ಪುರಾತನ ತಾಮ್ರದ ಬಿಲ್ಲೆ, ಪೂಜಾ ಸಾಮಗ್ರಿ ಪತ್ತೆ
ಜಾವಗಲ್: ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇಗುಲದಲ್ಲಿ ಸಂರಕ್ಷಣಾ ಕಾರ್ಯ ನಡೆಯುತ್ತಿದ್ದು, ಗುರುವಾರ ಸಂಜೆ ಕೆಲಸ ಮಾಡುತ್ತಿದ್ದಾಗ 1 ಕುಡಿಕೆ ಸಿಕ್ಕಿದ್ದು, ಈ ಕುಡಿಕೆಯಲ್ಲಿ ಪುರಾತನ ಕಾಲದ ತಾಮ್ರದ ಬಿಲ್ಲೆಗಳು ದೊರೆತಿವೆ. ಸುಮಾರು 234 ತಾಮ್ರದ ಬಿಲ್ಲೆಗಳು 1 ಹಿತ್ತಾಳೆ ಕಳಸ, 1 ಮರದ ಮುಳ್ಳುಹಾವಿಗೆ, ಹಿತ್ತಾಳೆ ಮುಖವಾಡ, ಕಬ್ಬಿಣದ ಖಡ್ಗದ ಹಿಡಿ, 1ಚಿಕ್ಕಕಳಸ ಕಬ್ಬಿಣದ ಹಣತೆಗಳು ಸಿಕ್ಕಿವೆ.
ಈ ಮಾಹಿತಿಯನ್ನು ತಹಸೀಲ್ದಾರ್ ಅವರಿಗೆ ದೂರವಾಣಿ ಮೂಲಕ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ದೇಗುಲ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ತಾಂತ್ರಿಕ ಸಲಹೆಗಾರ ಎಂ.ಎಂ ರಾಯಚೂರು, ಸಹಾಯಕ ಎಂಜಿನಿಯರ್ ಮಾಳಾಪುರ್ ಸದರಿ ವಸ್ತುಗಳ ವೀಕ್ಷಣೆ ಮಾಡಿದರು. ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳ ಸಲಹೆಯನ್ನು ಮಹಜರ್ ಮಾಡಲು ತಿಳಿಸಿದರು.
ಪಿಎಸ್ಐ ಆರೋಕಿಯಪ್ಪ ಮತ್ತು ಸಿಬ್ಬಂದಿ ಮಹಜರ್ ನಡೆಸಿ ಇವುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ತಾಂತ್ರಿಕ ಸಲಹೆಗಾರ ಎಂ.ಎಂ ರಾಯಚೂರು, ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ ಈ ಬಿಲ್ಲೆಯ ಬಗ್ಗೆ ವಿಚಾರಿಸಿದಾಗ ಮೈಸೂರು ವಿಶ್ವವಿದ್ಯಾನಿಲಯದ ಸಂಭಂಧಪಟ್ಟ ವಿಭಾಗ ಮತ್ತು ಎಫಿಗ್ರಪಿ ತಜ್ಞರಿಂದ ತಿಳಿದುಕೊಳ್ಳ ಬೇಕು ಎಂದು ಅವರು ಹೇಳಿದರು.
ಸಹಾಯಕ ಎಂಜಿನಿಯರ್ ಮಾಳಾಪುರ್ ಅವರನ್ನು ಸಂಪರ್ಕಿಸಿದಾಗ ತಮ್ಮ ಸೇವಾ ಅವಧಿಯಲ್ಲಿ ಈ ರೀತಿಯ ಹಳೇಕಾಲದ ಯಾವುದೇ ಬಿಲ್ಲೆಗಳು ದೊರೆತಿಲ್ಲ. ಇದೇ ಮೊದಲ ಸಲ ಈ ರೀತಿ ಬಿಲ್ಲೆಗಳನ್ನು ನೋಡುತ್ತಿರುವುದು ಎಂದು ತಿಳಿಸಿದರು.
ಪಿಎಸ್ಐ ಆರೋಕಿಯಪ್ಪ ಈ ಕುರಿತು ಮಹಜರ್ ನಡೆಸಿ ದೇವಾಲಯದಲ್ಲಿ ಸಿಕ್ಕಿರುವ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ತಹಸೀಲ್ದಾರ್ ಮಾರ್ಗದರ್ಶನದಂತೆ ಅವರ ವಶಕ್ಕೆ ಒಪ್ಪಿಸಲಾಗುವುದೆಂದರು.
ಸ್ಥಳಕ್ಕೆ ಶಾಸಕ ರುದ್ರೇಶಗೌಡ ಭೇಟಿ ನೀಡಿ ದೊರೆತಿರುವ ನಾಣ್ಯಗಳನ್ನು ವೀಕ್ಷಿಸಿದರು. ದೇಗುಲ ವ್ಯಸ್ಥಾಪನಾ ಸಮಿತಿ ಅಧ್ಯಕ್ಷ ಜಾವಗಲ್ ವಸಂತ ಕುಮಾರ್, ಗ್ರಾಪಂ ಮಾಜಿ ಸದಸ್ಯ ನರಸಿಂಹಸ್ವಾಮಿ, ಅರ್ಚಕ ನಾರಾಯಣ ಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ರಾಜೇಗೌಡ, ಕುಮಾರ್ ಮೊದಲಾದವರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.