ಅರಸೀಕೆರೆ: ಪಕ್ಷೇತರರಾಗಿ ವಿದ್ಯಾಧರ್ ನಾಮಪತ್ರ ಸಲ್ಲಿಕೆ
ಅರಸೀಕೆರೆ: ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರ ಪ್ರಮುಖ ರಾಜಕೀಯ ಪಕ್ಷ ಜೆಡಿಎಸ್, ಕಾಂಗ್ರೆಸ್, ಕೆಜೆಪಿ, ಬಿಜೆಪಿಯಿಂದ ನಾಮಪತ್ರ ಸಲ್ಲಿಸಲು ಆಕಾಂಕ್ಷಿಗಳು ಮುಗಿಬಿದ್ದರೆ ಪಕ್ಷೇತರರು ಕೂಡಾ ಉಮೇದುವಾರಿಕೆ ಸಲ್ಲಿಸುವಲ್ಲಿ ಹಿಂದೆ ಬೀಳಲಿಲ್ಲ.
21ನೇ ವಾರ್ಡಿನ ಸದಸ್ಯ ಬಿ.ಎನ್.ವಿದ್ಯಾಧರ್ ಸತತವಾಗಿ 4 ಬಾರಿ ಜೆಡಿಎಸ್ನಿಂದ ಭಾರೀ ಬಹುಮತದಿಂದ ಜಯಗಳಿಸಿ ಇತಿಹಾಸ ನಿರ್ಮಿಸಿದ್ದ ಅವರ ನಡೆ ಎತ್ತ ಎಂಬುದು ನಾಗರಿಕರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಾರಿ ಕಾಂಗ್ರೆಸ್ನಿಂದ ಉಮೇದುವಾರಿಕೆ ಸಲ್ಲಿಸುವ ಬಗ್ಗೆ ವದಂತಿಯೂ ಹರಡಿತ್ತು. ಆದರೆ ಅಂತಿಮ ಗಳಿಗೆಯಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಈ ಎಲ್ಲ ಗೊಂದಲಗಳಿಗೆ ಅವರು ತೆರೆ ಎಳೆದರು.
ಜೆಡಿಎಸ್ನಿಂದ ಬಹುತೇಕ ಹೊಸಬರಿಗೆ ಅವಕಾಶ ನೀಡಲಾಗಿದ್ದು, 16ನೇ ವಾರ್ಡಿನಿಂದ ಫೈರೋಜ್, 18ನೇ ವಾರ್ಡಿನಿಂದ ರವಿಕಿರಣ್, 15ನೇ ವಾರ್ಡಿನಿಂದ ಆನಂದ್, 5ನೇ ವಾರ್ಡಿನಿಂದ ಸುರೇಶ್, 27ನೇ ವಾರ್ಡಿನಿಂದ ಲಕ್ಷ್ಮ್ಮಣ್, 4ನೇ ವಾರ್ಡಿನಿಂದ ಮಂಜುನಾಥ್ ಹೊಸ ಮುಖಗಳು.
ಕಾಂಗ್ರೆಸ್ನಿಂದ 11ನೇ ವಾರ್ಡಿನಿಂದ ಸಿ.ಎಂ.ಪ್ರಶಾಂತ್, ಕೆಜೆಪಿ ಯಿಂದ ಡಾ.ಎನ್.ಜಿ.ಮಧು, 15ನೇ ವಾರ್ಡಿನಿಂದ ಕಳೆದ ಬಾರಿ ಜೆಡಿಎಸ್ನಿಂದ ಚುನಾಯಿತರಾಗಿದ್ದ ರೇವಣ್ಣ, 2ನೇ ವಾರ್ಡಿನಿಂದ ಆನಂದ್ಮಯ್ಯ ಪ್ರಮುಖರು. ಇನ್ನುಳಿದಂತೆ 17ನೇ ವಾರ್ಡಿನಿಂದ ಮಾಜಿ ಅಧ್ಯಕ್ಷ ಜಿ.ಟಿ.ಗಣೇಶ್ ಜೆಡಿಎಸ್ ಅಭ್ಯರ್ಥಿ, 15ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಸುಭಾಷ್ (22) ಅತ್ಯಂತ ಕಿರಿಯ ವಯಸ್ಸಿನ ಆಕಾಂಕ್ಷಿಯಾದರೆ, 5ನೇ ವಾರ್ಡಿನಿಂದ ಶಿವನ್ರಾಜ್ ಮತ್ತೊಬ್ಬ ಬಿಜೆಪಿ ಹುರಿಯಾಳು.
ಪ್ರಮುಖ 3 ಚುನಾವಣಾಧಿಕಾರಿ ಕಚೇರಿಯಲ್ಲಿ ಅಂತಿಮ ದಿನವಾದ ಶನಿವಾರ 138 ಮಂದಿ ಚುನಾವಣಾ ಕಣಕ್ಕೆ ಧುಮುಕಿದ್ದು ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಫೆ.27ರ ಬುಧವಾರ ನಾಮಪತ್ರ ಹಿಂಪಡೆಯಲು ಕಡೆಯ ದಿನ. ಈ ಬಾರಿ ಮಾಜಿ ಪುರಸಭಾಧ್ಯಕ್ಷ ಕೆ.ಸಿ.ಯೋಗೀಶ್, ಎನ್.ಎಸ್.ಸಿದ್ದರಾಮಶೆಟ್ಟಿ, ಕೆ.ಎಸ್.ಸಿದ್ದಮ್ಮ, ಪಿ.ದೇವಕುಮಾರ್ ಕಣಕ್ಕಿಳಿಯದಿರುವುದು ಮತದಾರರ ಅಚ್ಚರಿಗೆ ಕಾರಣವಾಗಿದೆ.