ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರಾಚೀನರ ಜೀವನ ಪ್ರತಿಬಿಂಬಿಸುವ ವೀರಗಲ್ಲು

Parashurama
Updated On : 27 Feb 2013, 11:43 am

ಹೊಳೆನರಸೀಪುರ: ವೀರಗಲ್ಲುಗಳಿಂದ ನಮ್ಮ ಪ್ರಾಚೀನರ ಆಧ್ಯಾತ್ಮಿಕ ಮೌಲ್ಯಗಳು, ಸಾಂಪ್ರದಾಯಿಕ ಆಚರಣೆಗಳು ಹಾಗೂ ಅಂದಿನ ಸಮಾಜದ ಆರ್ಥಿಕ ಸ್ಥಿತಿಗತಿ ಮತ್ತು ಸಾಮಾಜಿಕ ಜನಜೀವನದ ನೈಜ ಚಿತ್ರಣವನ್ನು ವೀರಗಲ್ಲುಗಳು ಸಾರುತ್ತವೆ ಎಂದು ಮಂಗಳೂರಿನ ಮಂಗಳ ಗಂಗೋತ್ರಿಯ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಹನುಮಾ ನಾಯಕ್ ತಿಳಿಸಿದರು.
ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಪರಂಪರಾ ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೀರಗಲ್ಲುಗಳು ಹಾಗೂ ಮಹಾಸತಿಗಲ್ಲುಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಾಕ್ಷಚಿತ್ರದ ಮೂಲಕ ಹಾಸನ ಜಿಲ್ಲೆಯಲ್ಲಿನ ಹಲವು ವೀರಗಲ್ಲುಗಳು ಹಾಗೂ ಮಹಾಸತಿಗಲ್ಲುಗಳ ಕುರಿತಂತೆ ವಿವರಿಸಿದ ಅವರು, ಇತಿಹಾಸಕ್ಕೆ ಸ್ಪಷ್ಟವಾದ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸುವಲ್ಲಿ ವೀರಗಲ್ಲುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರಲ್ಲದೇ, ಸಮಾಜದ ಮತ್ತು ರಾಜ್ಯದ ರಕ್ಷಣೆಗಾಗಿ ಪ್ರಾಣತೆತ್ತ ವೀರನ ನೆನಪುಗಳು ಸೂರ್ಯಚಂದ್ರರು ಇರುವವರೆಗೂ ಶಾಶ್ವತವಾಗಿ ಉಳಿಯಲಿ ಎಂಬುದೇ ಈ ವೀರಗಲ್ಲುಗಳ ಸ್ಥಾಪನೆಯ ಉದ್ಧೇಶವಾಗಿತ್ತು ಎಂದು ಹೇಳಿದರು.
ಸವಿನೆನಪಿಗಾಗಿ ಮಾಸ್ತಿಗಲ್ಲು: ಕೆಲ ಕಾಲ ಬಾಳಿ ಅಳಿಯುವ ಈ ಜೀವ ಯುದ್ಧದಲ್ಲಿ ಅಂತ್ಯವಾದರೂ ಅದು ತನ್ನ ರಾಜ್ಯಕ್ಕಾಗಿ ಸಮಾಜದ ಉಳಿವಿಗಾಗಿ ತ್ಯಾಗ ಮಾಡಿದ್ದೇನೆಂಬ ಸಾರ್ಥಕತೆಗಾಗಿ ಜೀವ ತ್ಯಾಗ ಮಾಡಿದ ಸಂತುಷ್ಟತೆಗೆ ಒಳಗಾದ ವೀರರ ಸವಿನೆನಪಿಗಾಗಿ ಮಾಸ್ತಿಗಲ್ಲುಗಳನ್ನು ನೆಡುತ್ತಿದ್ದರು ಎಂಬ ಅಂಶವನ್ನು ವೀರರ ವೀರತ್ವದ ಸಂಕೇತವಾಗಿ ಸ್ಥಾಪಿಸಲಾಗುತ್ತಿತ್ತು ಎಂದು ಡಾ.ಹನುಮಾನಾಯಕ್ ತಿಳಿಸಿ ಗರುಡ ಪದ್ಧತಿಯ ವೀರಗಲ್ಲುಗಳ ಕಲಾ ವೈಶಿಷ್ಟ್ಯವನ್ನೂ ಅವರು ವಿವರಿಸಿದರು.ಮಹಾಸತಿಗಲ್ಲುಗಳನ್ನು ಗಂಡನ ಸಾವಿನ ನಂತರ ಜೀವನ ನಿರರ್ಥಕವೆಂದು ಭಾವಿಸಿ ಗಂಡನ ಶವದೊಂದಿಗೇ ಚಿತೆಗೆ ಏರುತ್ತಿದ್ದ ಮಹಾ ಸಾಧ್ವಿಯರ ತ್ಯಾಗದ ಕಥೆಯನ್ನು ನಿರೂಪಿಸುವ ಮಹಾಸತಿ ಕಲ್ಲುಗಳು ವೀರಗಲ್ಲಿನಷ್ಟು ಸಂಖ್ಯೆಯಲ್ಲಿ ಲಭ್ಯವಿಲ್ಲದಿದ್ದರೂ ಮಹಾಸತಿಗಲ್ಲುಗಳೂ ಈ ದೇಶದ ಸಂಸ್ಕೃತಿಯ ಪ್ರತಿಬಿಂಬವಾಗಿವೆ ಎಂದರೆ ತಪ್ಪಾಗಲಾರದು ಎಂದರು.
ಬಲಾತ್ಕಾರದ ಸಾವಿನ ಸಂಕೇತವಾಗಿರಲಿಲ್ಲ:  ಮಹಾಸತಿ ಪದ್ಧತಿಯು ಬಲಾತ್ಕಾರದ ಸಾವಿನ ಸಂಕೇತವಾಗಿರದೆ, ಅದು ಪತ್ನಿಯೇ ತನ್ನ ಸ್ವಯಿಚ್ಛೆಯಿಂದಲೇ ಗಂಡನೊಂದಿಗೆ ಚಿತೆ ಏರಿ ಪ್ರಾಣಾರ್ಪಣೆ ಮಾಡುತ್ತಿದ್ದಳು ಎಂಬುದಕ್ಕೆ ನೂರಾರು ದಾಖಲೆಗಳು ಲಭ್ಯವಾಗಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರೂ ಹಾಗೂ ಪರಂಪರಾ ಕೂಟದ ಸಂಚಾಲಕ ಪ್ರೊ..ಎಂ.ಬಿ.ಇರ್ಷಾದ್ ಮಾತನಾಡಿ ವೀರಗಲ್ಲುಗಳು ಹಾಗೂ ಮಹಾಸತಿ ಕಲ್ಲುಗಳ ಕುರಿತಾದ ಅಧ್ಯಯನವು ಭಾರತೀಯ ಸಂಸ್ಕೃತಿಯ ರಕ್ಷಣೆಯ ದೃಷ್ಟಿಯಿಂದಲೂ ನಿರಂತರ ಅಧ್ಯಯನಶೀಲ ವಸ್ತುವಾಗಿದೆ ಎಂದು ನುಡಿದರು.
ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಕುಮಾರ್, ಪಡುವಲಹಿಪ್ಪೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ  ಜಿ.ಡಿ.ನಾರಾಯಣ್, ಅಧ್ಯಾಪಕ  ಡಾ.ಕೆ.ಸಿ.ಮಹೇಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement