6 ರಿಂದ 11 ರವರೆಗೆ ಸುತ್ತೂರು ಧಾರ್ಮಿಕ, ಸಾಂಸ್ಕೃತಿಕ ಸಂಗಮ ಜಾತ್ರೆ
ಹಾಸನ: ಸುತ್ತೂರಿನಲ್ಲಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾತ್ರೆ ಫೆ 6 ರಿಂದ 11 ರವರೆಗೆ ನಡೆಯಲಿದ್ದು, ಹಾಸನ ಜಿಲ್ಲೆಯಿಂದ ಬರುವ ಭಕ್ತರಿಗೆ ಊಟ, ವಸತಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಾತ್ರಾ ಮಹೋತ್ಸವ ಸಮಿತಿ ಸಂಚಾಲಕ ಪ್ರೊ. ಸದಾನಂದ ತಿಳಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಠವನ್ನು 1050 ವರ್ಷಗಳ ಹಿಂದೆಯೇ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿ ಸ್ವಾಮೀಜಿ ಸ್ಥಾಪಿಸಿದ್ದು, ಇಲ್ಲಿಯವರೆಗೆ 23 ಜಗದ್ಗುರುಗಳು ಶ್ರೀಪೀಠ ಆಲಂಕರಿಸಿದ್ದಾರೆ. ಈಗ 24 ನೇ ಜಗದ್ಗುರುಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸೇವಾಕಾರ್ಯಗಳು ನಡೆಯುತ್ತಿದ್ದು, ಜಾತ್ರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಲಾಗುವುದು ಎಂದು ಹೇಳಿದರು. ಧಾರ್ಮಿಕತೆ ಜೊತೆಯಲ್ಲೇ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸಲು ಸಹ ಉದ್ದೇಶಲಾಗಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಹ, ದನಗಳ ಜಾತ್ರೆ, ವಸ್ತು ಪ್ರದರ್ಶನ, ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಕ್ರಮ, ಕೃಷಿ ಮೇಳ, ಭಜನಾ ಮೇಳ, ಕುಸ್ತಿ ಪಂದ್ಯಾವಳಿ, ಕ್ರಿಕೆಟ್ ಪಂದ್ಯಾವಳಿ, ದೇಶೀಯ ಆಟೋಟಗಳ ಸ್ಪರ್ಧೆ, ಸಾಂಸ್ಕೃತಿಕ ಮೇಳ, ಮಹಿಳೆಯರಿಗಾಗಿ ದೀಪಾಂಲಕಾರ, ಸೋಬಾನೆಪದ, ರಂಗೋಲಿ, ಚಿತ್ರಕಲೆ ಸ್ಪರ್ಧೆ, ಗಾಳಿ ಪಟ ಸ್ಪರ್ಧೆ ಮತ್ತು ಹಳೆಕಾರುಗಳ ಪ್ರದರ್ಶನ ಏರ್ಪಡಿಸಲಾಗಿದೆ.ಮಹೋತ್ಸವ ಸಮಿತಿಯ ಸಂಚಾಲಕ ಡಾ. ಸುರೇಶ್, ಸಕಲೇಶಪುರ ಜೆಎಸ್ಎಸ್ ಡಿಎಡ್ ಕಾಲೇಜಿನ ಆಡಳಿತಾಧಿಕಾರಿ ನಾಗರಾಜ್ ಇತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.