'ಗ್ರಹಿಕೆ ಬರಹಗಾರನ ಮೂಲ ದ್ರವ್ಯ'
ಹಾಸನ: ನಮ್ಮ ಸತ್ತಮುತ್ತಲಿನ ವಿಚಾರಗಳನ್ನು ಸರಿಯಾಗಿ ಗ್ರಹಿಸದೇ ಹೋದರೆ ಒಳ್ಳೆಯ ಬರವಣಿಗೆ ಸಾಧ್ಯವಿಲ್ಲ ಎಂದು ಖ್ಯಾತ ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಆರ್.ಸಿ.ರಸ್ತೆಯ ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ಆವರಣದಲ್ಲಿ ಯುವ ಲೇಖಕರ ಬಳಗ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಬರವಣಿಗೆಗೆ ಗ್ರಹಿಕೆ ಎನ್ನುವುದು ಮೂಲದ್ರವ್ಯ ಯುವಕರು ತಮ್ಮೊಳಗು ಹಾಗೂ ಹೊರಗನ್ನು ಗಮನಿಸುತ್ತಾ ಇರಬೇಕು ಎಂದು ಕಿವಿಮಾತು ಹೇಳಿದರು. ನಾವು ನಡೆಯುವಾಗ ದಾರಿಗಾಗಿ ಅವರಿವರನ್ನು ವಿಚಾರಿಸುತ್ತೇವೆ. ಆದರೆ, ಅದೆ ದಾರಿಯಲ್ಲಿ ನಡೆಯಲು ನಡೆದೇ ತೀರುತ್ತೇವೆ ಎಂಬ ಛಲವಿರಬೇಕಾಗುತ್ತದೆ.ಸಾಹಿತ್ಯ, ಸಂಗೀತ, ಕಲೆ ಎಲ್ಲರಿಗೂ ದಕ್ಕುವಂತಹುದಲ್ಲ. ಕಲೆ ಎಂಬುದು ಮಾಯಾಜಗತ್ತು. ಮಾಯಾಜಗತ್ತಿನಲ್ಲಿ ವಿಹರಿಸುವವರು ಮಾತ್ರ ಸಾಹಿತ್ಯವನ್ನು ದಕ್ಕಿಸಿಕೊಳ್ಳಬಲ್ಲರು ಎಂದು ಅಭಿಪ್ರಾಯಪಟ್ಟರು. ಯಾರಿಗೆ ಭಾವನೆಗಳಿರುತ್ತವೆಯೇ ಅವರೆಲ್ಲ ಕವಿಗಳೇ ಆಗಿರುತ್ತಾರೆ. ಆ ಭಾವನೆಗಳನ್ನು ಜತನದಿಂದ ಕಾಪಾಡಿಕೊಳ್ಳುವವರು ಮುಂದೆಯೂ ಬರೆಯುತ್ತಾ ಹೋಗುತ್ತಾರೆ. ಕೆಲವರು ತಮ್ಮ ಯೌವನದಲ್ಲೇ ಬರೆಯುವುದನ್ನು ನಿಲ್ಲಿಸಿಬಿಡುತ್ತಾರೆ ಎಂದರು.ಬರವಣಿಗೆ ಎಂಬುದು ಒಳಗಿನ ಒತ್ತಡದಿಂದ ಹುಟ್ಟಿಕೊಳ್ಳುತ್ತದೆ. ನೀರಿನಲ್ಲಿ ಮುಳುಗಿಸಿ ತಲೆಯನ್ನು ಅದುಮುತ್ತಿದ್ದಾಗ ಪ್ರಾಣವಾಯುವಿಗೆ ಹಂಬಲಿಸುವಂತೆ ಬರಹಗಾರನಿಗೆ ಅಂತಹ ಒತ್ತಡ ಒದಗಿದಾಗ ಒಳ್ಳೆಯ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ಹೇಳಿದರು.
ಬರಹಗಾರನಾದವನಿಗೆ ಸಮಾಜದ ಆಗು ಹೋಗುಗಳ ಕಡೆಗೆ ಗಮನವಿರಬೇಕಾಗುತ್ತದೆ. ಒಬ್ಬ ಸಾಹಿತಿ, ಸಮಾಜ ವಿಜ್ಞಾನಿ, ಇತಿಹಾಸಕಾರ, ಮನೋವೈಜ್ಞಾನಿಕ ಹೀಗೆ ಏನೆಲ್ಲಾ ಆಗಿರುತ್ತಾನೆ. ಹೀಗಾಗಿ ಅವನು ತನ್ನ ಜವಬ್ದಾರಿ ಅರಿತುಕೊಂಡು ನಡೆಯಬೇಕಾಗುತ್ತದೆ. ಸಮಕಾಲೀನ ಸಮಸ್ಯೆಗಳಿಗೆ ಮಾಧ್ಯಮಗಳಿಗಿಂತಲೂ ಸಾಹಿತಿಯ ಅಭಿಪ್ರಾಯ ಮುಖ್ಯವಾಗುವುದು ಇದೇ ಕಾರಣಕ್ಕಾಗಿಯೇ ಎಂದರು.
ಸುನಿಲ್ ಬಂಡಿಗನಹಳ್ಳಿ, ಶರತ್ ಹೆಚ್.ಕೆ, ಭವ್ಯನವೀನ್, ಪ್ರದೀಪ್, ಮುಕುಂದರಾಜು, ಲಕ್ಷಿಕಾಂತ್, ಕಾಣಿಕ್ ರಾಜ್, ಭಾಸ್ಕರ್, ಯಶವಂತ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.