ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಿವೇಶನ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿಯಮ ಪಾಲಿಸದ ಅಧಿಕಾರಿಗಳು: ಲಕ್ಕೂರು

Parashurama
Updated On : 17 Feb 2013, 12:52 pm

ಹೊಳೆನರಸೀಪುರ: ತಾಲೂಕಿನಲ್ಲಿ ವಸತಿ ಯೋಜನೆಯಡಿಯಲ್ಲಿ ಹಂಚಲಾಗುತ್ತಿರುವ ನಿವೇಶನಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ಕಾರದ ನೀತಿ ನಿಯಮಾವಳಿ ಗಾಳಿಗೆ ತೂರಲಾಗಿದೆ. ಇಲ್ಲಿನ ಗ್ರಾಪಂ ಪಿಡಿಓಗಳು, ತಾಪಂ ಕಾರ್ಯನಿರ್ವಾಹಣಾಧಿಕಾರಿ, ಶಾಸಕ ಎಚ್.ಡಿ.ರೇವಣ್ಣ ಮೌಖಿಕ ಆದೇಶದಂತೆ ಶಾಸಕರ ಹಿಂಬಾಲಕರನ್ನು ಮಾತ್ರ ಪಟ್ಟಿಗೆ ಸೇರಿಸಿ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಲಾಗುತ್ತಿದೆ ಎಂದು
ತಾಪಂ ಮಾಜಿ ಅಧ್ಯಕ್ಷ ಲಕ್ಕೂರು ಬಸವರಾಜು ದೂರಿದ್ದಾರೆ.
 ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಶಾಸಕ ಎಚ್.ಡಿ.ರೇವಣ್ಣ ಆಣತಿಯಂತೆ ಅವರ ಹಿಂಬಾಲಕರು, ಜೆಡಿಎಸ್ ಕಾರ್ಯಕರ್ತರು ಮೊದಲಾದವರನ್ನು ವಸತಿ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಿದ್ದು, ಮನೆಯಿಲ್ಲದ ನಿಜವಾದ ಅರ್ಹ ಫಲಾನುಭವಿಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.  ಶಾಸಕ ರೇವಣ್ಣ ತಮ್ಮ ಕ್ಷೇತ್ರದ ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಮೊದಲಾದ ಪ್ರಮುಖ ಇಲಾಖೆಗಳಲ್ಲಿನ ಅಧಿಕಾರಿಗಳ ಮೂಲಕ, ಇನ್ನಿಲ್ಲದಂತೆ ಕಾನೂನು ಬಾಹಿರ ಕೆಲಸಗಳನ್ನು ಮಾಡಿಸುತ್ತಿರುವಂತೆಯೇ, ತಾಲೂಕಿನ ವಸತಿ ರಹಿತ ಬಡವರಿಗೆ ಸೂರು ಕಲ್ಪಿಸುವ ಯೋಜನೆಯಲ್ಲೂ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.  ವಸತಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಯ ನಿಯಮದಂತೆ ಗ್ರಾಮ ಸಭೆಯಲ್ಲಿ ಆಯ್ಕೆಗೊಂಡು ಗ್ರಾಪಂ ಸಭೆಯಲ್ಲಿ ಅನುಮೋದನೆಯಾಗಬೇಕಿದೆ.
  ಈ ಪ್ರಕ್ರಿಯೆಯಲ್ಲಿ ನಡೆವ ಫಲಾನುಭವಿಗಳ ಪಟ್ಟಿಯಲ್ಲಿ ಲೋಪದೋಷವಿದ್ದರೆ, ಸರ್ಕಾರದ ಮಾರ್ಗಸೂಚಿ ಮಾನದಂಡ ನೀತಿ ನಿಯಮಗಳ ಪಾಲನೆಯಾಗದಿದ್ದರೆ ಅದನ್ನು ಸರಿಪಡಿಸಲು ನಿರ್ದೇಶಿಸಬೇಕಾದ್ದು ಶಾಸಕರ ಅಧ್ಯಕ್ಷತೆಯ ಜಾಗೃತ ದಳದ ಸಮಿತಿ ಕೆಲಸವಾಗಿದೆ.
 ಆದರೆ ಇಲ್ಲಿನ ಅಧಿಕಾರಿಗಳು ಎಲ್ಲ ಬಿಟ್ಟು ಶಾಸಕರು ತಮ್ಮ ಹಿಂಬಾಲಕರ ಮೂಲಕ ಮಾಡಿಸಿರುವ ಪಟ್ಟಿಯನ್ನು ಗ್ರಾಪಂ ಸಭೆಯಲ್ಲಿ ಅನುಮೋದನೆ ಮಾಡಿದಂತೆ ಮಾಡಿ, ತರಾತುರಿಯಲ್ಲಿ ಕಾನೂನಿನ ಕಣ್ಣಿಗೆ ಮಣ್ಣೆರಚಿ ಕಾನೂನು ಬಾಹಿರವಾಗಿ ತಮ್ಮ ಹಿಂಬಾಲಕರನ್ನು ವಸತಿ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಲಕ್ಕೂರು ಬಸವರಾಜ್ ಆಕ್ಷೇಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement