ಬದಲಾಯಿಸುವ ಶಕ್ತಿ ಇದೆ. ಮೋಹನದಾಸ ಕರಮಚಂದ ಗಾಂಧಿ ಎಂಬ ಒಬ್ಬ ಸಾಮಾನ್ಯ ವಕೀಲ ಜಾನ್ ರಸ್ಕಿನ್ ಅವರ ಅನ್ಟು ದಿಸ್ ಲಾಸ್ಟ್ ಕೃತಿಯನ್ನು ಓದಿ ಪ್ರಭಾವಿತರಾಗಿ ಮಹಾತ್ಮ ಗಾಂಧಿ ಆಗಿ ಬೆಳೆದರು. ಅದೇ ಶಕ್ತಿ ಕುವೆಂಪು ಅವರ ಕೃತಿಗಳಲ್ಲೂ ಇದೆ ಎಂದರು.
ಅಸಮಾಧಾನ: ಇಡೀ ಜಗತ್ತಿಗೇ ಹೊಸ ದರ್ಶನ ನೀಡಿದ ಕುವೆಂಪು ಅವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿಶ್ವಮಾನವರಾಗಲು ಸಾಧ್ಯ.
ಆದರೆ, ಕುವೆಂಪು ಹೆಸರು ಹೇಳಿಕೊಂಡು ಸೋಗಲಾಡಿತನ ಮಾಡುವುದು ಆ ಮಹಾನ್ ಚೇತನಕ್ಕೆ ಮಾಡುವ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೇಕ್ಸ್ಪಿಯರ್ನಷ್ಟೇ ಶ್ರೇಷ್ಠ: ಅತ್ಯಂತ ಶ್ರೀಮಂತ ಭಾಷೆಯಾದ ಕನ್ನಡವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡವರು ಕುವೆಂಪು. ಅವರಷ್ಟು ವೈವಿಧ್ಯಮಯವಾಗಿ ಛಂದಸ್ಸನ್ನು ಬಳಸಿರುವ ಮತ್ತೊಬ್ಬ ಕವಿ ಯಾವ ಭಾಷೆಯಲ್ಲಿಯೂ ಇಲ್ಲ. ಪ್ರಪಂಚದ ಎಲ್ಲಾ ಭಾಷೆ, ಪ್ರದೇಶಗಳನ್ನು ತಲುಪಿರುವ ಮಹಾಕವಿ ಶೇಕ್ಸ್ಪಿಯರ್ ಅವರಷ್ಟೇ ಶ್ರೇಷ್ಠರಾದವರು ಕುವೆಂಪು ಎಂದು ಅವರು ಬಣ್ಣಿಸಿದರು.
'ರಾಮಾಯಣಂ'ನಿಂದ ಸ್ಫೂರ್ತಿ: ಈ ಸೃಷ್ಟಿಯಲ್ಲಿ ಪಾಪಿಗೂ ಕೂಡ ಉದ್ಧಾರವಾಗುವ ಅವಕಾಶವಿದೆ ಎಂಬುದನ್ನು ಜಗತ್ತಿಗೆ ತೋರಲು ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಬರೆದರು. ಅದು ಕನ್ನಡ ಸೌಭಾಗ್ಯ.
ಕುವೆಂಪು ವಿಚಾರಗಳನ್ನೇ ತಮ್ಮ ಸಾಧನೆಗೆ ಅಳವಡಿಕೊಂಡ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಪ್ರತಿ ರೈತನ ಮನೆಮನೆಗೆ ತಿರುಗಿ ಭಿಕ್ಷೆ ಎತ್ತಿ ಮಠವನ್ನು ಕಟ್ಟಿದರು. ಜಾತಿ, ಮತ ಭೇದವೆಣಿಸದೆ ಎಲ್ಲಾ ಸಮುದಾಯಗಳ ಮಕ್ಕಳಿಗೂ ಶಿಕ್ಷಣ ಒದಗಿಸಿದರು ಎಂದು ಹೇಳಿದರು.
ಹೊಸ ದಿಕ್ಕು: ಸಕಲೇಶಪುರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಎಂ. ವಿಶ್ವನಾಥ್ ಮಾತನಾಡಿ, ಕುವೆಂಪು ಅವರು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಾಲಿಗೆ ಸೇರುವಂತಹ ದಾರ್ಶನಿಕ ವ್ಯಕ್ತಿ. ಅವರು ಸಾಹಿತ್ಯ ರಚನೆಗಷ್ಟೇ ಸೀಮಿತವಾಗಲಿಲ್ಲ. ನಮ್ಮ ಬದುಕಿನ ಕೆಲವು ಮೂಢ ಆಚರಣೆಗಳನ್ನು ಬದಲಾಯಿಸುವ ಕೆಲಸವನ್ನೂ ಮಾಡಿದರು.
ಮಂತ್ರ ಮಾಂಗಲ್ಯ ಎಂಬ ಒಂದು ಹೊಸ ವಿವಾಹ ಪದ್ಧತಿಯನ್ನೇ ಹುಟ್ಟು ಹಾಕಿದರು. ದಲಿತ, ರೈತ ಮತ್ತು ಭಾಷಾ ಚಳುವಳಿಗಳಿಗೆ ಹೊಸ ದಿಕ್ಕು ತೋರಿದರು ಎಂದು ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹೆಚ್.ಬಿ. ಮದನಗೌಡ ಮಾತನಾಡಿ, ಶ್ರೀ ಆದಿಚುಂಚನಗಿರಿ ಮಠವು ಸರ್ವಧರ್ಮಗಳ ಸಮನ್ವಯ ಸಾಧಿಸಿ ತೋರುತ್ತಿದೆ. ಇದು ಕೇವಲ ಒಕ್ಕಲಿಗರ ಮಠವಲ್ಲ.
ಇತರೆ ಜನಾಂಗದವರೂ ಆದಿಚುಂಚನಗಿರಿ ಶಾಖಾ ಮಠಗಳ ಪೀಠಾಧಿಪತಿಗಳಾಗಿದ್ದಾರೆ. ಎಲ್ಲ ವರ್ಗಗಳ ಮಕ್ಕಳೂ ಶಿಕ್ಷಣ ಪಡೆಯುತ್ತಿದ್ದಾರೆ. ಎಲ್ಲಾ ವರ್ಗಗಳಿಗೆ ಸೇರಿದ ನೌಕರರಿದ್ದಾರೆ ಎಂದು ತಿಳಿಸಿದರು.
ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ವ್ಯವಸ್ಥಾಪಕ ಹೆಚ್.ಕೆ. ಚಂದ್ರಶೇಕರ್ ಮಾತನಾಡಿ, ತಮ್ಮ ಸ್ವಾರ್ಥಕ್ಕಾಗಿ ಕುವೆಂಪು ಭಾವಚಿತ್ರವನ್ನು ಬಳಸಿಕೊಳ್ಳುತ್ತಿರುವವರಿಗೆ ಕುವೆಂಪು ಜಯಂತಿ ಆಚರಿಸಬೇಕೆಂಬ ಪ್ರಜ್ಞೆ ಲ್ಲದಿರುವುದು ಈ ಸಮಾಜದ ದುರಂತ ಎಂದು ವಿಷಾದಿಸಿದರು.
ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮತ್ತು ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.