ಹೆಣ್ಣು ಮಕ್ಕಳ ಸಾಮರ್ಥ್ಯ ಹೆಚ್ಚಿಸುವುದು ಮೀನಾ ಯೋಜನೆ ಗುರಿ: ಪದ್ಮಮ್ಮ
ಹೊಳೆನರಸೀಪುರ: ಪ್ರಾಥಮಿಕ ಹಂತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಸವಲತ್ತು ನೀಡುವ ಸಲುವಾಗಿ ಸರ್ಕಾರ ಅನೇಕ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಹೆಣ್ಣು ಮಕ್ಕಳನ್ನು ಒಳಗೊಂಡಂತೆ ಸಮುದಾಯದ ಮಾನವ ಸಾಮರ್ಥ್ಯ ಹೆಚ್ಚಿಸುವುದು ಮೀನಾ ಯೋಜನೆಯ ಗುರಿಯಾಗಿದೆ. ಈ ಕಾರ್ಯಕ್ರಮದಿಂದಾಗಿ ಪ್ರಸ್ತುತ ಹೆಣ್ಣು ಮಕ್ಕಳ ಆತ್ಮವಿಶ್ವಾಸದ ಮಟ್ಟ ಹೆಚ್ಚಿದೆ ಎಂದು ಡಯಟ್ ಪ್ರಾಂಶುಪಾಲರಾದ ಪಿ.ಪದ್ಮಮ್ಮ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮೀನ ಮೇಳ ಹಾಗೂ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮಕ್ಕಳ ಮೀನ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳ ದಾಖಲಾತಿ, ಕಲಿಕೆಗೆ ಸೌಲಭ್ಯ: ಮೀನ ಕಾರ್ಯಕ್ರಮದ ಮೂಲಕ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿನ ಹೆಣ್ಣು ಮಕ್ಕಳ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಶಿಕ್ಷಣ ಇಲಾಖೆ ಶ್ರಮಿಸುತ್ತಿದ್ದು, ಈ ಕಾರ್ಯಕ್ರಮದ ಮೂಲಕ ಹೆಣ್ಣು ಮಕ್ಕಳ ದಾಖಲಾತಿ ಮತ್ತು ಕಲಿಕೆಗೆ ಸೌಲಭ್ಯ ಒದಗಿಸಿ ಹೆಣ್ಣು ಮಕ್ಕಳು ಶಾಲೆಯಿಂದ ಮತ್ತು ಶಿಕ್ಷಣದಿಂದ ಹೊರಗುಳಿಯದಂತೆ ಕಾರ್ಯಕ್ರಮ ರೂಪಿಸುವುದಾಗಿದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಪ್ರತಿನಿತ್ಯ ದೇಶದಾದ್ಯಂತ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮೀನ ಕಾರ್ಯಕ್ರಮವು ಹೆಚ್ಚಿನ ರಕ್ಷಣೆ ಹಾಗೂ ಶಿಕ್ಷಣದ ಮೂಲಕ ಸಾಮಾಜಿಕ ನೆಲೆಗಟ್ಟಿನಡಿಯಲ್ಲಿ ಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕರು, ಪೋಷಕರು ಹಾಗೂ ಸಮಾಜ ಮಾಡಬೇಕಿದೆ ಎಂದು ನುಡಿದರು. ಮುಖ್ಯ ಅತಿಥಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜು ವಿವಿಧ ಕಾರಣಗಳಿಂದಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಅರ್ಧಕ್ಕೆ ಶಾಲೆ ಬಿಡುವ ಹೆಣ್ಣು ಮಕ್ಕಳನ್ನು ಗುರುತಿಸಿ ಅವರನ್ನು ಹೆಚ್ಚಿನ ಆದ್ಯತೆ ಯೊಂದಿಗೆ ಶಾಲೆಗೆ ದಾಖಲಿಸಿ, ಆ ನಂತರದಲ್ಲಿ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮೀನ ಕಾರ್ಯಕ್ರಮದ ಮೂಲಕ ಹಲವು ಅವರ ಬಲವರ್ಧನೆಗೆ ಪೂರಕವಾದ ಕಾರ್ಯಕ್ರಮಗಳನ್ನು ಮೀನ ಕಾರ್ಯಕ್ರಮದಡಿಯಲ್ಲಿ ರೂಪಿಸಲಾಗಿದೆ ಎಂದರು.
ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ: ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷೆ ವಿನೋದ ಅವರು ಮಾತನಾಡಿ, ವಿವಿಧ ಚಟುವಟಿಕೆಗಳ ಮೂಲಕ ಹೆಣ್ಣು ಮಕ್ಕಳನ್ನು ಶಿಕ್ಷಣದಲ್ಲಿ ತೊಡಗಿಸಿ ಅವರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ಮೂಡಿಬರಲಿ ಎಂದು ಆಶಿಸಿದರು. ತಹಸೀಲ್ದಾರ್ ಈಶ್ವರಪ್ಪ, ಸರ್ವ ಶಿಕ್ಷಣ ಅಭಿಯಾನದ ಎಪಿಓ ದೇವರಾಜು, ಡಿವೈಪಿಸಿ ಫಣೀಶ್ ಮಾತನಾಡಿದರು.
ಕೆಳಸ್ಥರಕ್ಕೆ ತಳ್ಳುವ ಕಾರ್ಯ: ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಕೆ.ಎಂ.ಚಂದ್ರಮತಿ ಮಾತನಾಡಿ ಧ್ಯೇಯ, ಆತ್ಮವಿಶ್ವಾಸ ಹಾಗೂ ಭರವಸೆಗಳನ್ನು ಹೆಣ್ಣುಮಕ್ಕಳಲ್ಲಿ ಮೂಡಿಸುವ ಕೆಲಸವನ್ನು ಶಿಕ್ಷಕರು, ಪೋಷಕರು ಕೈಗೊಳ್ಳಬೇಕಿದೆ ಎಂದರು. ಮುಖ್ಯ ಶಿಕ್ಷಕಿ ನಾಗವೇಣಿ ಮೀನ ಕಾರ್ಯಕ್ರಮದ ಉದ್ಧೇಶ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ಸ್ವಾಗತಿಸಿದರು. ಬಿಆರ್ಸಿ ಕುಮಾರ್, ಆದರ್ಶ ವಿದ್ಯಾಶಾಲೆಯ ಪ್ರಾಂಶುಪಾಲ ಎಸ್.ಆರ್.ಲೋಕೇಶ್, ಅಕ್ಷರ ದಾಸೋಹ ಅಧಿಕಾರಿ ಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ರಾಜೇಗೌಡ, ಸೋಮಯ್ಯ, ಡಿಡಿಪಿಓ ಕಚೇರಿ ಅಧಿಕಾರಿ ರುದ್ರೇಶ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.