ವಿದ್ಯಾರ್ಥಿಗಳ ಪ್ರತಿಭಟನೆ ವಾಪಸ್
ಹೊಳೆನರಸೀಪುರ: ಕಳೆದ ಮೂರು ದಿನಗಳಿಂದ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿರುವ ಪ್ರಾಂಶುಪಾಲರನ್ನು ವರ್ಗಾವಣೆಗೊಳಿಸಿ, ಇಲ್ಲವೇ ನಮಗೆ ವರ್ಗಾವಣೆ ಪತ್ರ ಕೊಡಿ ಎಂದು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದ ತಾಲೂಕಿನ ಹಳ್ಳಿಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ-ನಿರ್ದೇಶಕ ಪ್ರಭಾಕರ್ ನಡೆಸಿದ ಮಾತುಕತೆಯ ಫಲವಾಗಿ ಪ್ರತಿಭಟನೆ ಹಿಂತೆಗೆದುಕೊಂಡು ತರಗತಿಗಳಿಗೆ ವಾಪಸ್ಸಾದರು.
ಕಾಲೇಜಿನ ಕೆಲ ವಿದ್ಯಾರ್ಥಿಗಳು ಎಬಿವಿಪಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಪರಿಣಾಮವಾಗಿ
ಉದ್ದೇಶಪೂರ್ವಕವಾಗಿಯೇ ಕಾಲೇಜಿನ ಪ್ರಾಂಶುಪಾಲೆ ಸುಶೀಲಮ್ಮ ಅವರು ವಿದ್ಯಾರ್ಥಿಗಳಿಗೆ ಆಂತರಿಕ ಅಂಕ ನೀಡುವ ಸಂದರ್ಭದಲ್ಲಿ ಕಡಿಮೆ ಅಂಕಗಳನ್ನು ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.
ಕಾಲೇಜಿಗೂ ಸರಿಯಾಗಿ ಬಾರದೆ, ಆಡಳಿತ ಸಮರ್ಪಕವಾಗಿ ನಡೆಸದೇ ಇರುವುದನ್ನು ಪ್ರಶ್ನಿಸಿದ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿ ಕಾಲೇಜಿನ ಪ್ರಾಂಶುಪಾಲೆ ಸುಶೀಲಮ್ಮ ಅವರನ್ನು ಕೂಡಲೇ ವರ್ಗಾವಣೆಗೊಳಿಸುವಂತೆ, ಇಲ್ಲವೇ ತಮಗೆಲ್ಲರಿಗೂ ಒಟ್ಟಿಗೆ ವರ್ಗಾವಣೆ ಪತ್ರ ನೀಡುವಂತೆ ಆಗ್ರಹಿಸಿ ಹಳ್ಳಿಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರು.
ಈ ಮಧ್ಯೆ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿ ಗುರುವಾರ
ವಿದ್ಯಾರ್ಥಿಯೊಬ್ಬ ಕಾಲೇಜಿನ ಆವರಣದಲ್ಲಿಯೇ ಪ್ರಾಂಶುಪಾಲರ ಧೋರಣೆಗಳನ್ನು ವಿರೋಧಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡ ನಡೆದಿತ್ತು.ಇವೆಲ್ಲಾ ಘಟನೆಗಳ ನಂತರ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದ ಮೇರೆಗೆ ಜಂಟಿ
ನಿರ್ದೇಶಕ ಪ್ರಭಾಕರ್ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ಅವರೊಂದಿಗೆ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
15 ದಿನ ರಜೆ: ನಂತರ ಪ್ರಾಂಶುಪಾಲರೊಂದಿಗೂ ಚರ್ಚಿಸಿದ ನಂತರ ಪರಿಸ್ಥಿತಿ ಇನ್ನೂ ಕಗ್ಗಂಟಾಗುವುದನ್ನು ಮನಗಂಡು ಈ ವಿಷಯವನ್ನು ಇಲಾಖೆ ಆಯುಕ್ತರಿಗೆ ಹಾಗೂ ಸರ್ಕಾರಕ್ಕೆ ಪೂರ್ಣ ವರದಿ ನೀಡುವುದಾಗಿ ತಿಳಿಸಿದರು. ಕಡೆಗೆ ಕಾಲೇಜಿನ ಪ್ರಾಂಶುಪಾಲೆ ಸುಶೀಲಮ್ಮ ಅವರು 15 ದಿನಗಳ ಕಾಲ ರಜೆಯ ಮೇಲೆ ತೆರಳಲು ನಿರ್ಧರಿಸಿದ ನಂತರ, ಈ ಅವಧಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಚರ್ಚಿಸಿ ಪ್ರಾಂಶುಪಾಲರನ್ನು ವರ್ಗಾವಣೆಗೊಳಿಸುವ ಕುರಿತಂತೆ ಚಿಂತನೆ ನಡೆಸುವುದಾಗಿ ಜಂಟಿ-ನಿರ್ದೇಶಕ ಪ್ರಭಾಕರ್ ತಿಳಿಸಿದರು. ಆ ನಂತರ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ತರಗತಿಗಳಿಗೆ ತೆರಳಿದರು.
ಇದಕ್ಕೂ ಮುನ್ನ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ-ನಿರ್ದೇಶಕರು ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ಶರತ್ನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ವಿದ್ಯಾರ್ಥಿಗಳು ಯಾವಾಗಲೂ, ಗುಣಾತ್ಮಕ ಚಿಂತನೆಗಳನ್ನು ಮೈಗೂಡಿಕೊಂಡು ಸರಿದಾರಿಯಡೆಗೆ ಚಿಂತನೆ ನಡೆಸುವಂತೆ ಕಿವಿ ಮಾತು ಹೇಳಿ, ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.