ರೈತರಿಗೆ ವಂಚನೆ: ಪ್ರಾಂತ ರೈತ ಸಂಘ ಪ್ರತಿಭಟನೆ
ಹಾಸನ: ರೈತರಿಗೆ ವಂಚನೆ ಮಾಡಿರುವ ಸ್ವಾಮಿ ಟ್ರೇಡರ್ಸ್ ವಿರುದ್ಧ ಕ್ರಮ ಕೈಗೊಂಡು, ಪರಿಹಾರ ಕೊಡಿಸುವಂತೆ ಒತ್ತಾಯಿಸಿ ಮೋಸಕ್ಕೆ ಒಳಗಾದ ರೈತರು ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗೆ ಮನವಿ ನೀಡಿದರು. ತಮಿಳುನಾಡು ಮೂಲದ ಪ್ರೊ.ಈ.ಕೆ.ಪರಿಯಸ್ವಾಮಿ ಎಂಬವರು ಸ್ವಾಮಿ ಟ್ರೇಡರ್ಸ್ ಕಂಪನಿಯು ತಾಲೂಕಿನ ಹಲವು ಗ್ರಾಮಗಳಿಗೆ ಔಷಧ, ಗಿಡಮೂಲಿಕೆಗೆ ಸಂಬಂಧಿಸಿದ ಕೋಲಿಯಸ್ ಎಂಬ ಗೆಣಸಿನ ಬೆಳೆಯನ್ನು ಬೆಳೆಯಲು ಹೇಳಿದ್ದರು. ಇದರಿಂದ 6 ತಿಂಗಳಲ್ಲೇ ನೀವು ಹೆಚ್ಚಿನ ಹಣಗಳಿಸಬಹುದು ಎಂದು ರೈತರಿಗೆ ಆಮಿಷ ಒಡ್ಡಿದ್ದರು.
ತಾಲೂಕಿನಲ್ಲಿ ಸುಮಾರು 50 ರಿಂದ 60 ರೈತರಿಗೆ ಸುಮಾರು 150 ಹೆಕ್ಟೆರ್ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲು ಕಂಪನಿಯಿಂದ ಗೆಣಸಿನ ಬೆಳೆ ಹಾಕಿಸಿದ್ದು, 5 ತಿಂಗಳ ನಂತರ ಈ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ ರೈತರು ಸಾವಿರಾರು ರು.ಗಳನ್ನು ನಷ್ಟ ಮಾಡಿಕೊಂಡಿದ್ದಾರೆ. ಈ ರೀತಿ ಬೆಳೆ ನಾಶವಾದ ಮೇಲೆ ಕಂಪನಿ ಸಂಪರ್ಕಿಸಲು ಪ್ರಯತ್ನಿಸಿದರೆ ಯಾರು ಸಿಗುತ್ತಿಲ್ಲ ಎಂದು ಅಲವತ್ತುಕೊಂಡರು.
ಜಿಲ್ಲಾಡಳಿತವು ಮಧ್ಯಪ್ರವೇಶ ಮಾಡಿ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು, ರೈತರಿಗೆ ನಷ್ಟ ಉಂಟಾಗಿರುವುದನ್ನು ತುಂಬಿಕೊಡುವಂತೆ ಆದೇಶಿಸಬೇಕು ಮತ್ತು ಈ ರೀತಿ ಅನಧಿಕೃತ ಕಂಪನಿಗಳ ಹೆಸರಿನಲ್ಲಿ ರೈತರಿಗೆ ವಂಚನೆ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಎಚ್ಚರವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಎಚ್.ಆರ್.ನವೀನ್ಕುಮಾರ್, ಪದಾಧಿಕಾರಿಗಳಾದ ಓದಯ್ಯ, ಶಾಂತಯ್ಯ, ಕುಮಾರಸ್ವಾಮಿ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.