ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಈ ರಥ 10 ವರ್ಷದಿಂದ ಅನಾಥ!

Parashurama
Updated On : 17 Feb 2013, 11:47 am

ಹೊಳೆನರಸೀಪುರ: ದಾನ ಕೊಡುವವರೂ ಕೇಳ್ಲಿಲ್ಲ.. ಇಸ್ಕೊಂಡವರಿಗೂ ಬೇಕಿಲ್ಲ... ಹೀಗಾಗಿ ನಾಡಿನ ಪ್ರಸಿದ್ಧ ಮಠಗಳಲ್ಲೊಂದಾದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಔದಾರ್ಯಪೂರ್ವಕವಾಗಿ ನೀಡಿದ ಸುಂದರ ರಥ, ನೀಡಿ ಹತ್ತು ವರ್ಷಗಳಾಗುತ್ತಾ ಬಂದರೂ ಒಮ್ಮೆಯೂ ಬಳಕೆಯಾಗದೇ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಎದುರಿನ ಬೀದಿಯಲ್ಲಿ ಅನಾಥವಾಗಿ ನಿಂತಿದೆ.
ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶರಾಗಿದ್ದ ದಿ.ಬಾಲಗಂಗಾಧರನಾಥ ಸ್ವಾಮೀಜಿಯವರ ಔದಾರ್ಯತೆಯಿಂದ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಕೊಡುಗೆಯಾಗಿ  ನೀಡಿದ ರಥವು, 10 ವರ್ಷ ತುಂಬುತ್ತಾ ಬಂದರೂ ಒಮ್ಮೆಯೂ ಇಲ್ಲಿನ ದೇವಾಲಯದಲ್ಲಿ ಬಳಕೆಯಾಗದೆ, ಬೇರೆಯ ದೇವಾಲಯದ ಬಳಕೆಗೂ ನೀಡದೆ, ಇನ್ನಿಲ್ಲದ ಪದ್ಧತಿ ಹಾಗೂ ದೋಷಗಳನ್ನು ಮುಂದಿಟ್ಟುಕೊಂಡು ಬಳಕೆ ಆಗದೇ ಅವಸಾನದ ಅಂಚಿಗೆ ಬಂದು ದೇವಾಲಯ ಎದುರು ಬೀದಿಯ ಮಧ್ಯದಲ್ಲಿ ಕೇಳುವವರಿಲ್ಲದೇ, ನೋಡುವವರಿಲ್ಲದೇ ತಬ್ಬಲಿಯಾಗಿ ನಿಂತಿದೆ.
ವಾಸ್ತು ದೋಷ:  ಚುಂಚನಗಿರಿಯ ಶ್ರೀಗಳೇನೋ ಇಲ್ಲಿನ ದೇವಾಲಯಕ್ಕೆ ರಥವನ್ನು ಕೊಡುಗೆಯಾಗಿ ನೀಡಿದ್ದೂ ಅಯಿತು. ರಥವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಿಯೂ ಆಯಿತು. ಆದರೆ ಐತಿಹಾಸಿಕ ಹಿನ್ನೆಲೆಯುಳ್ಳ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆಗಮಿಕರು ಹಾಗೂ ಪಂಡಿತರು, ಈ ರಥವು ವೈಖಾನಸ ಆಗಮೋಕ್ತವಾಗಿ ಇಲ್ಲ, ಹಾಗೂ ವಾಸ್ತು ದೋಷವಿದೆ ಎಂದು ಎಂದು ಯಾವಾಗ ಯಾರ ಮುಂದೆ ತೀರ್ಮಾನಿಸಿದರೋ ಅಂತೂ ಈ ಪಂಡಿತರ ತೀರ್ಮಾನದ ಫಲವಾಗಿ ರಥವು ಅಂದಿನಿಂದಲೂ ಶಾಪಗ್ರಸ್ಥವಾಯಿತು.
ಒಂದು ಗುಂಪು ವಿರೋಧ: ಒಮ್ಮೆ ಈ ರಥವನ್ನು ಪಟ್ಟಣದಲ್ಲೇ ಇರುವ ಇನ್ನೊಂದು ದೇವಾಲಯದ ಉತ್ಸವಕ್ಕಾದರೂ ಬಳಕೆಯಾಗಲಿ ಎಂದು ಪಟ್ಟಣದ ಪ್ರಮುಖರಲ್ಲಿ ಕೆಲವರು ಈ ರಥವನ್ನು ಕೊಂಡೊಯ್ದ ಸಂದರ್ಭದಲ್ಲಿ ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿನ ಒಂದು ಪಂಡಿತರ ಗುಂಪು ಇದನ್ನು ತೀವ್ರವಾಗಿ ಪ್ರತಿಭಟಿಸಿ, ಪೊಲೀಸರಿಗೂ ದೂರು ನೀಡಿ ರಂಪಾಟ ಮಾಡಿ, ಮರಳಿ ರಥವನ್ನು ದೇವಾಲಯದ ಬಳಿ ನಿಲ್ಲಿಸಲಾಯಿತು.
 ವಾಸ್ತು ದೋಷ ಮುಂದಿಟ್ಟುಕೊಂಡು ರಥದ ಬಳಕೆ ಮತ್ತೆ ಕೈಬಿಡಲಾಯಿತು. ಇಲ್ಲಿ ಪ್ರಶ್ನೆಯೆಂದರೆ ಜಗತ್ತಿನ ಎಲ್ಲ ದೋಷಗಳಿಗೂ, ಯಾವುದೇ ವಾಸ್ತುದೋಷಕ್ಕೂ ಪರಿಹಾರವಿರುವಾಗ, ಈ ದೋಷಕ್ಕೆ ಪರಿಹಾರ ದಶಕಗಳೂ ಕಳೆದರೂ ಇಲ್ಲವಾಯಿತೇಕೆ ಎಂಬುದು ಪ್ರಜ್ಞಾವಂತರ ಪ್ರಶ್ನೆ.
 ತಾನೂ ಬಳಸಲಿಲ್ಲ, ಬೇರೆಯವರೂ ಬಳಸಲು ಬಿಡಲಿಲ್ಲ ಎಂಬಂತಾಗಿ, ಯಾರಿಗೂ.. ಎಲ್ಲಿಗೂ ಸಲ್ಲದೇ ಒಂದು ಸುಂದರ ರಥವು ಬಳಕೆಯೇ ಆಗದೇ, ಅದರ ನಿರ್ಮಾಣದ ಉದ್ದೇಶವೇ ಈಡೇರದೇ ನಿಂತಲ್ಲೇ ಹಾಳಾಗಿರುವ ಸ್ಥಿತಿಯಿಂದಾಗಿ, ನಮ್ಮಲ್ಲಿ ಇನ್ನೂ ಪ್ರಜ್ಞಾವಂತಿಕೆ ಎಂಬುದು ಉಳಿದಿದೆಯೇ, ಶಾಸ್ತ್ರ ಸಂಪ್ರದಾಯಗಳ ಗೊಡ್ಡು ಆಚರಣೆಯಲ್ಲಿ ನಾವು ಯಾರನ್ನು, ಯಾವುದನ್ನು ದೂರ ಮಾಡಿ ಏನನ್ನು ಸಾಧಿಸಲು ಹೊರಟಿದ್ದೇವೆ ಎಂಬುದನ್ನು ಪಂಡಿತರಾದವರು ಹಾಗೂ ಸಂಬಂಧಿಸಿದ ಇಲಾಖೆಯ ಜವಾಬ್ದಾರಿ ಹೊತ್ತ ಅಧಿಕಾರಿಗಳು ತಮ್ಮಲ್ಲಿ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
- ಎಚ್.ಡಿ.ಗುರುಪ್ರಸಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement