ಸಾರಿಗೆ ಬಸ್ಸಲ್ಲೇ ರೈತರ ಉತ್ಪನ್ನ ಸಾಗಾಟ
ಹಾಸನ: ರೈತರು ತಾವು ಬೆಳೆದ ದವಸ, ಧಾನ್ಯಗಳನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಅನುಕೂಲವಾಗುವಂಥ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಆರ್. ಅಶೋಕ್ ಹೇಳಿದರು.
ಹೋಬಳಿ ಮತ್ತು ತಾಲೂಕು ಕೇಂದ್ರಗಳಿಂದ ಬೆಳೆಗಳನ್ನು ಸಾಗಾಣಿಕೆ ಉದ್ದೇಶದಿಂದ ಬಸ್ ಸಂಚಾರ ಆರಂಭಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಕಾರ್ಮಿಕರು ತಾವು ಉಪಯೋಗಿಸುವ ಉಪಕರಣಗಳನ್ನು ಸಾಗಾಣಿಕೆ ಮಾಡಲು ವಿಶೇಷ ಬಸ್ಗಳನ್ನು ಆರಂಭಿಸಲಾಗಿದ್ದು, ಆದೇ ಮಾದರಿಯಲ್ಲಿ ತರಕಾರಿ ಮತ್ತಿತರ ಬೆಳೆಗಳನ್ನು ಸಾಗಿಸಲು ಅನುಕೂಲವಾಗುವ ರೀತಿಯ ಬಸ್ಗಳ ಸಂಚಾರನ್ನು ರಾಜ್ಯಾದ್ಯಂತ ಆರಂಭಿಸಲಾಗುವುದು ಎಂದು ತಿಳಿಸಿದರು.
ಶುಕ್ರವಾರ ಹಾಸನ ತಾಲೂಕು ದುದ್ದ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ಬಸ್ ನಿಲ್ದಾಣ ಆಧುನೀಕರಣಗೊಳಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಬರೀ ಸೀಟುಗಳನ್ನು ಹಾಕಿ ಟಿಕೆಟ್ ನೀಡಿ ಲಾಭ ಮಾಡುವುದೇ ಸಾರಿಗೆ ಸಂಸ್ಥೆ ಉದ್ದೇಶವಲ್ಲ. ರೈತರ ಅನುಕೂಲಕ್ಕೆ ಪೂರಕವಾಗಿಯೂ ಕೆಲಸ ಮಾಡಬೇಕಾಗಿದೆ. ರಾಜ್ಯ ಸಾರಿಗೆ ಸಂಸ್ಥೆ ರಾಜ್ಯದ ಪ್ರಗತಿಗೆ ಪೂರಕವಾಗಿಯೂ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ನಾಲ್ಕು ಮುಕ್ಕಾಲು ವರ್ಷದದಲ್ಲಿ ಚಾಲಕರು, ನಿರ್ವಾಹಕರು, ಎಂಜಿನಿಯರ್ಗಳು ಸೇರಿದಂತೆ 30 ಸಾವಿರ ಕನ್ನಡಿಗರಿಗೆ ಉದ್ಯೋಗ ನೀಡಿದೆ. ಐಟಿ, ಬಿಟಿಯವರಂತೆ ಕನ್ನಡಿಗರ ಭೂಮಿಯಲ್ಲಿ ಕೈಗಾರಿಕೆಗಳನ್ನು ಆರಂಭಿಸಿ ಬೇರೆ ರಾಜ್ಯ, ದೇಶದವರಿಗೆ ಉದ್ಯೋಗ ನೀಡುತ್ತಿಲ್ಲ. ಹಾಸನ ನಗರದಲ್ಲಿ ಇಂಡಿಯಾ ದೊಡ್ಡದಾದ 23 ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಅತ್ಯಾಧುನಿಕ ಮಾದರಿಯ ಚಾಲಕರ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದರು.
ಮಂಡ್ಯ ಜಿಲ್ಲೆಯ ಮಳವಳ್ಳಿ, ಕೋಲಾರ ಜಿಲ್ಲೆ ಮಾಲೂರಿನಲ್ಲಿ ಮತ್ತು ಚಿಕ್ಕಮಗಳೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ಚಾಲನೆ ತಾಂತ್ರಿಕತೆ ಬಗ್ಗೆ ತರಬೇತಿ ನೀಡುವ ಕೇಂದ್ರಗಳನ್ನು ಮತ್ತು 30 ಕೋಟಿ ರು. ವೆಚ್ಚದಲ್ಲಿ ಧಾರವಾಡ ಮತ್ತು ಬೆಂಗಳೂರಿನಲ್ಲಿ ಖಾಸಗಿ ವರಿಗೆ ಉಚಿತವಾಗಿ ಚಾಲನೆ ತರಬೇತಿ ನೀಡಿ, ಚಾಲನಾ ಪರವಾನಗಿ ಪತ್ರವನ್ನು ನೀಡುವ ಸಂಸ್ಥೆಯನ್ನು ಆರಂಭಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಸಾರಿಗೆ ವಿಚಾರದಲ್ಲಿ ಕರ್ನಾಟಕ ಗುಜರಾತ್ಗಿಂದ 10 ವರ್ಷ ಮುಂದಿದೆ. ರಾಜ್ಯಾದ್ಯಂತ 23 ಸಾವಿರ ಸಾರಿಗೆ ಸಂಸ್ಥೆ ಬಸ್ಗಳು ಸಂಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಪಡಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಹೆಚ್ಚು ಬಸ್ಗಳನ್ನು ಓಡಿಸಿ: ಎಚ್.ಡಿ.ರೇವಣ್ಣ ಮಾತನಾಡಿ, ಜಿಲ್ಲಾದ್ಯಂತ ಹೆಚ್ಚುವರಿ ಬಸ್ಗಳನ್ನು ಓಡಿಸಬೇಕಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ರೈತರಿಗೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ತಾಂಡವಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 29 ಕೋಟಿ ರು. ನೀಡಬೇಕೆಂಬ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯ್ತಿಯಿಂದ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೂಡಲೇ ಅಳವಡಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕಾಗಿದ್ದು, ಅಶೋಕ್ ಅವರು ಗಮನಹರಿಸಬೇಕೆಂದು ಆಗ್ರಹಿಸಿದರು.
ಕೆರೆ, ಕಟ್ಟೆಗಳ ಹುಳೆತ್ತಲು ಈಗಿರುವ ನಿಯಮಗಳ ಪ್ರಕಾರ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಉದ್ಯೋಗ ಖಾತ್ರಿ ಯೋಜನೆಯ ನಿಯಮಗಳನ್ನು ಸಡಿಲಿಸಬೇಕಾಗಿದ್ದು, ದುದ್ದ ರೈಲ್ವೆ ನಿಲ್ದಾಣದಲ್ಲಿ ರೈಲುಗಳ ನಿಲುಗಡೆಯನ್ನು ಮಾಡಿದರೇ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಎಂಎಲ್ಸಿ ಪಟೇಲ್ ಶಿವರಾಂ, ಮಾಜಿ ಶಾಸಕ ಬಿ.ವಿ.ಕರೀಗೌಡ, ಜಿಪಂ ಸದಸ್ಯ ಲಕ್ಷಣಗೌಡ, ತಾಪಂ ಸದಸ್ಯರಾದ ರಾಜೇಗೌಡ, ಹನುಮೇಗೌಡ, ಗ್ರಾಪಂ ಅಧ್ಯಕ್ಷ ದಿನೇಶ್, ಜಿಪಂ ಮಾಜಿ ಸದಸ್ಯ ಸುನಂದ, ಸಾರಿಗೆ ಸಂಸ್ಥೆ ಹಾಸನ ಉಪ ವಿಭಾಗಾಧಿಕಾರಿ ವೆಂಕಟೇಶಪ್ಪ, ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್, ಎಸ್ಪಿ ಅಮಿತ್ಸಿಂಗ್, ಜೆಡಿಎಸ್ ಯುವ ಮುಖಂಡ ವೇಣು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.