ನಗರೀಕರಣದ ಭರದಲ್ಲಿ ಗ್ರಾಮಗಳ ನಿರ್ಲಕ್ಷ್ಯ: ಡಾ. ಮಲ್ಲೇಗೌಡ
ಹಾಸನ: ನಗರೀಕರಣದ ಭರದಲ್ಲಿ ಗ್ರಾಮಗಳನ್ನು ನಿರ್ಲಕ್ಷ್ಯಿಸಲಾಗುತ್ತಿದೆ. ಹಾಗಾಗಿ ಗ್ರಾಮಗಳು ಬಹು ಹಿಂದುಳಿದಿವೆ ಎಂದು ಎವಿಕೆ ಕಾಲೇಜಿನ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಚ್.ಎಲ್. ಮಲ್ಲೇಶಗೌಡ ತಿಳಿಸಿದರು.
ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಸೇವೆಗಳು ಗ್ರಾಮೀಣರಿಗೆ ಹೆಚ್ಚು ತಲುಪಬೇಕಾದ ಅವಶ್ಯಕತೆ ಇದೆ. ಈ ಕಾರ್ಯದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಪಾಲೂ ಇದೆ ಎಂದ ಅವರು, ಗ್ರಾಮೀಣ ಜನರಿಂದ ವಿದ್ಯಾವಂತ ಸಮುದಾಯ ಕಲಿಯಬೇಕಾದ್ದು ಸಾಕಷ್ಟಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಡಿ.ನಾರಾಯಣ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳು ನಾಯಕತ್ವ, ಕಲೆ, ಸಂಗೀತ, ನೃತ್ಯ ಮುಂತಾದ ವಿಶೇಷ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಹಾಗೂ ಗ್ರಾಮೀಣರ ಜೀವನ ಆರ್ಥ ಮಾಡಿಕೊಳ್ಳುವ ಮೂಲಕ ಸರ್ವತೋಮುಖ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದರು.
ಶಿಬಿರಾಧಿಕಾರಿ ಪಾರ್ಥೇಶರನ್ನು ಸನ್ಮಾನಿಸಲಾಯಿತು. ಎಚ್.ಆರ್. ಮುಕುಂದೇಗೌಡ, ಶೆಟ್ಟಿಗೌಡ ಇದ್ದರು. ಗುರುರಾಜ್ ಪ್ರಾರ್ಥಿಸಿದರು. ಉಪನ್ಯಾಸಕ ಮಂಜುನಾಥ ವಂದಿಸಿದರು. ಉಪನ್ಯಾಸಕ ಹರೀಶ ನಿರೂಪಿಸಿದರು.