ಒಳಪಂಗಡಗಳಿಂದ ಯಾವ ಕ್ಷೇತ್ರದಲೂ ಉನ್ನತಿ ಸಾಧ್ಯವಿಲ್ಲ
ಬೇಲೂರು: ವಿಶ್ವಕ್ಕೆ ಶಾಂತಿ ಮಂತ್ರದ ಸಂದೇಶ ನೀಡಿದ, ವೀರಶೈವ ಧರ್ಮ ಇಂದು ಒಳ ಪಂಗಡದ ಕಾರಣ ಯಾವ ಕ್ಷೇತ್ರದಲ್ಲಿಯೂ ಉನ್ನತಿ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ವೀರಸೊಮೇಶ್ವರ ಶಿವಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಅಂದಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಶೈವ ಧರ್ಮ ಕೆಲವರ ತಪ್ಪು ತಿಳಿವಳಿಕೆಯಿಂದ ಇಂದು ಅಧೋಗತಿ ತಲುಪಿದೆ ಎಂದು ವಿಷಾದಿಸಿದ ಅವರು, ಸಮಾಜ ಸಂಘಟನೆಯಿಂದ ಮಾತ್ರ ಎಲ್ಲ ಕ್ಷೇತ್ರದಲ್ಲಿ ಸ್ಥಾನ ಪಡೆಯಬಹುದು ಎಂದು ಸಲಹೆ ನೀಡಿದರು.
ಅಖಿಲ ಭಾರತ ವೀರಶ್ಯವ ಮಹಾಸಭಾ ಸ್ಥಾಪಿಸಿದ ಹಾನಗಲ್ಲು ಶಿವಯೋಗಿಗಳಾದ ಕುಮಾರಸ್ವಾಮಿಗಳು ಸಮಾಜ ಸಂಘಟನೆ ಮಾಡುವ ದಿಸೆಯಲ್ಲಿ ಕಟ್ಟಿ-ಬೆಳೆಸಿದ ಮಹಾಸಭಾ ಇಂದು ಸಮಾಜ ಕಟ್ಟುವಲ್ಲಿ ಹಿಂದೆ ಬಿದ್ದಿದೆ ಎಂದು ಕಳವಳ ವ್ಯಕ್ತ ಪಡಿಸಿದ ಅವರು, ಅಖಿಲ ಭಾರತ ವೀರಶ್ಯವ ಮಹಾಸಾಭಾದ ಕಾರ್ಯಕರ್ತರು ಸಮಾಜ ಕಟ್ಟುವಲ್ಲಿ ಅತಿಮುಖ್ಯ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು
ದೇವರನ್ನು ಮರೆತ ಮಾನವ: ಮನುಷ್ಯ ದೇವರು ಮತ್ತು ಧರ್ಮವನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದ ಅವರು ಗಾಂಧೀಜಿ ಭಗವಂತನಲ್ಲಿ ಅಪಾರ ಭಕ್ತಿಯನ್ನು ಇಟ್ಟುಕೊಂಡಿದ್ದರು ಎಂದರು. 12 ನೇ ಶತಮಾನದಲ್ಲಿ ವೀರಶೈವ ಧರ್ಮಕ್ಕೆ ಪುನರ್ಜಿವ ನೀಡಿದ ಬಸವಣ್ಣನವರು ಮತ್ತು ಶರಣರು ತಮ್ಮ ಅಚ್ಚ ಕನ್ನಡದಲ್ಲಿ ವಚನಗಳನ್ನು ರಚನೆ ಮಾಡುವ ಮೂಲಕ ವಿಶ್ವಕ್ಕೆ ಅನನ್ಯ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ಬೇಲೂರಿನಲ್ಲಿ ದಸರಾ ಮಹೋತ್ಸವ: ರಂಭಾಪುರಿ ಪೀಠಕ್ಕೆ ನಾವು ಬಂದು 21 ವರ್ಷ ಕಳೆದಿದೆ. ಈ ಅವಧಿಯಲ್ಲಿ ನಾವುಗಳು ಹಾಸನ ಜಿಲ್ಲೆಗೆ ಹೆಚ್ಚಿನ ಭೇಟಿ ನೀಡಿ ಜನರ ಮನದಾಳವನ್ನು ಅರ್ಥ ಮಾಡಿಕೊಂಡಿದ್ದವೆ. ಈ ದಿಸೆಯಲ್ಲಿ ಬೇಲೂರು ಪಟ್ಟಣದಲ್ಲಿ ರಂಭಾಪುರಿ ಮಠದಿಂದ ಜರುಗುವ ವೈಭವದ ದಸರಾ ಮಹೋತ್ಸವ ಕಾರ್ಯಕ್ರಮವನ್ನು ಇಲ್ಲಿಗೆ ನೀಡಲು ಆಲೋಚನೆ ಮಾಡುತ್ತವೆ ಎಂದು ಹೇಳಿದರು.
ವರ್ತಕ ಎ.ಎಸ್.ಅನಂದಪ್ಪ, ಅಖಿಲ ಭಾರತ ವೀರಶೈವ ತಾ. ಘಟಕದ ಅಧ್ಯಕ್ಷ ಕೆ.ಎಸ್.ಲಿಂಗೇಶ್, ಕೆಜೆಪಿ ಮುಖಂಡ ಕೊರಟಿಕೆರೆ ಪ್ರಕಾಶ್, ಬಿ.ಶಿವರುದ್ರಪ್ಪ, ವಿಧಾನ ಪರಿಷತ್ ಸದಸ್ಯ ಮಾಜಿ ಗುರುದೇವ್, ಚಂದ್ರಶೇಖರ್, ವಿರುಪಾಕ್ಷ, ವಿಕ್ರಂಕೌರಿ, ಸಂಜಯ್, ರಾಜಶೇಖರಯ್ಯ, ಕಾಂತರಾಜು, ಪುಪ್ಪೇಗೌಡ, ಅರುಣ್‌ಕುಮಾರ್, ಏಕದಂತ ಮಲ್ಲೇಶ್ ಇದ್ದರು. ಹೆಬ್ಬಾಳು ಹಾಲಪ್ಪ ನಿರೂಪಿಸಿದರು. ಚೇತನ್ ವಂದಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.