ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚಾವಣಿ ರಿಪೇರಿಗೆ ವಿದ್ಯಾರ್ಥಿಗಳ ಬಳಕೆ!

Parashurama
Updated On : 1 Mar 2013, 9:53 am

ಹಾಸನ: ಸಮವಸ್ತ್ರ ಧರಿಸಿ, ಪುಸ್ತಕ ಹಿಡಿದು ಪಾಠ ಕಲಿಯಬೇಕಾದ ಪ್ರೌಢಶಾಲಾ ಮಕ್ಕಳ ಕೈಯಲ್ಲಿ ಮಂಗಳೂರು ಹೆಂಚನ್ನು ಹೊರಿಸಿ, ಚಾವಣಿ ರಿಪೇರಿ ಮಾಡಿಸಿದ ಘಟನೆ ನಗರದ ಶಾಲೆಯೊಂದರಲ್ಲಿ ಶುಕ್ರವಾರ ನಡೆದಿದೆ.
110 ವರ್ಷಗಳ ಇತಿಹಾಸವಿರುವ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಕೂಲಿಯಾಳುಗಳಂತೆ ನಡೆಸಿಕೊಂಡು, ಶಿಥಿಲವಾಗಿರುವ ಹಳೆ ಶಾಲಾ ಕಟ್ಟಡದ ಮೇಲೆ ಹತ್ತಿಸಿ ಸುಮಾರು ಆರು-ಏಳು ಮಕ್ಕಳಿಂದ ಮಂಗಳೂರು ಹೆಂಚನ್ನು ತೆಗಿಸಿ, ಹೊರಿಸಿದ್ದಾರೆ.
ವಿದ್ಯಾರ್ಥಿಗಳಿಂದ ಹೆಂಚನ್ನು ತೆಗೆಸುತ್ತಿದ್ದ ವಿಚಾರ ಬಹಿರಂಗವಾಗುತ್ತಿದ್ದಂತೆ ಶಾಲಾ ಸಿಬ್ಬಂದಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪಿಸುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮುಂದಾದರು. ಪಾಠ ಕಲಿಯಲು ಬರುವ ಮಕ್ಕಳಿಂದ ಕೆಲಸ ಮಾಡಿಸಿದವರ ವಿರುದ್ಧ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಸೂಕ್ತ ತನಿಖೆ ಕೈಗೊಂಡು ಆರೋಪ ಎಸಗಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಪೋಷಕರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದ ಮಕ್ಕಳನ್ನು ಪಕ್ಕದ ಶಿಥಿಲಗೊಂಡಿರುವ ಹಳೆ ಶಾಲೆಯ ಕಟ್ಟಡದ ಮೇಲೆ ಏಣಿ ಮೂಲಕ ಏರಿ, ಅಲ್ಲಿರುವ ಹಳೆ ಹೆಂಚುಗಳನ್ನು ಶಾಲೆಯೊಳಗೆ ಸಾಗಿಸಲು ಶಿಕ್ಷಕರು ಸೂಚಿಸಿದ್ದಾರೆ. ಕಟ್ಟಡದ ಮೇಲೆ ಹತ್ತಿಸಿದ ಕೆಲವು ವಿದ್ಯಾರ್ಥಿಗಳಂತೂ ಭಯದಿಂದಲೇ ಶಿಕ್ಷಕರು ಹೇಳಿದ ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ.
ಸಾರ್ವಜನಿಕರಿಂದ ಖಂಡನೆ: ಮಕ್ಕಳ ಕೈಯಲ್ಲಿ ಹೆಂಚುಗಳನ್ನು ಸಾಗಿಸುತ್ತಿರುವ ವಿಚಾರ ಬಯಲಾಗಿ, ಶಾಲಾ ಆವರಣಕ್ಕೆ ಮಾಧ್ಯಮದವರು ಸೇರಿದಂತೆ ಸಾರ್ವಜನಿಕರು ಆಗಮಿಸಿದಾಗ ಕೆಲವು ಮಕ್ಕಳು ಹೆಂಚುಗಳನ್ನು ಬಿಟ್ಟು ಓಡಿದರು. ಇನ್ನೂ ಕೆಲವರು ಶಾಲಾ ಸಿಬ್ಬಂದಿ ಹೇಳಿದಂತೆ ಕೆಲಸ ಮಾಡುತ್ತಿದ್ದರು. ಇರುವ ಶಾಲೆಯಲ್ಲಿ ಹೆಂಚುಗಳು ಒಡೆದು ಹೋಗಿದ್ದರಿಂದ ಹಳೆ ಕಟ್ಟಡದಿಂದ ಹೆಂಚು ತರಲು ಡಿ ದರ್ಜೆ ನೌಕರರಿಗೆ ಸೂಚಿದ್ದರು. ಅವರು ಶಾಲಾ ಮಕ್ಕಳಿಂದ ಈ ಕೆಲಸ ಮಾಡಿಸುತ್ತಿದ್ದನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.
ಅರುಣ್, ದೀಕ್ಷಿತ್, ಚಿದಾನಂದ್ ಸೇರಿದಂತೆ ಇತರೆ ಮಕ್ಕಳಿಂದ ಹೆಂಚು ತೆಗೆಯುವ ಕೆಲಸವನ್ನು ಮಾಡಿಸಲಾಗುತ್ತಿತ್ತು. ಮಾಧ್ಯಮದವರು ಶಾಲೆ ಆವರಣಕ್ಕೆ ತೆರಳುತ್ತಿದ್ದಂತೆ ಸಿಬ್ಬಂದಿ ವರ್ತನೆಯೇ ಬದಲಾಯಿತು. ಕೂಲಿಗಳಿಂದ ಮಾಡಿಸಬೇಕಾದ ಕೆಲಸವನ್ನು ಮಕ್ಕಳಿಂದ ಮಾಡಿಸಿದ್ದಕ್ಕೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಪೋಷಕರು, ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments