ಹದಗೆಟ್ಟ ರಸ್ತೆಗಳಿಗೆ ಗ್ರಹಣ ಬಿಡುವುದೇ?
ಪಿ. ರವಿಕುಮಾರ್
ಹಾಸನ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯಲ್ಲಿನ ರಸ್ತೆಗಳಿಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಡುವಂತಹ ಲಕ್ಷಣ ಗೋಚರಿಸಿದೆ.
ನಗರದ ಡೈರಿ ವೃತ್ತದಿಂದ ಬೇಲೂರು ರಸ್ತೆ ಸಂಪರ್ಕಿಸುವ ರಿಂಗ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಹಲವು ವರ್ಷಗಳಿಂದ ನೆನಗುದ್ದಿಗೆ ಬಿದ್ದಿದೆ. ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ, ಹಾಸನ- ಗೊರೂರು ರಸ್ತೆ ಹಾಗೂ ಹಾಸನ-ದುದ್ದ ರಸ್ತೆಗಳು ಹಲವು ವರ್ಷಗಳಿಂದ ತಾಂತ್ರಿಕ ಕಾರಣಗಳಿಂದ ಅಭಿವೃದ್ಧಿ ಕಾಣದೆ ವಂಚಿತವಾಗಿತ್ತು. ಇದರಿಂದ ಈ ರಸ್ತೆಗಳಲ್ಲಿ ಓಡಾಡುವಂತಹವರು ಪ್ರತಿನಿತ್ಯ ವನವಾಸ ಪಡುತ್ತಿದ್ದಾರೆ.
ಸರ್ಕಾರಕ್ಕೆ ಹಿಡಿ ಶಾಪ: ಈ ರಸ್ತೆಗಳಲ್ಲಿ ಬಿದ್ದಿರುವ ಆಳುದ್ದ ಗುಂಡಿಯಲ್ಲಿ ವಾಹನಗಳು ಸಂಚರಿಸಲು ಹರಸಾಹಸ ಪಡುತ್ತಿವೆ.
ಚಾಲಕರು ಜೀವ ಬಿಗಿ ಹಿಡಿದು ವಾಹನ ಚಾಲನೆ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ಆಳುದ್ದ ಗುಂಡಿಗಳು ಅಪಘಾತಗಳಿಗೆ ಅಹ್ವಾನ ನೀಡುತ್ತಿವೆ. ಕೆಲವೆಡೆ ಗುಂಡಿ ಮುಚ್ಚಲು ಹಾಕಿರುವ ಮಣ್ಣಿನಿಂದ ರಸ್ತೆ ಕೆಸರುಗದ್ದೆಯಾಗಿದೆ. ರಸ್ತೆಯಲ್ಲಿ ಪ್ರತಿ ನಿತ್ಯ ಸಂಚರಿಸುವ ವಾಹನ ಚಾಲಕರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಅನಾರೋಗ್ಯ ಪೀಡಿತರು ಮತ್ತು ಗರ್ಭಿಣಿಯರನ್ನು ಈ ರಸ್ತೆಯಲ್ಲಿ ಕರೆತರುವುದೇ ಕಷ್ಟವಾಗಿದೆ. ರಸ್ತೆ ಅಭಿವೃದ್ಧಿಗೆ ನಿರ್ಲಕ್ಷ್ಯವಹಿಸಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಸಬೂಬು ಹೇಳುವ ಬದಲು ಹಳಾಗಿರುವ ರಸ್ತೆ ಅಭಿವೃದ್ಧಿಗೆ ಮನಸ್ಸು ಮಾಡಲಿ ಎಂದು ಹಲವು ಬಾರಿ ಒತ್ತಾಯಿಸಿದ್ದರು ಸಹ ಹಿಂದಿದ್ದ ಸರ್ಕಾರಗಳು ಈ ಭಾಗದ ಜನರ ಗೋಳು ಕೇಳದ ಕಾರಣ ರಸ್ತೆಗಳು ಹಾಳಾಗಿದ್ದಾವೆ.
ಹಾಸನ- ದುದ್ದ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಜ. 1ರೊಳಗೆ ಕೆಲಸ ಆರಂಭಿಸುವಂತೆ ಗುತ್ತಿಗೆದಾರರಿಗೆ ಸರ್ಕಾರ ಸೂಚನೆ ನೀಡಿದ್ದು, ಒಂದು ವೇಳೆ ಕಾಮಗಾರಿ ಆರಂಭಿಸದಿದ್ದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದಲೇ ಕೆಲಸ ಆರಂಭಿಸಲಾಗುವುದು.
ಜಿಲ್ಲೆಯ ನಾನಾ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಒಟ್ಟು ರು. 200 ಕೋಟಿ ಹಣ ಬಿಡುಗಡೆ ಮಾಡಿದ್ದು, ಸಂಪೂರ್ಣ ಹದಗೆಟ್ಟಿರುವ ಹಾಸನ- ಗೊರೂರು ರಸ್ತೆಯ ದುರಸ್ಥಿ ಕಾರ್ಯಕ್ಕಾಗಿ ರು. 10 ಕೋಟಿ ಹಣವನ್ನು ತುರ್ತಾಗಿ ನೀಡಲಾಗಿದೆ. ಕಾಮಗಾರಿಗಳ ಉಳಿದ ಕಾಮಗಾರಿ ವಿವರಗಳನ್ನು ಕೂಡಲೇ ನೀಡುವುದಾಗಿ ಜಿಲ್ಲಾ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ರಸ್ತೆಗಳಲ್ಲಿ ಬಿದ್ದಿರುವ ಆಳುದ್ದ ಗುಂಡಿಗಳಿಂದ ಹತಾಶರಾಗಿದ್ದ ಜಿಲ್ಲೆಯ ಜನತೆಯಲ್ಲಿ ಮತ್ತೆ ಭರವಸೆಯನ್ನು ಕಾಂಗ್ರೆಸ್ ಮುಖಂಡರು ಮೂಡಿಸಿದ್ದಾರೆ.
ಆದರೆ ಆ ಭರವಸೆ ಕೇವಲ ಭರವಸೆಯಾಗಿಯೇ ಉಳಿಯುವುದೋ ಅಥವಾ ಅದು ಕಾರ್ಯರೂಪಗೊಂಡು ಹದಗೆಟ್ಟಿರುವ ರಸ್ತೆಗಳು ಅಭಿವೃದ್ಧಿ ಕಾಣುವುದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ಕಾಂಗ್ರೆಸ್ ನಾಯಕರ ಭರವಸೆ
ನಗರದ ಡೈರಿ ವೃತ್ತದಿಂದ ಬೇಲೂರನ್ನು ಸಂಪರ್ಕಿಸುವ ರಿಂಗ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ರು. 28 ಕೋಟಿ ಹಣ ಮಂಜೂರು ಮಾಡಿದೆ. ರಿಂಗ್ ರಸ್ತೆ ಕಾಮಗಾರಿಗೆ ಈಗಾಗಲೇ ತಾಂತ್ರಿಕ ಅನುಮೋದನೆ ದೊರೆತಿದ್ದು, ಕಾಮಗಾರಿಯ ಆರಂಭಿಕ ಹಂತವಾಗಿ ರು. 5 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.
ಎನ್.ಆರ್.ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ರೇಲ್ವೆ ಹಳಿ ಹಾದು ಹೊಗಿರುವುದರಿಂದ ಈ ಜಾಗದಲ್ಲಿ ಫ್ಲೈ ಓವರ್ ನಿರ್ಮಿಸಲು ಕೇಂದ್ರ ಸರ್ಕಾರ ರು. 36 ಕೋಟಿ ಹಣ ಬಿಡುಗಡೆ ಮಾಡಿದ್ದು, ಕಾಮಗಾರಿಗೆ ರಾಜ್ಯ ಸರ್ಕಾರ ನೀಡಬೇಕಿದ್ದ ತನ್ನ ಪಾಲಿನ ರು. 18 ಕೋಟಿ ಹಣ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅನುಮತಿ ನೀಡಿದ್ದಾರೆ. ಹಾಗೂ ಈ ಬಾರಿಯ ರೇಲ್ವೆ ಬಜೆಟ್ನಲ್ಲಿ ಈ ಕಾಮಗಾರಿಯನ್ನು ಸೇರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.