ಶಾಸಕರ ವಿರುದ್ಧ ಕೆಜೆಪಿ ಪ್ರತಿಭಟನೆ
ಸಕಲೇಶಪುರ: ಶಾಸಕರ ಕುಮ್ಮಕ್ಕಿನಿಂದಾಗಿ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೆಜೆಪಿ ಮುಖಂಡರು ಉಪವಿಭಾಗಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಣ್ಣ ಹಿಡುವಳಿದಾರರಿಗೆ ಸಿಲ್ವರ್ ಗಿಡಗಳನ್ನು ವಿತರಿಸಲಾಗಿದ್ದು ಪ್ರತಿ ಗ್ರಾಪಂಗಳಿಗೆ 10 ಸಾವಿರ ಸಿಲ್ವರ್ ಬುಟ್ಟಿಗಿಡಗಳನ್ನು ಸಾಮಾಜಿಕ ಅರಣ್ಯ ಇಲಾಖೆಯವರು ಬೆಳೆಸಿ ಕೊಡಲಾಗಿದ್ದು, ಗ್ರಾಪಂ ಅಧಿಕಾರಿಗಳು ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಹಾಗೂ ಸಾಗಾಣಿಕೆ ಮಾಡುವಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿ, ಗ್ರಾಪಂ ಕಚೇರಿಗಳ ಹತ್ತಿರದಲ್ಲಿದ್ದರು ಸಹ ಸಾಗಣಿಕೆ ವೆಚ್ಚವೆಂದು 44 ಸಾವಿರ ಪಡೆದಿದ್ದಾರೆ.
ಈ ರೀತಿಯ ಅವ್ಯವಹಾರಗಳು ತಾಲೂಕಿನ 26 ಗ್ರಾಮ ಪಂಚಾಯ್ತಿಗಳಲ್ಲೂ ನಡೆದಿದ್ದು, ಇದಕ್ಕೆಲ್ಲ ಶಾಸಕರ ಕುಮ್ಮಕ್ಕೆ ಕಾರಣ ಎಂದು ಆರೋಪಿಸಿದ ಮುಖಂಡರು ಲಕ್ಷಾಂತರ ರು. ಭ್ರಷ್ಟಾಚಾರದಲ್ಲಿ ಶಾಸಕರು ಭಾಗಿಯಾಗಿದ್ದಾರೆಂದು ಆರೋಪಿಸಿದರು. ತಾಪಂ ಅಧ್ಯಕ್ಷರಿಗೆ ಸರ್ಕಾರಿ ವಾಹನ ಸೌಲಭ್ಯವಿದ್ದರು ಕೂಡ ತಾಪಂ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷರಿಗೆ ವಾಹನ ನೀಡದೆ ದಲಿತರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಈ ವಿಚಾರ ಶಾಸಕರಿಗೆ ತಿಳಿದಿದ್ದರೂ ದಲಿತರಿಗೆ ಆಗುವ ಅನ್ಯಾಯದ ವಿರುದ್ದ ದ್ವನಿಎತ್ತದೆ ದಲಿತರ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.
ದಲಿತರ ಉದ್ಧಾರಕ್ಕಾಗಿ ಸರಕಾರ ಜಾರಿಗೆ ತಂದಿರುವ ಗಂಗಾಕಲ್ಯಾಣ, ಇಂದಿರಾ, ಬಸವ , ಆಶ್ರಯ, ಅಂಬೇಡ್ಕರ್ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಹ ವಿಫಲವಾಗಿದ್ದಾರೆಂದು ದೂರಿದರು.ಪ್ರತಿಭಟನೆಯಲ್ಲಿ ಎಚ್.ಆರ್. ನಾರಾಯಣ, ಕಾಡಪ್ಪ, ಪರ್ವತಯ್ಯ, ತಿಪ್ಪೆಸ್ವಾಮಿ, ರವೀಶ್, ಮಂಜು ಯಸಳೂರು ಇತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.