ಇಂದಿನಿಂದ ಫಲ ಪುಷ್ಪ ಪ್ರದರ್ಶನ
ಹಾಸನ: ನಗರದ ಸಿಲ್ವರ್ ಜುಬಿಲಿ ಪಾರ್ಕ್‌ನಲ್ಲಿ ಜ. 26 ರಂದು ಬೆಳಗ್ಗೆ 11 ಕ್ಕೆ ಫಲಪುಷ್ಪ ಪ್ರದರ್ಶನ
ಉದ್ಘಾಟಿಸಲಾಗುವುದು. ಕರ್ನಾಟಕ ಸರ್ಕಾರ, ತೋಟಗಾರಿಕೆ ಇಲಾಖೆ, ಹಾಸನ ಜಿಲ್ಲಾ ಪಂಚಾಯತ್ಹಾಗೂ ಹೇಮಾವತಿ ತೋಟಗಾರಿಕೆ ಸಂಘಗಳ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿದೆ.
ಸಾರ್ವಜನಿಕರು ತೋಟಗಾರಿಕೆಯಲ್ಲಿ ಆಸಕ್ತಿ ಬೆಳಸಿಕೊಳ್ಳುವ ನಿಟ್ಟಿನಲ್ಲಿ ನಾನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಮಕ್ಕಳಿಗೆ ಜ.26 ರಂದು ಬೆಳಿಗ್ಗೆ 10ಕ್ಕೆ ಪುಷ್ಪರಂಗೋಲಿ ಮತ್ತು ಪರಿಸರ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಮನೆಯಂಗಳದಲ್ಲಿ ಅಲಂಕಾರಿಕ ತೋಟಗಳ ನಿರ್ವಹಣೆ, ಲಾನ್, ಗುಲಾಬಿ ತೋಟ ನಿರ್ವಹಣೆ, ಟೆರೇಸ್ ಗಾರ್ಡನಿಂಗ್, ಕುಂಡಗಳಲ್ಲಿ ಅಲಂಕಾರಿಕ ಗಿಡಗಳು ಹಾಗೂ ಕುಂಡಗಳಲ್ಲಿ ತರಕಾರಿ ಬೆಳೆದಿರುವವರಿಗೆ ಸ್ಪರ್ಧೆ, ಇಕೆಬಾನ ಸ್ಪರ್ಧೆ ಹಾಗೂ ಉತ್ತಮ ಬೆಳೆ ಬೆಳೆದು ಪ್ರದರ್ಶಿಸಿದ ರೈತರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ಜ.28 ರಂದು ಸಂಜೆ 5 ಕ್ಕೆ ಸಮಾರೋಪ ಸಮಾರಂಭದಲ್ಲಿ ವಿತರಣೆ ಮಾಡಲಾಗುವುದು.
ಈ ಬಾರಿ ವೈವಿಧ್ಯವಾಗಿ ಆಚರಿಸುವ ದೃಷ್ಟಿಯಿಂದ ಕುಬ್ಜವಾಗಿ ಬೆಳೆಯುವ ಹೂ ಜಾತಿ ಸಸಿಗಳಾದ ಪೆಟ್ಯೂನಿಯಾ, ಸಾಲ್ವಿಯಾ, ಜಿನಿಯಾ, ಚೆಂಡುಹೂ, ಡೈಯಾಂತಸ್, ಡೇರೆಹೂ, ಆಸ್ಟರ್ ಇಂಪೇಷನ್ಸ್, ಆಂಟಿರೀನಮ್, ಸೆಲೋಷಿಯಾ, ಕ್ಯಾಲೆಂಡುಲ, ಹಾಗೂ ಫ್ಯಾನ್ಸಿ ಜೊತೆಗೆ ಗಜೇನಿಯಾ ಹೂ ಗಿಡ ಮತ್ತು ಇನ್ನಿತರೆ ಎಲೆ ಜಾತಿಯ ಸುಮಾರು 25,000 ಗಿಡಗಳನ್ನು ಪ್ರದರ್ಶನಕ್ಕೆ ಬಳಸಲಾಗುತ್ತಿದೆ.
ಹೊಯ್ಸಳ ಲಾಂಛನವನ್ನು ಗುಲಾಬಿ ಹೂವುಗಳಿಂದ ನಿರ್ಮಿಸಿ ಪ್ರದರ್ಶನಕ್ಕೆ ಬಳಸುತ್ತಿರುವುದು ಈ ಬಾರಿ ವಿಶೇಷ. ಜೊತೆಗೆ ಆರ್ಕಿಡ್ಸ್, ಕಾರ್ನೇಷನ್, ಲಿಲ್ಲಿ ಮತ್ತಿತರ ಹೂಗಳ ಜೋಡಣೆ, ಇಕೆಬಾನ, ಥೈ ಆರ್ಟ್ ನಿಂದ ಡ್ರಾಗನ್ ಬೂಟ್, ಬಾಳೆದಿಂಡಿನ ಮಂಟಪ ಕಲಾಕೃತಿಗಳನ್ನು ಒಳಗೊಂಡಂತೆ ಬಿದಿರು, ಕಾಫಿಯ ಬಡ್ಡೆ, ಕಬ್ಬಿನ ಜಲ್ಲೆಗಳು, ತೆಂಗಿನ ಸುರುಳಿಗಳು ಹಾಗೂ ಇನ್ನಿತ್ತರೆ ವಸ್ತುಗಳನ್ನು ಸಹ ಅಲಂಕಾರಿಕವಾಗಿ ಬಳಸಲಾಗುತ್ತಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.