ಕಲಾವಿದರಿಗೆ ತುರ್ತು ಮಾಸಾಶನ: ಟಿ.ತಿಮ್ಮೇಗೌಡ ಆಗ್ರಹ
ಹಾಸನ: ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕನಿಷ್ಟ 5 ಸಾವಿರ ಕಲಾವಿದರಿಗೆ ಸರ್ಕಾರ ಕೂಡಲೇ ಮಾಸಾಶನ ಘೋಷಣೆ ಮಾಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಆಗ್ರಹಿಸಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭ, ಜನಪದ ಆಹಾರ ಮೇಳ ಹಾಗೂ ಜನಪದ ಕಲಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾನಪತ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸುಮಾರು 6 ಸಾವಿರ ಕಲಾವಿದರ ಪಟ್ಟಿ ಸಿದ್ದಪಡಿಸಿ 1 ಸಾವಿರ ರು.ಮಾಸಾಶನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 4 ವರ್ಷ ಕಳೆದಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಾರಿಯ ಬಜೆಟ್ನಲ್ಲಿ ಸರ್ಕಾರ ಕಲಾವಿದರಿಗೆ ಮಾಸಾಶನ ಘೋಷಣೆ ಮಾಡುತ್ತದೆಂದು ನಂಬಲಾಗಿತ್ತು. ಆದರೆ ಇದರ ಬಗ್ಗೆ ಸರ್ಕಾರ ಚಕಾರ ಎತ್ತಿಲ್ಲ. ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ಸರ್ಕಾರ ಕೂಡಲೇ ಸಹಾಯ ಹಸ್ತ ನೀಡಬೇಕು. ಅನೇಕ ಕಲಾವಿದರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಅವರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದರು.
ಜನಪದ ಕಲೆ ನಶಿಸಿ ಹೋಗುತ್ತಿದೆ ಎನ್ನಲಾಗುತ್ತಿದ್ದು, ಆದರೆ ಜನಪದ ನಶಿಸದೇ ಪುನರುಜ್ಜೀವನಗೊಳ್ಳುತ್ತಿದೆ. ಇದನ್ನು ಉಳಿಸಿ ಬೆಳೆಸುವಂತ ಕಾರ್ಯ ಎಲ್ಲರದಾಗಿದೆ. ಪರಿಷತ್ ತಾಯಿ ಬೇರು ಇದ್ದಂತೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ. ಜಾನಪದ ಸಂಸ್ಕೃತಿ ಮತ್ತು ಸಾಹಿತ್ಯ ಬೇರೆ ಅಲ್ಲ. ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದ ಅವರು, ಪಾಶ್ಚಾತ್ಯ ಸಂಸ್ಕೃತಿ ಜಾನಪದ ಕಲೆ, ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿವೆ. ಆದರೆ ಅದು ಶಾಶ್ವತವಲ್ಲ ಎಂದು ಹೇಳಿದರು. ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಠಾಗೂರ್ ಮಾತನಾಡಿ, ಎಲ್ಲಿಯವರೆಗೆ ಜಾನಪದ ಕಲೆ, ಸಂಸ್ಕೃತಿ ಜನಪದ ಆಗುವುದಿಲ್ಲವೋ ಅಲ್ಲಿಯವರೆಗೆ ಸಂಸ್ಕೃತಿ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಪರಿಷತ್ ಗೌರವ ಕಾರ್ಯದರ್ಶಿ ಡಾ.ರಾಜೇಗೌಡ ಹೊಸಹಳ್ಳಿ, ಜಿಲ್ಲಾಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಇತರರು ಇದ್ದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದೆ ದ್ಯಾವಮ್ಮರಿಗೆ 5 ಸಾವಿರ ರು. ಸಹಾಯಧನ ನೀಡಿ ಸನ್ಮಾನಿಸಲಾಯಿತು.
ಆಹಾರ ಮೇಳ: ಆಹಾರ ಮೇಳದಲ್ಲಿ ಬಗೆ ಬಗೆಯ ಸ್ವಾದಿಷ್ಟ ಮಾಂಸಹಾರ, ತಿಂಡಿ ತಿನಿಸು ತಯಾರಿಸಲಾಗಿತ್ತು. ಹೆಚ್ಚಿನ ಮಂದಿ ಬಗೆ ಬಗೆಯ ತಿಂಡಿ ತಿನಿಸುಗಳ ರುಜಿ ಸವಿದರು. ನಾಟಿ ಕೋಳಿ- ಸಾಂಬಾರ್, ಮುದ್ದೆ, ಮೀನು, ಜೋಳದ ರೊಟ್ಟಿ-ಎಣ್ಗಾಯಿ ಪಲ್ಯ, ಸಾವಿಗೆ ಸೇರಿದಂತೆ ವಿಧ ವಿಧವಾದ ಅಡುಗೆಗಳನ್ನು ಮಾಡಲಾಗಿತ್ತು. ನಾನಾ ಮಹಿಳಾ ಸಂಘಟನೆಗಳು ಆಹಾರ ಮೇಳದಲ್ಲಿ ಪಾಲ್ಗೊಂಡು ಜಾನಪದ ಅಡುಗೆಗಳನ್ನು ತಯಾರಿಸಿ ಮೇಳದಲ್ಲಿ ಮಾರಾಟ ಮಾಡಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದರು.