ಬೇಲೂರು: ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಅಂಗವಿಕಲರು ಸಮಾಜದಲ್ಲಿ ಅಭ್ಯುದಯ ಹೊಂದಬೇಕು ಎಂದು ಶಿವಮೊಗ್ಗ ಜಿಲ್ಲಾ ಅಂಗವಿಕಲರ ಗೌರವ ಕಾರ್ಯದರ್ಶಿ ವೆಂಕಟರಮಣ ತಿಳಿಸಿದರು.
ತಾಲೂಕು ಅಂಗವಿಕಲರ ಸಂಘದಿಂದ ಬುಧವಾರ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರ ಅಂಗವಿಕಲರ ಕಲ್ಯಾಣಕ್ಕೆಂದು ಶಾಸಕರ ಮತ್ತು ಸಂಸದರ ನಿಧಿಯಾಗಿ 10 ಲಕ್ಷ ರು. ಗಳನ್ನು ಮೀಸಲಿಟ್ಟಿದೆ.
ಇದನ್ನು ಪಡೆದುಕೊಳ್ಳಲು ಅಂಗವಿಕಲರು ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ. ಸ್ಥಳೀಯ ಸಂಸ್ಥೆಗಳು ತಮ್ಮ ಅನುದಾನದಲ್ಲಿ ಶೇ.3 ರಷ್ಟು ಹಣವನ್ನು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕಾಗಿದೆ.
ಅಲ್ಲದೆ ನಾನಾ ವಸತಿ ಯೋಜನೆಗಳಲ್ಲಿ ಮನೆಗಳನ್ನು ಅಂಗವಿಕಲರಿಗೆ ಮೀಸಲಿಡ ಬೇಕಾಗಿದ್ದು ಇವೆಲ್ಲವನ್ನು ಪಡೆದುಕೊಳ್ಳಬೇಕಾಗಿರುವುದು ಅಂಗವಿಕಲರ ಹಕ್ಕಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಹಾಗೂ ವೇಲಾಪುರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಂ.ದಯಾನಂದ್ ಮಾತನಾಡಿ, ಅಂಗವಿಕಲರ ಕಲ್ಯಾಣ ಹಾಗೂ ಹೋರಾಟಕ್ಕೆ ನಮ್ಮ ವೇಲಾಪುರಿ ಸಾಹಿತ್ಯ ಪರಿಷತ್ ವತಿಯಿಂದ ಸಂಪೂರ್ಣ ಬೆಂಬಲವಿದ್ದು ಪರಿಷತ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಅವರ ಪರವಾಗಿ ರೂಪಿಸುವುದಾಗಿ ತಿಳಿಸಿದರು.
ತಾಪಂ ಅಧ್ಯಕ್ಷೆ ನಳಿನಿ ಶಿವಕುಮಾರ್ ಮಾತನಾಡಿ, ಅಂಗವಿಕಲರು ಯಾವುದೇ ಶೋಷಣೆಗೊಳಗಾಗದೆ ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಾಭಿಮಾನಿಗಳಾಗಿ ಬಾಳಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ ಅವರು ಮಾತನಾಡಿ ಅಂಗವಿಕಲರನ್ನು ಗೌರವದಿಂದ ನೋಡಬೇಕಾಗಿರುವುದು ಸರ್ಕಾರ ಮತ್ತು ಸಮಾಜದ ಆದ್ಯ ಕರ್ತವ್ಯವಾಗಿದೆ. ಪುರಸಭೆ ವತಿಯಿಂದ ಅಂಗವಿಕಲರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಅಂಗವಿಕಲರು ಮನೆ ನಿರ್ಮಿಸಿಕೊಳ್ಳಲು 75 ಸಾವಿರ ನೀಡಲು 3 ಲಕ್ಷ ರು. ಮೀಸಲಿಡಲಾಗಿದೆ ಎಂದು ತಿಳಿಸಿದರು.
ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಬಿ.ವಿ.ಉಮೇಶ್ ಮಾತನಾಡಿ, ತಾಲೂಕಿನ ಎಲ್ಲಾ ಅಂಗವಿಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ತಮ್ಮ ಗುರಿಯಾಗಿದ್ದು ಮುಂದಿನ ದಿನಗಳಲ್ಲಿ ಸರ್ಕಾರದ ಗಮನವನ್ನು ಸೆಳೆಯಲು ಹಲವು ಹಂತದ ಹೋರಾಟ ರೂಪಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಎನ್.ಎಸ್. ಸೀತಾರಾಂ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಮ.ಶಿವಮೂರ್ತಿ, ನಿಕಟ ಪೂರ್ವ ಅಧ್ಯಕ್ಷ ಪುರುಷೋತ್ತಮ್ ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.