ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಾತೃ ಭಾಷೆ ಮರೆತರೆ ತಾಯಿಯನ್ನೇ ಮರೆತಂತೆ

Parashurama
Updated On : 24 Feb 2013, 9:44 am

ಹಾಸನ: ಮಾತೃ ಭಾಷೆ ಮರೆತರೆ ಹೆತ್ತ ತಾಯಿಯ ಮರೆತಂತೆ. ಹೆತ್ತ ತಾಯಿ ಹಾಗೂ ಮಾತೃಭಾಷೆಗೂ  ಯಾವುದೇ ವ್ಯತ್ಯಾಸವಿಲ್ಲ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹಂಪನಹಳ್ಳಿ ತಿಮ್ಮೇಗೌಡ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಾಹಿತ್ಯ ಸ್ಪಂದನ ವೇದಿಕೆಯಿಂದ ಏರ್ಪಡಿಸಿದ್ದ  ಅಂತಾರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾತೃಭಾಷೆಯ ಆಚರಣೆಯ ಉದ್ದೇಶ, ಮಾತೃಭಾಷೆಯ ಬಗ್ಗೆ ಅರಿವು ಮತ್ತು ಎಚ್ಚರದ ಸಂಗತಿಯಾಗಿದೆ ಎಂದು ಹೇಳಿದರು.
ಪ್ರಪಂಚದಲ್ಲಿ 6000 ಭಾಷೆಗಳಿವೆ. ಹುಟ್ಟಿನಿಂದ ಆಡುವ ಭಾಷೆಯೇ ಮಾತೃಭಾಷೆ. ಕನ್ನಡಿಗರಿಗೆ ಕನ್ನಡ ಇದ್ದಂತೆ ಬೇರೆ ರಾಜ್ಯಗಳಿಗೆ ಬೇರೆ ಬೇರೆ ಮಾತೃಭಾಷೆಗಳಿವೆ ಎಂದರು.
ಜಾಗತೀಕರಣದ ಪ್ರಕ್ರಿಯೆಗೆ ಒಳಗಾದ ಮೇಲೆ ಎಲ್ಲ ಭಾಷೆಯ ಜ್ಞಾನವೂ ಬೇಕಾಗಿದೆ. ಭಾಷೆಗೆ ಮಡಿವಂತಿಕೆ ಸಲ್ಲದು. ಭಾಷೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಮಗುವಿಗೆ ಎಷ್ಟು ಭಾಷೆ ಕಲಿಸಿದರೂ ಅದು ಕಲಿಯುತ್ತದೆ. ಇಂಗ್ಲಿಷ್ ಎಲ್ಲ ಸಂಸ್ಕೃತಿಗಳ ಮೇಲೆ ತನ್ನ ಪ್ರಭಾವ ಬೀರುತ್ತಿದೆ. ಆದರೆ ಇಂಗ್ಲಿಷ್ ಕಲಿತು ಮಾತೃಭಾಷೆಯನ್ನು  ತಿರಸ್ಕರಿಸಿದರೆ ನಮ್ಮ  ಸಂಸ್ಕೃತಿಯನ್ನೇ  ಮರತಂತೆ. ನಿಜವಾದ  ಅಭಿವ್ಯಕ್ತಿ  ಸಾಧ್ಯವಾಗುವುದು ಮಾತೃಭಾಷೆಯಿಂದ ಮಾತ್ರ ಸಾಧ್ಯ ಎಂದು ನುಡಿದರು.
ಲ್ಯಾಟಿನ್‌ಗೆ ಸವಾಲೊಡ್ಡಿದ್ದ ಹಂಗೇಲಿನ್ ಭಾಷೆ:  ಇತ್ತೀಚೆಗೆ ಕೆಲವು ಭಾಷೆಗಳು ಸಾವಿನಂಚಿಗೆ ಸಾಗುತ್ತಿವೆ. ಕಾರಣ ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ.  1884 ರಲ್ಲಿ ಹಂಗೇಲಿನ್ ಭಾಷೆ, ಲ್ಯಾಟಿನ್ ಭಾಷೆಗೆ ಸವಾಲೊಡ್ಡಿದ್ದನ್ನು ನೆನಪಿಸಿದರು. ವೇಲ್ಸ್ ಎನ್ನುವ ಭಾಷೆ  ಸಹ ಜನರ ಇಚ್ಛೆಯಿಂದ ಸಮೃದ್ಧಿಯಾಗಿ ಬೆಳೆದಿದೆ ಎಂದು ತಿಳಿಸಿದರು. ಚಂದ್ರಕಾಂತ ಪಡೇಸೂರ್ ಮಾತನಾಡಿ, ಬದುಕಿಗಾಗಿ ಮಾತೃಭಾಷೆ ಉಳಿಸಬೇಕು. ಬದುಕಿಲ್ಲದಿದ್ದರೆ ಯಾವ ಭಾಷೆಯೂ ಪ್ರಯೋಜನಕ್ಕೆ ಬರಲಾರದು. ಗಾಳಿ, ಮಣ್ಣು ಹೇಗೆ ಮುಖ್ಯವೋ ಹಾಗೆಯೇ ಭಾಷೆಯೂ ಮುಖ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಐ.ಎಂ.ಮೋಹನ್ ಮಾತನಾಡಿ, ಹುಟ್ಟಿನಿಂದ ಕಲಿತ ಭಾಷೆ ಮಾತೃಭಾಷೆಯಾದರೆ ವ್ಯಕ್ತಿಯ ಬೌದ್ಧಿಕತೆ, ಉದ್ಯೋಗ ಮತ್ತು ಪರಿಸರದೊಂದಿಗೆ  ವ್ಯವಹರಿಸಲು ಅನ್ಯಭಾಷೆಯ ಜ್ಞಾನ ಅಗತ್ಯ ಎಂದು ಹೇಳಿದರು.
ಯಾವುದೇ ಭಾಷೆಯನ್ನು ಹೆಚ್ಚೆಚ್ಚು ಬಳಸುತ್ತಾ ಹೋದಷ್ಟು ಆ ಭಾಷೆಯನ್ನು ಗಟ್ಟಿಗೊಳಿಸಲಿಕ್ಕೆ, ಶ್ರೀಮಂತಗೊಳಿಸಲಿಕ್ಕೆ ಸಾಧ್ಯ.  ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವ್ಯಕ್ತಿ ಬದುಕಿನ  ಅನಿವಾರ್ಯತೆಗಾಗಿ ಯಾವ ಭಾಷೆಯನ್ನು ಅವಲಂಬಿಸಿದರೂ ಭಾವನಾತ್ಮಕವಾಗಿ ಮಾತೃಭಾಷೆಯನ್ನು  ಸ್ವೀಕರಿಸ ಬೇಕೆಂದರು. ಶೃತಿಶ್ರೀ ಪ್ರಾರ್ಥಿಸಿದರು. ಸಂದೀಪ  ಸ್ವಾಗತಿಸಿದರು. ಅಶ್ವಿನಿ ವಂದಿಸಿದರು. ಜಯಂತ್ ನಿರೂಪಿಸಿದರು. ಕನ್ನಡ ವಿಭಾಗದ ಅಧ್ಯಾಪಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement