ಸರ್ಕಾರಿ ಕೆಲಸಕ್ಕೆ ಅಡ್ಡಿ: ವ್ಯಕ್ತಿಗೆ ಶಿಕ್ಷೆ
ಹಾಸನ: ಸರ್ಕಾರಿ ಕೆಲಸ ನಿರ್ವಹಣೆ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ್ದಲ್ಲದೆ, ಪ್ರಾಣಬೆದರಿಕೆ ಒಡ್ಡಿದ ಆರೋಪಿಗೆ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ 6 ತಿಂಗಳ ಸಾದಾ ಶಿಕ್ಷೆ ವಿಧಿಸಿದೆ.
ಹಾಸನ ತಾಲೂಕಿನ ಉಪ್ಪಾರ ಹೊಸಳ್ಳಿಗೆಯ ದಿನೇಶ ಎಂಬಾತನೇ ಶಿಕ್ಷೆಗೆ ಒಳಗಾದವನು.
ಆರೋಪಿ ದಿನೇಶ್ 2007ರ ಡಿ.27 ರಂದು ಸತ್ಯಮಂಗಲ ಗ್ರಾಮದ ಜಮೀನಿನ ಸರ್ವೇ ಕಾರ್ಯದ ವಿಚಾರದಲ್ಲಿ ಹಾಸನ ತಾಲೂಕು ಕಚೇರಿಯಲ್ಲಿ ಭೂಮಾಪಕ ಎ.ಆರ್.ಗಿರೀಶ್ ಹಾಗೂ ದಿನೇಶ್ಕುಮಾರ್ ಅವರೊಂದಿಗೆ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅಲ್ಲದೆ ಎ.ಆರ್.ಗಿರೀಶ ಅವರನ್ನು ಕಚೇರಿಯೊಳಗೆ ಎಳೆದಾಡಿ ಇಬ್ಬರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ ಸರ್ಕಾರಿ ಕೆಲಸ ನಿರ್ವಹಣೆಗೆ ಅಡ್ಡಿ ಉಂಟುಮಾಡಿದ್ದರು ಎಂದು ಬಡಾವಣಾ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಮ್ಎಫ್.ಸಿ. ನ್ಯಾಯಾಲಯ ನ್ಯಾಯಾಧೀಶ ಕೆ.ಲಕ್ಷ್ಮಿನಾರಾಯಾಣ ಭಟ್ ಆರೋಪ ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ದಿನೇಶ್ಗೆ 6 ತಿಂಗಳ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಪ್ರಕಾಶ್ ಶೇಖರಪ್ಪ ಸುಂಕದ ವಾದ ಮಂಡಿಸಿದ್ದರು.
ಸಂಕೀಹಳ್ಳಿಯಲ್ಲಿ ನೀರಿಗೆ ತೀವ್ರ ತತ್ವಾರ
ಜಾವಗಲ್: ಹೋಬಳಿಯ ಸಂಕೀಹಳ್ಳಿಯಲ್ಲಿ ಕುಡಿಯುವ ನೀರಿಗೆ ತೀವ್ರ ತತ್ವಾರ ಉಂಟಾಗಿದೆ.
ಗ್ರಾಮದಲ್ಲಿನ ಕೈಪಂಪುಗಳೆಲ್ಲಾ ಕೆಟ್ಟುಹೋಗಿವೆ. ಕೊಳವೆ ಬಾವಿಗೆ ಪೈಪ್ ಇಳಿಸಿ ವಿದ್ಯುತ್ ಸಂಪರ್ಕ ಕೊಡಿಸಲು ವಿಳಂಬವಾಗುತ್ತಿದ್ದು ಗ್ರಾಮಸ್ಥರು ಮತ್ತು ಜಾನುವಾರುಗಳಿಗೆ ತೀವ್ರ ತೊಂದರೆ ಉಂಟಾಗಿದೆ. ಗ್ರಾಮದಿಂದ 1 ಕಿ.ಮೀ ದೂರದಿಂದ ನೀರು ತರುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
ಕೊಳವೆ ಬಾವಿಗೆ ಪೈಪ್ ಇಳಿಸಲು ಕಲ್ಲು ಸಿಕ್ಕಿ ಹಾಕಿಕೊಳ್ಳುತ್ತಿರುವುದರಿಂದಾಗಿ ಪೈಪ್ ಇಳಿಸಲು ತುಂಬಾ ತೊಂದರೆಯಾಗುತ್ತಿದ್ದು ರೀಬೋರ್ ಮಾಡಿಸಿ ಕೊಡುವಂತೆ ಗ್ರಾಮಸ್ಥರು ಕೋಳಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮುಖಂಡ ಶಿವಕುಮಾರ್ ಈಶಣ್ಣ, ಹರೀಶ ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜು ಚನ್ನಬಸಪ್ಪ ದೂರಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೊಳವೆ ಬಾವಿ ದುರಸ್ಥಿಪಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಫುಟ್ಬಾಲ್ ಪಂದ್ಯಾವಳಿ ಇಂದಿನಿಂದ
ಹಾಸನ: ಹಾಸನ್ ಪುಟ್ಬಾಲ್ ಕ್ಲಬ್ನಿಂದ ರಾಜ್ಯ ಮಟ್ಟದ ಹೊನಲು - ಬೆಳಕಿನ ಟೈಗರ್ - 5 ಪುಟ್ಬಾಲ್ ಪಂದ್ಯಾವಳಿ ಮಾ. 1 ರಿಂದ ಮಾ. 3 ರವರೆಗೆ ವಿದ್ಯಾನಗರದ ಬುದ್ಧಮಾರ್ಗದಲ್ಲಿ ಆಯೋಜಿಸಲಾಗಿದೆ.ಮಾ. 1ರಂದು ಸಂಜೆ 7ಕ್ಕೆ ಶಾಸಕ ಎಚ್.ಎಸ್.ಪ್ರಕಾಶ್ ಉದ್ಘಾಟಿಸುವರು. ನಗರಸಭೆ ಮಾಜಿ ಸದಸ್ಯ ಎಂ.ಕೆ.ಕಮಲ್ಕುಮಾರ್, ಶ್ರೀರಂಗ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಡಾ.ಎಚ್.ಎಸ್. ಅನಿಲಕುಮಾರ್, ಸಹಾಯಕ ಎಸ್ಪಿ ಯಡಾ ಮಾರ್ಟಿನ್ ಭಾಗವಹಿಸುವರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.