ಹಾಸನ: ಮನೆ ಮುಂದೆ ನಿಲ್ಲಿಸಿದ್ದ ತಮ್ಮ ಜೀಪನ್ನು ಕದಿಯಲು ಯತ್ನಿಸುತ್ತಿದ್ದ ಕಳ್ಳರು, ತಮ್ಮ ಕೃತ್ಯಕ್ಕೆ
ತಡೆವೊಡ್ಡಿದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷರ ಪುತ್ರನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ. ಹಲ್ಲೆಗೆ ಒಳಗಾದ ಮಿಥುನ್ (25) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಳ್ಳುತ್ತಿದ್ದಾರೆ.
ಮಲೆನಾಡು ತಾಂತ್ರಿಕ ವಿಭಾಗದ ಬಳಿ ಇರುವ ವಿದ್ಯುತ್ ನಗರದಲ್ಲಿರುವ ಹುಡಾ ಅಧ್ಯಕ್ಷ ನವೀಲೆ ಅಣ್ಣಪ್ಪನವರ ಪುತ್ರ ಮಿಥುನ್ ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಜೀಪ್ ಅನ್ನು ಕಳ್ಳರು ಕದಿಯುತ್ತಿರುವುದನ್ನು ನೋಡಿದರು. ಕೂಡಲೇ ಎದ್ದು ಹೊರಗೆ ಬಂದು ಕಳ್ಳರನ್ನು ಹಿಡಿಯಲು ಮುಂದಾದರು. ಇದರಿಂದ ಕುಪಿತರಾದ ಕಳ್ಳರು, ಮಿಥುನ್ ಅವರಿಗೆ ಚಾಕುವಿನಿಂದ ಕೈಗೆ ಇರಿದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಚಾಕು ಮತ್ತಿತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಜೀಪ್ ಬಾಗಿಲನ್ನು ನಕಲಿ ಕೀಗಳಿಂದ ತೆಗೆದು, ಚಾಲನೆ ಮಾಡಿದರೇ ಶಬ್ದ ಬರುತ್ತದೆ ಎಂದು ರಸ್ತೆಯಲ್ಲಿ ತಳ್ಳಿಕೊಂಡು ಕಳ್ಳರು ಹೋಗುತ್ತಿದ್ದರು. ಆಗ ಮಿಥುನ್ ತಂದೆಯವರಿಗೆ ಪೊಲೀಸರಿಗೆ ಕೂಡಲೇ ಪೋನ್ ಮಾಡಿ ವಿಷಯ ತಿಳಿಸುವಂತೆ ಹೇಳಿ, ಕಳ್ಳರನ್ನು ಹಿಡಿಯಲು ಬಂದಾಗ ಈ ದುರ್ಘಟನೆ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.