ಕೊಬ್ಬರಿ ಧಾರಣೆ ಕುಸಿತ: ತೆಂಗು ಬೆಳೆಗಾರರ ಧರಣಿ
ಅರಸೀಕೆರೆ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ತೀವ್ರ ಇಳಿಕೆಯಾಗಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರ್ಕಾರದ ಗಮನಕ್ಕೆ ತಂದು ನಫೆಡ್ ಖರೀದಿ ಕೇಂದ್ರ ಪುನರಾರಂಭಿಸಬೇಕೆಂದು ತಾಲೂಕು ತೆಂಗು ಬೆಳೆಗಾರರ ಸಂಘ ಹಾಗೂ ರೈತ ಮುಖಂಡರು ಶುಕ್ರವಾರ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ದಿನಬಳಕೆಯ ವಸ್ತುಗಳು ಗಗನಕ್ಕೇರುತ್ತಿದ್ದರೂ ತೆಂಗು ಉತ್ಪನ್ನಗಳ ಬೆಲೆ ದಿನೇ ದಿನೇ ಕುಸಿಯುತ್ತಿದ್ದು ಕಳೆದ 2 ದಶಕಗಳ ಹಿಂದೆ 1 ಕೆ.ಜಿ.ಅಕ್ಕಿಗೆ 3ರೂ.ಇದ್ದಾಗ ಕೊಬ್ಬರಿ ಧಾರಣೆ 40ರು.ಇದ್ದು ಈಗ ಅಕ್ಕಿ ಬೆಲೆ 50 ರು. ಏರಿದ್ದರೂ ಕೆ.ಜಿ.ಕೊಬ್ಬರಿ ಬೆಲೆ ಕೇವಲ 46 ರು. ಇದ್ದು ಇದರಿಂದ ಬೆಳೆಗಾರರ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಅನ್ಯಾಯವನ್ನು ಸರಿಪಡಿಸಲು ಮುಂದಾಗಬೇಕೆಂದರು.
ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ಎಂ.ಸಿ. ವಿಶ್ವನಾಥ್ ಮಾತನಾಡಿ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ತೀವ್ರ ಕುಸಿತದಿಂದ ಬೆಳೆಗಾರರು ಪದೇ ಪದೇ ಆತಂಕ್ಕೆ ಈಡಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಶಾಶ್ವತವಾಗಿ ನಫೆಡ್ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ ಮಾಡುತ್ತಿದೆಯಾದರೂ ಸರ್ಕಾರ ಕಾಟಾಚಾರಕ್ಕೆಂಬಂತೆ ನಫೆಡ್ ಖರೀದಿ ಕೇಂದ್ರ ತೆರೆದು ಗುಣಮಟ್ಟದ ಕೊಬ್ಬರಿಗೆ ಆದ್ಯತೆ ನೀಡದೆ ಗಾತ್ರಕ್ಕೆ ಆದ್ಯತೆ ನೀಡಿ ಅದರಲ್ಲೂ ರೈತರನ್ನು ಶೋಷಣೆ ಮಾಡಿ ಕೆಲವೇ ದಿನಗಳಲ್ಲಿ ನಫೆಡ್ಖರೀದಿ ಕೇಂದ್ರವನ್ನು ಮುಚ್ಚುವ ಮೂಲಕ ರೈತರಿಗೆ ತೊಂದರೆ ನೀಡುತ್ತಿದ್ದು ಇನ್ನು ಮುಂದಾದರೂ ಶಾಶ್ವತವಾಗಿ ಖರೀದಿ ಕೇಂದ್ರ ಆರಂಭಿಸುವ ಮೂಲಕ ರೈತರ ನೆರವಿಗೆ ಧಾವಿಸಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ರೈತ ಮುಖಂಡ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಮಳೆಯ ವೈಫಲ್ಯ, ಅಂತರ್ಜಲದ ಕುಸಿತ ಹಾಗೂ ತೆಂಗಿಗೆ ತಗಲಿರುವ ರೋಗಬಾಧೆಯಿಂದ ಕೊಬ್ಬರಿ ಗಾತ್ರದಲ್ಲಿ ಚಿಕ್ಕದಾಗಿದ್ದು ಅಧಿಕಾರಿಗಳು ಗುಣಮಟ್ಟಕ್ಕೆ ಆದ್ಯತೆ ನೀಡದೆ ಗಾತ್ರಕ್ಕೆ ಆದ್ಯತೆ ನೀಡುವ ಮೂಲಕ ರೈತರನ್ನು ಶೋಷಣೆ ಮಾಡುತ್ತಿದ್ದು ನಫೆಡ್ ಅಧಿಕಾರಿಗಳು ಮಾತ್ರ ಖರೀದಿಗೆ ಗುಣಮಟ್ಟದ ಮಾನದಂಡ ಅನುಸರಿಸುತ್ತೇವೆಂಬ ಹೇಳಿಕೆ ಅವೈಜ್ಞಾನಿಕವಾದುದು. ರೈತರು ಮಾರುಕಟ್ಟೆಗೆ ತಂದ ಎಲ್ಲಾ ಕೊಬ್ಬರಿಯನ್ನು ಖರೀದಿಸಬೇಕೆಂದು ಒತ್ತಾಯಿಸಿದರು.
ಮಾರುಕಟ್ಟೆ ಸಮಿತಿ ಪ್ರಭಾರಿ ಅಧ್ಯಕ್ಷ ಸನಾವುಲ್ಲಾ ಮಾತನಾಡಿ, ನಫೆಡ್ ಖರೀದಿ ಕೇಂದ್ರದವರು ರೈತರಿಂದ ಇದುವರೆಗೆ ಖರೀದಿಸಿದ ಕೊಬ್ಬರಿಯನ್ನು 46 ರು. ಗಳಂತೆ ಮಾರಾಟ ಮಾಡಲು ಹೊರಟಿರುವುದರಿಂದ ಮಾರುಕಟ್ಟೆಯಲ್ಲಿ ಕೊಬ್ಬರ ಧಾರಣೆ ತೀವ್ರ ಇಳಿಮುಖವಾಗಿದ್ದು ಈ ಬಗ್ಗೆ ರೈತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಮುಖ್ಯಮಂತ್ರಿಗಳ ಬಳಿಗೆ ಎ.ಪಿ.ಎಂ.ಸಿ. ಸದಸ್ಯರ ನಿಯೋಗ ಕೊಂಡೊಯ್ದು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ಎಪಿಎಂಸಿ ಸದಸ್ಯ ಮುರುಂಡಿ ಶಿವಯ್ಯ, ಬೆಳಗುಂಬ ಸಿದ್ದಲಿಂಗಯ್ಯ, ಅಜ್ಜಪ್ಪ, ವೆಂಕಟೇಶ್, ದುಮ್ಮೇನಹಳ್ಳಿ ಗಂಗಾಧರ್ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು. ಮನವಿ ಸ್ವೀಕರಿಸಿದ ಎಪಿಎಂಸಿ ಕಾರ್ಯದರ್ಶಿ ಈಶ್ವರಪ್ಪ ಮಾತನಾಡಿ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ನಿರ್ದೇಶಕ ಪರಮೇಶ್ವರಪ್ಪ, ಓಂಕಾರಮೂರ್ತಿ, ವಕೀಲ ಜಗದೀಶ್ ಇದ್ದರು.ವರ್ತಕರ ಸಂಘದ ಅಧ್ಯಕ್ಷ ಗಂಜೀಗೆರೆ ಬಸವರಾಜ್ ರೈತರು ವರ್ತಕರುಗಳಿಗೆ ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.