ಜಮೀನಿನಲ್ಲಿಟ್ಟ್ದ ಬೋನಿಗೆ ಬಿತ್ತು 5 ವರ್ಷದ ಗಂಡು ಚಿರತೆ
ಹಾಸನ/ಚನ್ನರಾಯಪಟ್ಟಣ: ರೈತರೊಬ್ಬರ ಜಮೀನಿನಲ್ಲಿಟ್ಟಿದ್ದ ಬೋನಿಗೆ ಭಾನುವಾರ 5 ವರ್ಷದ ಗಂಡು ಚಿರತೆ ಬಿದ್ದಿದೆ.
ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿ ಬಂಡೀಹಳ್ಳಿಯ ಪಟೇಲ್ ದೇವರಾಜ್ ಎಂಬುವರ ಜಮೀನಿನಲ್ಲಿ ಇರಿಸಿದ್ದ ಬೋನಿಗೆ ಈ ಚಿರತೆ ಬಿದ್ದಿದೆ. ಕೆಲವು ದಿನಗಳ ಹಿಂದೆ ದಂಡಿಗನಹಳ್ಳಿ ಹೋಬಳಿ ಯಲಿಯೂರು ಗ್ರಾಮದ ರೈತ ನಾಗೇಗೌಡರ ಜಮೀನಿನಲ್ಲಿ ಎರಡು ವರ್ಷದ ಗಂಡು ಚಿರತೆಯೊಂದು ಬೋನಿಗೆ ಬಿದ್ದಿತ್ತು. ಮತ್ತೆ ರೈತನ ಜಮೀನಿನಲ್ಲಿ ಒಂದು ಹೆಣ್ಣು ಚಿರತೆ ಬೋನಿಗೆ ಬಿದ್ದಿತ್ತು. ಎರಡು ತಿಂಗಳಲ್ಲಿ ನಾಲ್ಕು ಚಿರತೆ ಹಾಗೂ ಎರಡು ಮರಿಚಿರತೆ ಸಿಕ್ಕಂತಾಯಿತು.
ಸುಮಾರು 2 ವರ್ಷಗಳಿಂದ ಗ್ರಾಮದ ಸುತ್ತಮುತ್ತಲಿನ ಜನರಿಗೆ ತೊಂದರೆ ಕೊಡುತ್ತಿದ್ದಂತಹ ಚಿರತೆ ಬೋನಿಗೆ ಬಿದ್ದಿರುವುದರಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ.
ಒಂದು ತಿಂಗಳಿಂದ ಪಟೇಲ್ ದೇವರಾಜ್ ಅವರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ ಬೋನನ್ನು ತಂದು ತನ್ನ ಜಮೀನಿನಲ್ಲಿ ಇರಿಸಿದ್ದರು. ಆದರೆ 1 ತಿಂಗಳಿನಿಂದ ಬೋನಿನೊಳಗೆ ಹೋಗುವಂತಹ ಸಾಹಸ ಚಿರತೆ ಮಾಡಿರಲ್ಲ. ಈ ಚಿರತೆ ಇದೇ ಗ್ರಾಮದಲ್ಲಿ 8ರಿಂದ 10 ನಾಯಿ, ಐದಾರು ಕುರಿಗಳನ್ನು ತಿಂದು ಹಾಕಿತ್ತು.
ಶನಿವಾರ ತಾಲೂಕಿನ ಎರಡು ಗ್ರಾಮಗಳಲ್ಲಿ ನಾಲ್ಕು ಚಿರತೆಗಳು ಬೋನಿಗೆ ಸಿಲುಕಿತ್ತು. ಬಂಡೀಹಳ್ಳಿಯಲ್ಲಿ ಈ ಚಿರತೆ ಭಾನುವಾರ ಸಿಕ್ಕಿ ಹಾಕಿಕೊಂಡಿದೆ. ಬಂಡೀಹಳ್ಳಿಯಲ್ಲಿ ಇನ್ನು ಹಲವಾರು ಚಿರತೆಗಳಿದ್ದು, ಅವುಗಳನ್ನು ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.