ರು. 38 ಲಕ್ಷ ವೆಚ್ಚದ ಸುವರ್ಣ ಗ್ರಾಮ ಯೋಜನೆ ಕಾಮಗಾರಿಗಳಿಗೆ ಚಾಲನೆ
ಅರಕಲಗೂಡು: ಹೆಬ್ಬಾಲೆ ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗಾಗಿ 38 ಲಕ್ಷ ರು. ವೆಚ್ಚದ ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.
ಹೆಬ್ಬಾಲೆ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯ ಕಾಮಗಾರಿ ಆರಂಭಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮಂಜು, ತಾಲೂಕಿನ ಗ್ರಾಮಗಳ ಅಭಿವೃದ್ಧಿ ನನ್ನ ಕನಸು. ಈ ದಿಸೆಯಲ್ಲಿ ಪಕ್ಷಾತೀತವಾಗಿ ಕಾರ್ಯ ನಿರ್ವ್ವಹಿಸುತ್ತಿದ್ದೇನೆ. ವಿರೋಧ ಪಕ್ಷದಲ್ಲಿದ್ದರೂ ನಿರೀಕ್ಷೆಗೂ ಮೀರಿದ ಅನುದಾನವನ್ನು ತಾಲೂಕಿಗೆ ತಂದು ಅಭಿವೃದ್ಧಿ ದಿಸೆಯಲ್ಲಿ ಅನುಷ್ಠಾನ ಮಾಡಲಾಗಿದೆ. ಹೆಬ್ಬಾಲೆ ದಲಿತ ಕಾಲೋನಿಗೆ ಎಸ್ಸಿಪಿ ಯೋಜನೆಯಡಿ 10 ಲಕ್ಷ ರು. ವೆಚ್ಚದ ಕಾಂಕ್ರೀಟ್ ರಸ್ತೆಗೂ ಇದೀಗ ಚಾಲನೆ ನೀಡಿರುವುದಾಗಿ ಹೇಳಿದರು. ಅಭಿವೃದ್ಧಿಯಲ್ಲಿ ರಾಜಕಾರಣ ಬೆರೆಸುವುದಿಲ್ಲ. ಜನ ನನ್ನ ಮೇಲೆ ನಂಬಿಕೆ ಇರಿಸಿ ಚುನಾಯಿಸಿದ್ದಾರೆ. ಆದ್ದರಿಂದ ಪ್ರಾಮಾಣಿಕವಾಗಿ ಹೊಣೆಯರಿತು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ನೀವು ಶಕ್ತಿ ತುಂಬಿದ್ದರಿಂದಲೇ ನಾನಿದನ್ನು ಮಾಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ನಿಮ ಬೆಂಬಲ ಹೀಗೆಯೇ ಇರಲಿ ಇನ್ನೂ ಹೆಚ್ಚಿನ ಸೇವೆಗೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು. ಸುವರ್ಣ ಗ್ರಾಮ ಯೋಜನೆಯಡಿ ಗ್ರಾಮದಲ್ಲಿ ಗುಣಮಟ್ಟದ ರಸ್ತೆ ಮತ್ತು ಚರಂಡಿ, ಸಮುದಾಯ ಭವನಗಳ ಕೆಲಸವಾಗಲಿದೆ. ಗ್ರಾಮಸ್ಥರು ಅಭಿವೃದ್ಧಿ ಕೆಲಸದಲ್ಲಿ ಲೋಪವಾಗದಂತೆ ಸಹಕರಿಸಿ ಎಂದರು. ಮುಖಂಡನಾಗೇಶ್, ಮಂಜು, ಇಂಜಿನಿಯರ್ ಅನಂತರಾಮಯ್ಯ, ಜ್ಯೋತಿ ಹಾಜರಿದ್ದರು.