ಸಿಹಿ, ಕಹಿ ಎರಡನ್ನೂ ನೀಡಿದ ವರ್ಷ
ದಯಾಶಂಕರ ಮೈಲಿ
ಕನ್ನಡಪ್ರಭ ವಾರ್ತೆ, ಹಾಸನ, ಡಿ. 31
ಕಾಲ ಎಂಬುದೇ ಅಂಥದ್ದು. ಕಾಲ ತನ್ನ ತನ್ನ ಗರ್ಭದಲ್ಲಿ ಎಲ್ಲವನ್ನೂ ಅಡಗಿಸಿ ಇಟ್ಟುಕೊಳ್ಳದೇ ಇರುವುದಿಲ್ಲ. ಇದಕ್ಕಾಗಿಯೇ ಕಾಲವನ್ನು ಹಿಡಿಯೋರು ಯಾರೂ ಇಲ್ಲ ಎಂದು ಹೇಳೋದು. 2013ನೇ ವರ್ಷದ ಒಂದು ಅವಲೋಕನ ಮಾಡಿದರೆ, ಹಾಸನ ಜಿಲ್ಲೆಗೆ ಈ ವರ್ಷ ಸಿಹಿಯನ್ನೂ ಕೊಡುತ್ತಲೇ ಕಹಿಯನ್ನೂ ನೀಡಿದೆ ಎಂದು ಹೇಳಲಡ್ಡಿಯಿಲ್ಲ.
ಸಾಧನೆ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಾಸನ ನಗರದ ವಿಜಯ ಪ್ರೌಢಶಾಲೆಯ ಋತ್ವಿಕ್ 602 ಅಂಕಗಳನ್ನು ಪಡೆದು ರಾಜ್ಯಕ್ಕೆ 3ನೇ ಸ್ಥಾನ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದು ಹೆಮ್ಮೆಯ ಸಂಗತಿ. ಹಾಗೇ, 2013 ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ರಾಜಕಾರಣಿಗಳ ಪಕ್ಷಾಂತರ ಪರ್ವ ಜೋರಾಗಿ ನಡೆಯಿತು.
ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ 19 ಸ್ಥಾನಗಳನ್ನು ಗಳಿಸುವ ಮೂಲಕ ಹಲವು ವರ್ಷಗಳ ನಂತರ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಿತು.
ಬೇಲೂರು ಪಟ್ಟಣದ ಸಮೀಪ ಇರುವ ವಿಷ್ಣು ಸಮುದ್ರ ಕೆರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಉರುಳಿ 8 ಮಂದಿ ಇಹಲೋಕ ತ್ಯಜಿಸಿದ್ದು ವಿಷಾದನೀಯಕರ ಸಂಗತಿ. ಹಾಸನ ದಲ್ಲಿ ಪ್ರಥಮ ಬಾರಿಗೆ ಮಹಿಳಾ ವಕೀಲರ ಸಮ್ಮೇಳನ ಮತ್ತು ಸಿಪಿಎಂ ನ ರಾಜ್ಯ ಮಟ್ಟದ ಅಧ್ಯಯನ ಶಿಬಿರ ನಡೆದು, ರಾಷ್ಟ್ರ ನಾಯಕರಾದ ಸೀತಾರಾಂ ಯಚೂರಿ ಮೊದಲಾದವರು ಭಾಗವಹಿಸಿದ್ದರು. ಹೀಗೆ 2013 ಹಾಸನ ಜಿಲ್ಲೆಗೆ ಕಹಿ, ಸಿಹಿಗಳೆರಡನ್ನು ನೀಡಿದೆ.
ಕಾಡುಪ್ರಾಣಿಗಳ ದಾಳಿ
ತೇವಾಂಶದ ಕಡಿಮೆಯಾದ ಕಾರಣ ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳ ರೈತರ ಜೀವನಾಡಿಗಳಾಗಿದ್ದ ತೆಂಗಿನ ಮರಗಳು ಒಣಗಿ ಹೋದವು. ಕೇಂದ್ರ ತಂಡ ಸ್ಥಳ ಪರಿಶೀಲನೆ ಮಾಡಿ ಹೋಗಿ ಆನೇಕ ತಿಂಗಳಾದರೂ ಪರಿಹಾರ ಘೋಷಣೆಯಾಗಿಲ್ಲ. ಆಲೂರು ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದರೆ, ಅರಸೀಕೆರೆ, ಹೊಳೆನರಸೀಪುರ, ಹಾಸನ ತಾಲೂಕುಗಳಲ್ಲಿ ಚಿರತೆ ಮತ್ತು ಕರಡಿಗಳ ಕಾಟ ವಿಪರೀತವಾಗಿದೆ. ಏತನ್ಮಧ್ಯೆ, ಆಲೂರು- ಸಕಲೇಶಪುರ ತಾಲೂಕಿನ ಗಡಿಭಾಗದಲ್ಲಿ ಇರುವ ಕೆರೋಡಿ ಬಳಿಯ ಮರಡಿಕೆರೆ ಬಳಿ ಒಂಟಿ ಸಲಗವನ್ನು ಸೆರೆ ಹಿಡಿದು ಸ್ಥಳಾಂತರ ಮಾಡಿದ್ದು ರೈತರು ಕೊಂಚ ನಿಟ್ಟುಸಿರು ಬಿಡುವಂತಾಯಿತು.
ಖುಷಿಯ ಹಿಂದೆಯೇ ಬೇಸರ
ಈ ಬಾರಿ ಮುಂಗಾರು ಬಿರುಸಿನಿಂದ ಸುರಿದ ಪರಿಣಾಮ ಜಿಲ್ಲೆಯ ರೈತರ ಉಸಿರು ಹೇಮಾವತಿ ಜಲಾಶಯದ ಒಡಲು ಬಹುಬೇಗನೇ ಭರ್ತಿಯಾಯಿತು. 1985ರಲ್ಲಿ ನಂತರ ಜುಲೈನಲ್ಲಿ ಜಲಾಶಯ ಭರ್ತಿಯಾಗಿದ್ದು ಹರ್ಷ ತಂದಿತು. ಆದರೆ, ಅತಿ ಹೆಚ್ಚಿನ ಮಳೆಯಿಂದ ಅರಕಲಗೂಡು, ಸಕಲೇಶಪುರ, ಬೇಲೂರು ತಾಲೂಕುಗಳಲ್ಲಿ ಬೆಳೆ, ಆಸ್ತಿ ಪಾಸ್ತಿ ನಷ್ಟವಾದರೆ, ಮಳೆ ಸಕಾಲಕ್ಕೆ ಸುರಿಯದ ಕಾರಣ ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳಲ್ಲದೇ ಹಾಸನ, ಬೇಲೂರಿನ ಜಾವಗಲ್ ಹೋಬಳಿಯಲ್ಲಿ ಕೆರೆ, ಕಟ್ಟೆಗಳು ತುಂಬಲಿಲ್ಲ. ರೈತ ತನ್ನ ಬೆವರು, ರಕ್ತ ಬಸಿದು ಬಿತ್ತಿದ ಬೆಳೆ ಹಟ್ಟಿಗೆ ಸೇರಲಿಲ್ಲ.
2013ರಲ್ಲಿ ಘಟಿಸಿದ ಪ್ರಮುಖ ಘಟನಾವಳಿಗಳು...
ಜ.2- ರೈತರ ಪರ ಹೈಕೋರ್ಟ್ ಮಹತ್ವದ ತೀರ್ಪ. 60್ಗ40 ಅನುಪಾತದಲ್ಲಿ ನಿವೇಶನ ಹಂಚಿಕೆಗೆ ನಿರ್ದೇಶನ.
ಜ.7 - ಸಜ್ಜನ ರಾಜಕಾರಣಿ, ಮಾಜಿ ಸಚಿವ ಕೆ.ಬಿ. ಮಲ್ಲಪ್ಪ ನಿಧನ.
ಜ.12- ಕಾಡಾನೆ ಹಾವಳಿ ಪ್ರದೇಶಕ್ಕೆ ಪ್ರಧಾನ ಅರಣ್ಯ ಸಂರಕ್ಷಣಾಕಾರಿ ದೀಪಕ್ ಶರ್ಮ ಭೇಟಿ
ಜ.14- ಗುಂಡ್ಯ ಜಲವಿದ್ಯುತ್ ಯೋಜನಾ ಪ್ರದೇಶಕ್ಕೆ ಕೇಂದ್ರ ಪರಿಸರ ಸಚಿವಾಲಯದ ಪ್ರತಿನಿಧಿ ಡಾ. ಕಸ್ತೂರಿ ರಂಗನ್ ಭೇಟಿ ನೀಡಿ ಪರಿಶೀಲನೆ.
ಜ.18- ಹಳೇಬೀಡಿನ ಪುಷ್ಪಗಿರಿಯಲ್ಲಿ ಗುರು ಸಿದ್ದರಾಮೇಶ್ವರರ 840ನೇ ಜಯಂತಿ ಮಹೋತ್ಸವ.
ಜ.23- ಹಾಸನದ ಹೊಸ ಬಸ್ ನಿಲ್ದಾಣದಲ್ಲಿ ಪ್ಲಾಟ್ ಫಾರಂಗೆ ಬಸ್ ನುಗ್ಗಿ 8ನೇ ತರಗತಿ ವಿದ್ಯಾರ್ಥಿ ಸಾವು
ಜ.29- ಚನ್ನರಾಯಪಟ್ಟಣ ತಾಲೂಕು ಸಾತೇನಹಳ್ಳಿ ಬಳಿ ಅಪಘಾತದಲ್ಲಿ ಮಂಡ್ಯದ ಐವರ ಸಾವು
ಫೆಬ್ರವರಿ
ಫೆ.5 - ಕಾಡುಮನೆ ಎಸ್ಟೇಟ್ನಲ್ಲಿ ಮಹಿಳೆ ವಿಮಲಾರಾಣಿ (55) ಕಾಡಾನೆ ತುಳಿತದಿಂದ ಸಾವು
ಫೆ.15- ಅರಸೀಕೆರೆ ತಾಲೂಕು ಕಣಕಟ್ಟೆ ಸಮೀಪ ರಾಮನಹಳ್ಳಿಯಲ್ಲಿ ಸಿಡಿಲು ಬಡಿದು 45 ಮೇಕೆಗಳ ಸಾವು.
ಫೆ.17 - ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟೇಗೌಡ ಕಾಂಗ್ರೆಸ್ ಸೇರ್ಪಡೆ.
ಮಾರ್ಚ್
ಮಾ.7- ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ - ಶೇ. 77.28 ಮತದಾನ.
ಮಾ.11- ಹಾಸನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಮತ ಎಣಿಕೆ - ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ.
ಮಾ.20 - ಹಾಸನದ ಹೊರ ವಲಯ ದೇವರಾಯಪಟ್ಟಣ ಬಳಿ ಲಾರಿ - ಕಾರು, ಡಿಕ್ಕಿ 6 ಜನರ ಸಾವು.
ಮಾ.26 - ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿಯ ಕೆರೋಡಿ ಬಳಿ ಶಿವನಹಳ್ಳಿ ಕೂಡಿಗೆಯಲ್ಲಿ ಸೆರೆ ಸಿಕ್ಕ ಒಂಟಿ ಸಲಗ
ಮಾ.30 - ಸಾಹಿತಿ ಡಾ.ಎಂ.ಎಸ್. ಶೇಖರ್ ಅಧ್ಯಕ್ಷತೆಯಲ್ಲಿ ಜಿಲ್ಲಾಸಾಹಿತ್ಯ ಸಮ್ಮೇಳನ.
ಏಪ್ರಿಲ್
ಏ.2 - ಮಾಜಿ ಪ್ರಧಾನಿ ದೇವೇಗೌಡರಿಂದ ಹೇಮಾವತಿ, ಯಗಚಿ ನದಿ ಪಾತ್ರದಲ್ಲಿ ವೈಮಾನಿಕ ಸಮೀಕ್ಷೆ.
ಏ. 19- ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ಕೆ. ಜವರೇಗೌಡ ಪಕ್ಷಕ್ಕೆ ರಾಜೀನಾಮೆ.
ಏ.24- ಎಚ್.ಕೆ. ಜವರೇಗೌಡ ಕಾಂಗ್ರೆಸ್ಗೆ ಸೇರ್ಪಡೆ.
ಏ.28- ಆಲೂರು ತಾಲೂಕು ಚಿನ್ನಳ್ಳಿಯಲ್ಲಿ ಸಿಡಿಲು ಬಡಿದು ವಿಜಯಾ ಎಂಬ ಮಹಿಳೆ ಸಾವು.
ಮೇ
ಮೇ 5 - ಅರಸೀಕೆರೆ ತಾಲೂಕಿನ ಕಲ್ಲುಸಾದರಹಳ್ಳಿಯಲ್ಲಿ ಸಿಡಲು ಬಡಿದು ವ್ಯಕ್ತಿ ಸಾವು.
ಮೇ 6 ಎಸ್ಎಸ್ಎಲ್ಸಿ ಫಲಿತಾಂಶ - ಹಾಸನ ವಿಜಯ ಶಾಲೆ ವಿದ್ಯಾರ್ಥಿ ಋತ್ವಿಕ್ಗೆ ರಾಜ್ಯದಲ್ಲಿ 3 ನೇ ಸ್ಥಾನ.
ಮೇ 11- ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟ - ಜಿಲ್ಲೆಯಲ್ಲಿ ಪ್ರಾಬಲ್ಯ ಮೆರೆದ ಜೆಡಿಎಸ್
ಮೇ 19 - ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಜಿಲ್ಲೆಯ ಶಾಸಕ ಎ. ಮಂಜುಗೆ ಸಿಗದ ಸಚಿವ ಸ್ಥಾನ.
ಮೇ 19 - ಸಕಲೇಶಪುರದಲ್ಲಿ ನಕಲಿ ರಸಗೊಬ್ಬರ ಪತ್ತೆ.
ಜೂನ್
ಜೂ. 9- ಚನ್ನರಾಯಪಟ್ಟಣ ತಾಲೂಕು ದೊಡ್ಡ ಕರಡೇವು ಗ್ರಾಮದಲ್ಲಿ ಜಿಲ್ಲಾ ಜೆಡಿಯು ಅಧ್ಯಕ್ಷ ಸತೀಶ್ ಆತ್ಮಹತ್ಯೆ.
ಜೂ. 11 - ಚನ್ನರಾಯಪಟ್ಟಣ ತಾಲೂಕು ಅಗ್ರಹಾರದ ಯೋಧ ಯೋಗಾನಂದ (38) ಸಿಯಾಚಿನ್ ಪ್ರದೇಶದಲ್ಲಿ ಸಾವು.
ಜೂ. 14- ಗ್ಯಾರಳ್ಳಿ ತಮ್ಮಯ್ಯ ಕೊಲೆ ಆರೋಪಿಗಳ ಖುಲಾಸೆ - ಹೈ ಕೋರ್ಟ್ ತೀರ್ಪು.
ಜೂ. 22- ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ ಹಾಸನ ಪುರ ಪ್ರವೇಶ - ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ.
ಜೂ. 25 - ಹಾಸನದ ಹಳೆ ಬಬ್ನಿಲ್ದಾಣ ನೆಲಸಮ- ಹಿಟಾಚಿ ಚಾಲಕ ಚನ್ನರಾಯ ಪಟ್ಟಣ ತಾ. ಅಪ್ಪೇನಹಳ್ಳಿ ಮುರಳಿ ಸಾವು.
ಜುಲೈ
ಜು. 5- ಎಸ್ಪಿ ಅಮಿತ್ ಸಿಂಗ್ ಗುಲ್ಬರ್ಗಾಕ್ಕೆ ವರ್ಗಾವಣೆ - ರವಿ ಚನ್ನಣ್ಣನವರ್ ಹಾಸನ ನೂತನ ಎಸ್ಪಿ.
ಜು. 18- ಜಿಲ್ಲಾಕಾರಿ ಕೆ.ಪಿ. ಮೋಹನ್ ಕುಮಾರ್ ಕೊಪ್ಪಳಕ್ಕೆ ವರ್ಗ - ಅನ್ಬುಕುಮಾ ರ್ ಹೊಸ ಡಿಸಿ.
ಜು. 20- ಸಕಲೇಶಪುರ ತಾಲ್ಲೂಕಿನಲ್ಲಿ ಮಳೆ ಬಿರುಸು - ಕ್ಯಾಮನಹಳ್ಳಿಯ ಬೇಬಿ ಎಂಬಾಕೆ ಪ್ರವಾಹಕ್ಕೆ ಸಿಲುಕಿ ಸಾವು
ಜು. 20 - ಹಾಸನದ ಕೆ.ಆರ್.ಪುರಂ ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆಗೆ ಮುಸ್ಲಿಂ ಮಹಿಳೆಯರ ಆಗ್ರಹ, ಮೆರವಣಿಗೆ
ಜು. 28 - ತೆಂಗು ಬೆಳೆ ಹಾನಿ ಪ್ರದೇಶಕ್ಕೆ ಕೇಂದ್ರ ಸರ್ಕಾರದ ತೋಟಗಾರಿಕೆ ಇಲಾಖೆ ಆಯುಕ್ತ ಗೋರ್ ಸಿಂಗ್ ತಂಡದ ಸಮೀಕ್ಷೆ.
ಆಗಸ್ಟ್
ಆ.2 - ಭಾರೀ ಮಳೆ- ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಆ.5 - ಸಿಪಿಎಂ ರಾಜ್ಯ ಮಟ್ಟದ ಒಂದು ವಾರ ಅಧ್ಯಯನ ಶಿಬಿರ ಆರಂಭ
ಆ.27 - ಹಾಸನ -ದುದ್ದ -ತಿಪಟೂರು ರಸ್ತೆ ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಹೈಕೋರ್ಟ್ ಆದೇಶ.
ಆ.29 - ಹಿರಿಯ ರಂಗಕರ್ಮಿ ಕೆ. ಸಣ್ಣೇಗೌಡ ನಿಧನ.
ಆ.6 - ಅರಸೀಕೆರೆ ತಾಲ್ಲೂಕು ಬೆಂಡೇಕೆರೆ ಬಳಿ ಬಬ್ಕಾರು ಡಿಕ್ಕಿ, ಬೆಂಗಳೂರು ಕೆಂಗೇರಿ ಉಪನಗರದ ಐವರ ದುರ್ಮರಣ.
ಆ.24 - ಹೇಮಾವತಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಚೌಡುವಳ್ಳಿಯ ಮೂವರು ಜಲ ಸಮಾಧಿ
ಆ.29 - ಹಾಸನ ತಾಲ್ಲೂಕು ಪುರದಮ್ಮ ದೇವಾಲಯ ಮುಜರಾಯಿ ಇಲಾಖೆ ವಶಕ್ಕೆ.
ಸೆಪ್ಟಂಬರ್
ಸೆ.4 - ಅರಸೀಕೆರೆ ತಾಲ್ಲೂಕಿನ ಕಾಮ ಸಮುದ್ರ, ಕಣಕಟ್ಟೆ ಕೆರೆಗಳಿಗೆ ಹರಿದ ಹೇಮಾವತಿ ನೀರು.
ಸೆ.5 - ಪಶು ವೈದ್ಯಕೀಯ ಕಾಲೇಜು ಮಾನ್ಯತೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಆಹೋರಾತ್ರಿ ಧರಣಿ.
ಸೆ.7 - ಹಾಸನ ನಗರಸೆ ಅಧ್ಯಕ್ಷೆಯಾಗಿ ಜೆಡಿಎಸ್ನ ಶ್ರೀವಿದ್ಯಾ, ಉಪಾಧ್ಯಕ್ಷರಾಗಿ ಇರಾದ್ ಅವಿರೋಧ ಆಯ್ಕೆ.
ಸೆ.24 - ಕರ್ತವ್ಯ ಲೋಪ ಆಲೂರಿನ ಪೊಲೀಸ್ ಇನ್ಸ್ಪೆಕ್ಟರ್ ಜಯಲಕ್ಷ್ಮಿ, ಪಿಎಸ್ ಐ ಸೋಮೇಗೌಡ ಸೇರಿ 6 ಪೊಲೀಸರ ಸಸ್ಪೆಂಡ್.
ಸೆ.25 - ಪಶು ವೈದ್ಯಕೀಯ ಕಾಲೇಜಿಗೆ ಷರತ್ತುಬದ್ಧ ಮಾನ್ಯತೆ ಮಂಜೂರು.
ಸೆ.28 - ಚನ್ನರಾಯಪಟ್ಟಣ ತಾಲ್ಲೂಕು ದೊಡ್ಡ ಕರಡೇವು ಬಳಿ ಕಲಬೆರಕೆ ಹಾಲು ಪತ್ತೆ
ಸೆ.30 - ಹಾಸನದ ಚಿಕ್ಕಹೊನ್ನೇನಹಳ್ಳಿ ಯ ವಾಸಿ ತೇಜಸ್ವಿನಿಯ ಕತ್ತು ಕೊಯ್ದು ಕೊಲೆ.
ಸೆ.20 -ಹಾಸನ ತಾಲ್ಲೂಕು ವೀರಾಪುರದ ಬಳಿ ಕಲಬೆರಕೆ ಹಾಲು ಪತ್ತೆ.
ಅಕ್ಟೋಬರ್
ಅ.10 - ಕಾಲುಬಾಯಿ ರೋಗಕ್ಕೆ ಅರಕಲಗೂಡಿನಲ್ಲಿ ಜಾನುವಾರುಗಳ ಬಲಿ.
ಅ.18 - ಹಾಸನದ ಚಿಕ್ಕಹೊನ್ನೇಹಳ್ಳಿ ಮಹಿಳೆ ಕೊಲೆ - ನಾಲ್ವರು ಆರೋಪಿಗಳ ಸೆರೆ.
ಅ.25 - ಹಾಸನಾಂಬೆ ದರ್ಶನ ಆರಂಭ - ಒಂದು ಕೋಟಿ ಮೀರಿದ ಆದಾಯ - ಎ ಗ್ರೇಡ್ಗೆ ಶಿಫಾರಸ್ಸು
ಅ.30 - ಬೇಲೂರು ಚನ್ನ ಕೇಶವ ದೇವಾಲಯದ ಆಸ್ತಿ ಒತ್ತುವರಿ 13 ಮನೆಗಳ ತೆರವು.
ಅ.18 - ಶಿರಾಡಿಘ್ಟ್ನಲ್ಲಿ ಟೆಂಪೋ ಟ್ರಾವೆಲ್ ಉರುಳಿ ಮೈಸೂರು ಬೆಮೆಲ್ ಬಡಾವಣೆಯ ನಾಲ್ವರ ಸಾವು
ನವೆಂಬರ್
ನ.5 - ಸಲಿಂಗಕಾಮ ಜಾಲ ಪತ್ತೆ - ವೈದ್ಯ ಪಾಲಾಕ್ಷ ಸೇರಿ 13 ಜನರ ಬಂಧನ.
ನ.12 - ಹಾಸನದ ಎಂಸಿಇ ಕಾಲೇಜಿನಲ್ಲಿ ಶುಲ್ಕ ಪಾವತಿಗೆ ವಿದ್ಯಾರ್ಥಿಗಳ ಪ್ರತಿಭಟನೆ.
ನ.15 - ಹಾಸನದ ಸಾಂಸ್ಕೃತಿಕ ವೇದಿಕೆಯಿಂದ 26 ಮಂದಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನ.
ನ.17 - ಬಾಳ್ಳುಪೇಟೆ ಬಳಿ ಕಾಡಾನೆ ದಾಳಿಗೆ ರಾಜೇಂದ್ರಪುರದ ರುದ್ರಯ್ಯ ಬಲಿ.
ನ.13 - ಗಂಗೂರು ಜೀತ ವಿಮುಕ್ತರಿಗೆ ಭೂಮಿ ಹಂಚಿಕೆ.
ನ.21- ಕಾಡಾನೆಗಳ ಸೆರೆ-ಆಲೂರು ತಾಲ್ಲೂಕು ಮಾಗಡಿಹಳ್ಳಿ ಬಳಿ ಕಾರ್ಯಾಚರಣೆ ಆರಂಭ.
ನ.26 - ಕೆರೋಡಿ ಸಮೀಪದ ಶಿವನಹಳ್ಳಿ ಕೂಡಿಗೆ ಬಳಿ ಒಂಟಿ ಸಲಗ ಸೆರೆ.
ಡಿಸೆಂಬರ್
ಡಿ.25 - ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ನಾಯಕತ್ವದ ವಿರುದ್ಧ ಹಿಂದುಳಿದ ವರ್ಗಗಳ ಮುಖಂಡರ ಬಂಡಾಯ.
ಡಿ. 26 - ರಾಜ್ಯ ಒಕ್ಕಲಿಗರ ಸಂಘದ ನಿದೇಶಕ ಸ್ಥಾನಗಳ ಚುನಾವಣೆಗೆ ಬಿರುಸಿನ ಪ್ರಚಾರ ಆರಂಭ.
ಡಿ. 29 - ಕೊಣನೂರು ಬಿ.ಎಂ.ಶೆಟ್ಟಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯ ಒತ್ತಾಯದ ಸಲಿಂಗ ವಿವಾಹ ಪ್ರಕರಣ - ಜೈಲು ಸೇರಿದ ಯುವತಿ