ಅರಣ್ಯಾಧಿಕಾರಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ
ಹಾಸನ: ಸಕಲೇಶಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಚೌಧರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿರುವ ಜಯ ಕರ್ನಾಟಕ ಕಾರ್ಯಕರ್ತರು, ಈ ಕೂಡಲೇ ಚೌಧರಿ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮಂಗಳವಾರ ಈ ಸಂಬಂಧ ಜಯ ಕರ್ನಾಟಕ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಚೌಧರಿ ನ.22, 2012ರಂದು ರಾತ್ರಿ ಸಕಲೇಶಪುರ ತಾಲೂಕಿನ ಯಶಳೂರು ವಲಯ ವ್ಯಾಪ್ತಿಯಲ್ಲಿ 3 ಲಾರಿ ಹಿಡಿದಿದ್ದು, ಈ ಲಾರಿಗಳಲ್ಲಿ ಸೌದೆ ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಆ ಲಾರಿಗಳನ್ನು ಇವರು ತಡೆದು ಪರಿಶೀಲನೆ ನಡೆಸಿದರು. ನಂತರ ರಹದಾರಿ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದರಿಂದ ಲಾರಿಗಳನ್ನು ಸೀಜ್ ಮಾಡಿದರು.
ಲಾರಿ ಸಂಖ್ಯೆ ಕೆಎ18 ಎ 858 ಕ್ಕೆ 20 ಸಾವಿರ ರು.ಗಳ ದಂಡ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡರು. ಲಾರಿ ಸಂಖ್ಯೆ ಕೆಎ46 1047 ಕ್ಕೆ 25 ಸಾವಿರ ರು.ಗಳ ದಂಡ ಮತ್ತು ಸೌದೆಗಳನ್ನು ಮುಟ್ಟಗೋಲು ಹಾಕಿಕೊಂಡಿದ್ದಾರೆ. ನಂತರ ಲಾರಿ ಸಂಖ್ಯೆ ಕೆಎ46 450ಕ್ಕೆ 14 ಸಾವಿರ ರು.ಗಳ ದಂಡ ಮತ್ತು ಸೌದೆಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು, ಲಾರಿಗಳನ್ನು ಹಿಡಿಯಲಾಗಿತ್ತು.
ಈ ಲಾರಿಗಳು ರಹದಾರಿ ಅಲ್ಲದೆ ಅಕ್ರಮವಾಗಿ ಸೌದೆ ಮತ್ತು ಬಿಲ್ಲೆಟ್ಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಆಪಾದಿತರಿಂದ ಬಿ.ಕೆ.ಚೌಧರಿ ತಲಾ 7,500 ರು.ನಂತೆ 22,500 ರು.ಗಳನ್ನು ಲಂಚವಾಗಿ ಪಡೆದು ಅರೋಪಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳಿಂದ ತಾಲೂಕಿನಲ್ಲಿ ಬೆಲೆ ಬಾಳುವಂತಹ ವಸ್ತುಗಳು ಹಾಗೂ ನೈಸರ್ಗಿಕ ಸಂಪತ್ತಿನ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಆದ್ದರಿಂದ ಕೂಡಲೇ ಲಂಚ ಪಡೆದಿರುವ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಸುಪ್ರದೀಪ್ತ ಯಜಮಾನ್, ಪ್ರವೀಣ್ಕುಮಾರ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.