ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ, ತರಾಟೆ ತೆಗೆದುಕೊಂಡ ಗ್ರಾಮಸ್ಥರು
ರಾಮನಾಥಪುರ: ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ತಾಲೂಕಿನ ನಾನಾ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ತಹಸೀಲ್ದಾರ್ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ.ಮಂಜು, ಈ ಜನಸ್ಪಂದನಾ ಸಭೆಯಿಂದಾಗಿ ಜನಸಾಮಾನ್ಯರು ಅಧಿಕಾರಗಳೊಂದಿಗೆ ಬೆರೆತು ಕಷ್ಟ-ಸುಖ ಹೇಳಿಕೊಳ್ಳ ಬಹುದಲ್ಲದೆ, ಅಧಿಕಾರಿಗಳಿಂದ ಸರ್ಕಾರ ನೀಡುವ ಸವಲತ್ತು ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಆದ್ದರಿಂದ ಪ್ರತಿ ನಾಗರಿಕರೂ ಈ ಸಭೆಯಲ್ಲಿ ಭಾಗವಹಿಸಿ ಅವರ ನೈತಿಕ ಹಕ್ಕನ್ನು ಪಡೆಯಬಹುದು ಎಂದೇಳಿ ತುರ್ತು ಕೆಲಸದ ನಿಮಿತ್ತ ಶಾಸಕರು ತರಾತುರಿಯಲ್ಲಿ ನಿರ್ಗಮಿಸಿದರು.
ನಂತರ ಮಕ್ಕಳ ಅಭಿವೃದ್ಧಿ ಅಧಿಕಾರಿ ಮಲ್ಲೇಶಗೌಡ ಅವರು ಕುಡಿಯುವ ಶುದ್ಧ ನೀರಿನ ಮತ್ತು ಸ್ವಚ್ಛತೆ ಕುರಿತು ಮಾತನಾಡಲು ಆರಂಭಿಸಿದರು. ಆಗ ರಾಜ್ಯ ರೈತ ಸಂಘ ತಾ. ಅಧ್ಯಕ್ಷ ಎಚ್.ಇ.ಜಗದೀಶ್ ಮಾತನಾಡಿ, ಸ್ವಾಮಿ... ಅಧಿಕಾರಿಗಳೆ ಬರೀ ಸರ್ಕಾರದಿಂದ ದೊರೆಯಬಹುದಾದ ಸವಲತ್ತುಗಳನ್ನೇ ಹೇಳುತ್ತಿದ್ದೀರಿ ಹೊರತು ಸಾರ್ವಜನಿಕರ ಅಹವಾಲು ಕುರಿತು ನಾಗರಿಕರೊಂದಿಗೆ ಎಂದಾದರೂ ಚರ್ಚಿಸಿದ್ದೀರಾ. ಈಗ ನೀವು ಹೇಳಿದಂತೆ ಶುದ್ಧ ನೀರು, ಈ ಶುದ್ಧ ನೀರು ಎಂದರೆ ನಿಮ್ಮ ಮುಂದೆ ಇರಿಸಿರುವ ಬಿಸ್ಲೇರಿ ಬಾಟಲಿನಂತೆ ಪ್ರತಿ ಸಾರ್ವಜನಿಕರು ಶುದ್ಧ ನೀರನ್ನು ಕುಡಿಯುತ್ತಾರೆಂದು ಭಾವಿಸಿದ್ದೀರಾ ಖಂಡಿತಾ ಇಲ್ಲ.
ಶುದ್ಧೀಕರಣ ಹೊಂದಿಲ್ಲದೆ ಇಷ್ಟು ವರ್ಷ ಇದೇ ಕಲುಷಿತ ನೀರು ಕುಡಿದು ಜನರು ಬದುಕುತ್ತಿದ್ದಾರೆ ಇಲ್ಲಿನ ಜನತೆ. ಇನ್ನು ಸ್ವಚ್ಛತೆ ಎಂಬುದು ಬಹಳ ದೂರದ ಮಾತು.
ದಿನವಿಡೀ ನರಕಯಾತನೆ: ಏಕೆಂದರೆ ಇದುವರೆಗೂ ಇಲ್ಲಿನ ಒಂದೇ ಒಂದು ಚರಂಡಿಗಳಲ್ಲೂ ಸ್ವಚ್ಛತೆ ಇಲ್ಲ. ಪಟ್ಟಣದ ಯಾವ ಬೀದಿಗೆ ಕಾಲಿಟ್ಟರೂ ಮೂಗಿಗೆ ಬೀರುವ ಚರಂಡಿಗಳ ದುರ್ನಾತ ಸಹಿಸುತ್ತಿರುವ ನಾಗರಿಕರಿಗೆ ದಿನವಿಡೀ ನರಕಯಾತನೆಯೇ ಸರಿ ಎಂದು ಖಂಡಿಸಿದರು. ಇನ್ನೂ ನ್ಯಾಯ ಬೆಲೆ ಅಂಗಡಿಗಳಲ್ಲಿ ದೊರಕುವ ಅಕ್ಕಿ ಪ್ರತಿ ಕೆ.ಜಿ.ಗೆ 3 ರು. ಎಂದು ಹೇಳಲಿಕ್ಕೆ ಅಷ್ಟೇ. ಆದರೆ ತಾಲೂಕಿನ ಪ್ರತಿಯೊಂದು ನ್ಯಾಯ ಬೆಲೆ ಅಂಗಡಿಗಳಲ್ಲಿ ಇದುವರೆಗೂ ಪ್ರತಿ ಕಾರ್ಡ್‌ಗೆ ಕೊಡುವ ಕೆ.ಜಿ. ಅಕ್ಕಿ ಬೆಲೆ 3.25 ಪೈಸೆಯಂತೆ ವಸೂಲಿ ಮಾಡಲಾಗುತ್ತಿದ್ದು, ತಾಲೂಕಿಗೆ ಪ್ರತಿ ತಿಂಗಳೂ 2 ಸಾವಿರ ಕ್ವಿಂಟಾಲ್ ಪಡಿತರ ಆಹಾರ ಪೂರೈಕೆಯಾಗುತ್ತಿದೆ. ಅರಕಲಗೂಡು ತಾಲೂಕಿನಲ್ಲೇ ಬಹುತೇಕ ನ್ಯಾಯ ಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಸ್ಕೇಲ್ ಮತ್ತು ಹೊಸದಾಗಿ ಲೀಟರ್‌ಗಳನ್ನು ಅಳವಡಿಸುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಪಡಿತರ ಕಾರ್ಡ್‌ಗೆ ನೀಡುವ ಆಹಾರ ಪದಾರ್ಥಗಳ ತೂಕ ವ್ಯತ್ಯಾಸ ಕಂಡುಬರುತ್ತಿದ್ದ ಇದರಿಂದ ಜನಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಕುಂಟು ನೆಪ ಹೇಳಿ: ಕೆಲವು ಅಮಾಯಕರಿಗೆ ನಿಮ್ಮ ಪಡಿತರ ಕಾರ್ಡ್‌ನಲ್ಲಿ ಕುಟುಂಬ ಸದಸ್ಯರ ಫೋಟೋ ಇಲ್ಲ ಹಾಗಾಗಿ ಪೋಟೋ ಇರುವ ಸದಸ್ಯರಿಗೆ ಮಾತ್ರ ಆಹಾರ ಪದಾರ್ಥ ನೀಡುವಂತೆ ಅಧಿಕಾರಿಗಳಿಂದ ಆದೇಶವಾಗಿದೆ ಎಂದು ಕುಂಟು ನೆಪ ಹೂಡಿ ಸರಿಯಾಗಿ ಆಹಾರ ಪದಾರ್ಥ ನೀಡುತ್ತಿಲ್ಲ. ಇದು ಹೀಗೆ ಮುಂದುವರಿದರೆ ಬಡ ರೈತರ ಮತ್ತು ಜನಸಾಮಾನ್ಯರ ಗತಿ ಏನು ಈ ಅಕ್ರಮಗಳಿಗೆ ಹಿರಿಯ ಅಧಿಕಾರಿಗಳು ಅಂತ್ಯ ಹಾಡುವುದು ಯಾವಾಗ ಎಂದು ಪ್ರಶ್ನಿಸಿದರು. ಪಟ್ಟಣ ನಿವಾಸಿ ಮೋಹನ್ ಮಾತನಾಡಿ ರಾಮನಾಥಪುರ ದೇವಾಲಯ ಮತ್ತು ಬ್ರಾಹ್ಮಣರು ವಾಸಿಸುವ ಸ್ಥಳದಲ್ಲಿ ಬಾರ್ ತೆರೆಯಲು ಪರವಾನಗಿ ನೀಡಿರುವ ಬಗ್ಗೆ ವಿಚಾರಿಸಲು ಇಲ್ಲಿನ ಪಿಡಿಒ ಕಚೇರಿಗೆ ಹೋದರೆ ಉಡಾಫೆಯಿಂದ ಮಾತನಾಡಿದ್ದಲ್ಲದೆ, ಆಚೆಗೆ ತಳ್ಳಿಸುವುದಾಗಿ ಬೆದರಿಕೆ ಹಾಕುವ ಈ ಪಿಡಿಓ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಜನತೆಯ ಸಂಕಷ್ಟ ಕೇಳುವವರಾರು: ಪಂಚಾಯಿತಿ ಸದಸ್ಯ ಹಿರಣಯ್ಯ, ಆಧಾರ್ ಕಾರ್ಡ್ ಅರ್ಜಿಗಾಗಿ ದಿನನಿತ್ಯ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅರಕಲಗೂಡಿಗೆ ಅಲೆಯುತ್ತಿರುವ ತಾಲೂಕಿನ ಜನತೆಯ ಸಂಕಷ್ಟ ಕೇಳುವವರಾರು ಆಯಾ ಹೋಬಳಿಗಳಲ್ಲಿ ಆಧಾರ್ ಕಾರ್ಡ್ ಅರ್ಜಿ ದೊರೆಯುವಂತೆ ಮನವಿ ಮಾಡಿದರು.
ಮತ್ತೆ ಕೆಲ ಸಾರ್ವಜನಿಕರು ನಿತ್ಯ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ತಡೆಯಲು ವಿಫಲವಾಗಿರುವ ಅರಣ್ಯ ಇಲಾಖೆ ಕಂದಾಯ, ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದರು. ಜನಸಾಮಾನ್ಯರ ಅಹವಾಲನ್ನು ಸಂಯಮದಿಂದ ಆಲಿಸಿದ ತಾಲೂಕು ದಂಡಾಧಿಕಾರಿ ಜಗದೀಶ್ ಮಾತನಾಡಿ ಇನ್ನು ಮಂದೆ ತಾಲೂಕಿನ ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಸ್ಕೇಲ್, ಸೀಮೆಎಣ್ಣೆಗೆ ಹೊಸ ಲೀಟರ್ ಅಳವಡಿಸುವಂತೆ ಪಡಿತರ ಕಾರ್ಡ್‌ದಾರರಿಗೆ ಪ್ರತಿ ಕೆ.ಜಿ.ಅಕ್ಕಿಗೆ 3 ರೂ ಪಡೆಯುವಂತೆ ಮತ್ತು ಪಡಿತರ ಆಹಾರ ಪದಾರ್ಥ ಪಡೆದ ಗ್ರಾಹಕರಿಗೆ ಬಿಲ್ ಪಾವತಿಸುವಂತೆ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಗೂ ಆದೇಶಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಿವರಾಂ ಸೂಕ್ತ ವಿಚಾರಣೆ ನಡೆಸಿ ರಾಮನಾಥಪುರ ಪಿಡಿಓ ವಿಚಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ಗ್ರಾಪಂ ಅಧ್ಯಕ್ಷೆ ಸದಸ್ವತಿ ನಾಗೇಗೌಡ ಉಪಾಧ್ಯಕ್ಷ ಎಂ.ಎಚ್.ಕೃಷ್ಣಮೂರ್ತಿ, ಸದಸ್ಯ ರಾಮೇಗೌಡ, ಡಿ.ಎಚ್.ಪ್ರಭಾಕರ್, ಕೆಂಚಯ್ಯ, ನಿಂಗೇಗೌಡ ಲಲಿತಾಕುಮಾರ್ ಇತರರು ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.