ಅಂಕ ತಾರತಮ್ಯ: ವಿದ್ಯಾರ್ಥಿಗಳ ಪ್ರತಿಭಟನೆ
ಹೊಳೆನರಸೀಪುರ: ವಿದ್ಯಾರ್ಥಿಗಳ ವಿರುದ್ಧ ವೈಯಕ್ತಿಕ ದ್ವೇಷದಿಂದ ಆಂತರಿಕ ಅಂಕ ನೀಡುವಲ್ಲಿ ಪ್ರಾಂಶುಪಾಲೆ ಪಿ.ಸುಶೀಲಮ್ಮ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಹಳ್ಳಿಮೈಸೂರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ಧ ಕಾಲೇಜು ಆವರಣದಲ್ಲಿಯೇ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಕಾಲೇಜಿನ ಎಲ್ಲ ವಿಷಯಗಳಲ್ಲೂ ವಿದ್ಯಾರ್ಥಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ, ಪ್ರಾಂಶುಪಾಲರ ಆಡಳಿತದಲ್ಲಿನ ಲೋಪದ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸೆಮಿಸ್ಟರ್ ಪರೀಕ್ಷೆಯ ಇತಿಹಾಸ ವಿಷಯದಲ್ಲಿನ ಆಂತರಿಕ ಅಂಕಗಳನ್ನು ನೀಡುವ ಸಂದರ್ಭದಲ್ಲಿ ತಮ್ಮ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳನ್ನು ನೀಡಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ನೇರವಾಗಿಯೇ ಆರೋಪಿಸಿದ್ದಾರೆ.
ಪ್ರಾಂಶುಪಾಲೆ ಪಿ.ಸುಶೀಲಮ್ಮ ಅವರು ಪಾಠ ಮಾಡಿರುವುದು ಕೇವಲ 8ಗಂಟೆ ಮಾತ್ರ ಎಂದು ಆರೋಪಿಸಿರುವ ವಿದ್ಯಾರ್ಥಿಗಳು, 5ನೇ ಸೆಮಿಸ್ಟರ್ನಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ ಹಾಕದೆ, ವಿದ್ಯಾರ್ಥಿಗಳೂ ನೀಡಿರುವ ಅಸೈನ್ಮೆಂಟ್ ಮೌಲ್ಯಮಾಪನ ಮಾಡದೆ, ಕಿರು ಪರೀಕ್ಷೆ ನಡೆಸದೇ ಬೇಕಾಬಿಟ್ಟಿಯಾಗಿ ಆಂತರಿಕ ಅಂಕ ನೀಡಿರುತ್ತಾರೆ ಎಂದು ಸ್ಥಳದಲ್ಲಿ ಹಾಜರಿದ್ದ ಗ್ರಾಮಸ್ಥರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರ ಎದುರು ವಿದ್ಯಾರ್ಥಿಗಳು ದೂರಿದರು.
ಸಿ.ಟಿ.ರವಿ ನನ್ನ ಶಿಷ್ಯ: ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ನನ್ನ ಶಿಷ್ಯ, ನೀವು ಎಬಿವಿಪಿಯವರು ನನ್ನನ್ನು ಏನೂ ಮಾಡಲು ಆಗುವುದಿಲ್ಲ ಎಂದು ಬೆದರಿಸುವುದಲ್ಲದೇ ದಬ್ಬಳಿಕೆ ನಡೆಸುತ್ತಾರೆ ಎಂದು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಆರೋಪಿಸಿದರು.
ಪ್ರಾಂಶುಪಾಲರು ಹಲವಾರು ವಿದ್ಯಾರ್ಥಿನಿಯರ ಜೊತೆಯಲ್ಲಿಯೂ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ದೂರಿದ್ದಾರೆ. ಉಗ್ರ ಪ್ರತಿಭಟನೆ ಎಚ್ಚರಿಕೆ: ಪ್ರಾಂಶುಪಾಲರ ಈ ದುರಾಡಳಿತ ನೀತಿಯು ಹೀಗೆಯೇ ಮುಂದುವರೆದಲ್ಲಿ ವಿದ್ಯಾರ್ಥಿಗಳು ಎಬಿವಿಪಿ ಸಹಕಾರದೊಂದಿಗೆ ಪ್ರಾಂಶುಪಾಲರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಕಾಲೇಜಿನ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.