ಬಾಣಾವರ ಕಾಲೇಜಲ್ಲಿ ಮಾರುಕಟ್ಟೆ ವೀಕ್ಷಣೆ
ಬಾಣಾವರ (ಅರಸೀಕೆರೆ ತಾ.): ಅರ್ಥಶಾಸ್ತ್ರ ಎಂದರೆ ಬರಿಯ ಅಂಕಿ ಅಂಶಗಳ ಆಟವಲ್ಲ. ಅಂಕಿ-ಅಂಶಗಳ ಹಿಂದೆ ಮಾರುಕಟ್ಟೆಯ ಏಳುಬೀಳು, ವ್ಯಾಪಾರಿಗಳ ಸುಖ ದುಃಖವೂ ಅಡಗಿರುತ್ತದೆ. ಆರ್ಥಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವೇದಿಕೆ ವಿದ್ಯಾರ್ಥಿಗಳಿಗೆ ಮಾರುಕಟ್ಟೆ ವೀಕ್ಷಣೆ ಕಾರ್ಯಕ್ರಮ ಏರ್ಪಡಿಸಿತ್ತು.
ಐಕ್ಯೂಎಸಿ ಕಾರ್ಯಕ್ರಮ ಪಟ್ಟಿಯಂತೆ ಆಯೋಜಿಸಿದ್ದ ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ವ್ಯಾಪಾರಿಗಳ ಕಷ್ಟ ಸುಖಗಳ ಜತೆಗೆ ಮನೆಯ ನಿರ್ವಹಣೆಯ ವಿಚಾರಗಳ ಬಗ್ಗೆಯೂ ಜ್ಞಾನ ಪಡೆದುಕೊಂಡರು. ವ್ಯಾಪಾರಿಗಳ ಬದುಕಿನ ಏರುಪೇರು ಅರಿಯುವುದರ ಜತೆಗೆ ವಿದ್ಯಾರ್ಥಿಗಳು ಗಗನಕ್ಕೇರುತ್ತಿರುವ ವಸ್ತುಗಳ ಬೆಲೆಗಳನ್ನು ಕೇಳಿ ಅಚ್ಚರಿ ವ್ಯಕ್ತಪಡಿಸಿದರು.
ಸಂತೆಯ ದಿನವಾದ್ದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಇತ್ತು. ಈ ಮಧ್ಯದಲ್ಲೇ ವಿದ್ಯಾರ್ಥಿಗಳು ಬಟ್ಟೆ ಅಂಗಡಿ, ಮಡಿಕೆ, ಪಾದರಕ್ಷೆ ಅಂಗಡಿ, ತಿನಿಸುಗಳ ಅಂಗಡಿ, ಬಿದಿರು ಬುಟ್ಟಿ ಅಂಗಡಿ, ಸೌಂದರ್ಯ ವರ್ಧಕಗಳ ಅಂಗಡಿ, ಹಣ್ಣು, ತರಕಾರಿ ಅಂಗಡಿಗಳಿಗೆ ಭೇಟಿ ನೀಡಿ ಮಾಲೀಕರು ಮತ್ತು ಗ್ರಾಹಕರ ಬಗ್ಗೆ ಮಾಹಿತಿ ಕಲೆಹಾಕಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಾದಪ್ಪ ಮಾರ್ಗದರ್ಶನದಲ್ಲಿ ಅಂತಿಮ ಬಿ.ಎ ತರಗತಿಯ 42 ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.
ತರಕಾರಿ, ಹಣ್ಣು ಹಂಪಲು ಎಲ್ಲಿಂದ ತರುತ್ತೀರಾ, ನಿಮಗೆ ಎಷ್ಟು ಲಾಭ ಸಿಗುತ್ತದೆ, ವ್ಯಾಪಾರವಾಗದೇ ಉಳಿದ ವಸ್ತುಗಳನ್ನು ಹೇಗೆ ಸಂರಕ್ಷಿಸುತ್ತಿರಾ, ನಿಮ್ಮ ಕುಟುಂಬದ ನಿರ್ವಹಣೆ ಹಾಗೂ ನಿಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ, ನಿಮ್ಮ ಲಾಭ ನಷ್ಟಗಳನ್ನು ಹೇಗೆ ಅಳೆಯುತ್ತೀರಾ , ಜನರೂಂದಿಗೆ ವ್ಯವಹರಿಸುವ ಕಲೆ ಏನು ಮುಂತಾದ ಹತ್ತು ಹಲವು ಪ್ರಶ್ನೆಗಳನ್ನು ಕೇಳಿ ವ್ಯಾಪಾರಿ ವೃತ್ತಿಯ ಮಾಹಿತಿ ಸಂಗ್ರಹಿಸಿದರು.
ವಿದ್ಯಾರ್ಥಿಗಳಿಗೆ ಬದುಕಿನ ನೈಜ ಅನುಭವ ಹಾಗೂ ಎಲ್ಲ ಸ್ಥರದ ಜನರ ಜೀವನ ಕ್ರಮಗಳನ್ನು ಅರಿಯಲು
ಜ್ಞಾನದ ಮಟ್ಟ, ಚಿಂತನೆ, ಆಲೋಚನಾ ಶಕ್ತಿ ಹೆಚ್ಚಿಸಲು ಮಾರುಕಟ್ಟೆ ವೀಕ್ಷಣೆ ಕಾರ್ಯಕ್ರಮ ಸಹಾಯವಾಗುತ್ತದೆ ಎಂದು ಅರ್ಥಶಾಸ್ತ್ರ ಪ್ರಾಧ್ಯಾಪಕ ಮಾದಪ್ಪ ನುಡಿದರು. ಬದುಕಿನ ಸೂಕ್ಷ್ಮಗಳನ್ನರಿಯಲು ಮಾರುಕಟ್ಟೆ ವೀಕ್ಷಣೆಯಿಂದ ಸಾಧ್ಯವಾಗಿದೆ ಎಂದು ವಿದ್ಯಾರ್ಥಿಗಳು ನುಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.