ವ್ಯಾಪಾರೀಕರಣದಲ್ಲಿ ಶಿಕ್ಷಣದ ಮೌಲ್ಯ ಮಾಯ
ಯಳಂದೂರು: ಇಂದು ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣವಾಗಿದ್ದು, ಮೌಲ್ಯಾಧಾರಿತ ಶಿಕ್ಷಣ ಮರೀಚಿಕೆಯಾಗುತ್ತಿದೆ ಎಂದು ಕಾರಾಪುರದ ವಿರಕ್ತಮಠದ ಬಸವರಾಜಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಕಾರಾಪುರ ವಿರಕ್ತ ಮಠದ ನಿರಂಜನ ಕಾನ್ವೆಂಟ್ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇವಾ ಮನೋಭಾವದಿಂದ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಬದಲು ವ್ಯಾಪಾರೀಕರಣ ದೃಷ್ಟಿಕೋನವನ್ನು ಇಟ್ಟುಕೊಂಡು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ.
ಇದರಿಂದ ಎಷ್ಟೋ ಮಕ್ಕಳು ಶುಲ್ಕವನ್ನು ಭರಿಸಲಾಗದೇ ವಿದ್ಯೆಯಿಂದ ವಂಚಿತರಾಗಿದ್ದಾರೆ, ಇಂತಹ ವಿಷಯವನ್ನು ಗಂಭೀರವಾಗಿ ಮನಗಂಡ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೆ ತರುವ ಮೂಲಕ ಸ್ವಲ್ಪ ಮಟ್ಟಿಗಾದರೂ ಶಿಕ್ಷಣ ವ್ಯಾಪಾರೀಕರಣ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾಘಿಸಿದರು.
ಈ ಸಂಬಂಧ ಕಾರಾಪುರ ವಿರಕ್ತ ಮಠದ ವತಿಯಿಂದ ನಡೆಯುವ ನಿರಂಜನ ಕಾನ್ವೆಂಟ್ ಯಾವುದೇ ಡೊನೇಷನ್ ಹಾವಳಿ ಇಲ್ಲದೆ ಸೇವಾ ಮನೋಭಾವದಿಂದ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಹಗಲಿರುಳು ಶ್ರಮಿಸುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ ಮಾತನಾಡಿ, ಸಾವಿರಾರು ವರ್ಷಗಳ ಐತಿಹಾಸಿಕ ಪರಂಪರೆಯುಳ್ಳ ಕಾರಾಪುರ ವಿರಕ್ತಮಠವು ಗ್ರಾಮೀಣ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಿರಂಜನ ಕಾನ್ವೆಂಟ್ ಶಿಕ್ಷಣ ಸಂಸ್ಥೆಯನ್ನು ತೆರೆದಿರುವುದು ಪ್ರಶಂಸನೀಯ ಎಂದರು.
ಈ ಸಂದರ್ಭದಲ್ಲಿ ಕಾನ್ವೆಂಟ್ ಹಾಳೆ ವಿದ್ಯಾರ್ಥಿಗಳ ಸಂಘವನ್ನು ಹೊನ್ನೂರು ಪಟ್ಟದ ಮಠದ ಪ್ರಭುಸ್ವಾಮೀಜಿ ಉದ್ಘಾಟಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಅಖಿಲಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಸ್. ನಾಗರಾಜಪ್ಪ ಬಹುಮಾನ ವಿತರಿಸಿದರು.
ವೈ.ಕೆ. ಮೋಳೆ ಶಾಂತರಾಜು, ಕೆ. ಗೌರಮ್ಮ, ಮಾಜಿ ಗ್ರಾಪಂ ಅಧ್ಯಕ್ಷ ಎ.ಜಿ. ಸ್ವಾಮಿ, ಅಂಬಳೆ ನಾಗರಾಜಪ್ಪ, ಹುರುಳಿನಂಜನಪುರದ ಸ್ವಾಮಿ, ಬೂದಿತಿಟ್ಟು ಸತೀಶ, ಶಾಂತರಾಜು, ತಮ್ಮಣ್ಣ, ವೈ.ಎನ್. ಪ್ರಕಾಶ, ಕಿನಕಹಳ್ಳಿ ಬಸವಣ್ಣ, ಶಮಂತಕಮಣಿ, ಮಮತಾ ಆರ್, ರಮೇಶ, ಕೆ.ಗೌರಮ್ಮ ಇತರರು ಉಪಸ್ಥಿತರಿದ್ದರು.