ಹೊಳೆನರಸೀಪುರ: ಕಾಂಗ್ರೆಸ್ನಲ್ಲಿ ಒಂದಲ್ಲ ಒಂದು ಯಡವಟ್ಟಾಗುವುದು ಸಹಜ. ಗುಂಪುಗಾರಿಕೆ, ಬಣ ರಾಜಕೀಯವೂ ಕಾಂಗ್ರೆಸ್ಗೆ ಹೊಸತಲ್ಲ.
ಸ್ಥಳೀಯ ಸಂಸ್ಥೆ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಅಬ್ಬರಿಸಿ, ಬೊಬ್ಬಿರಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಬಿ-ಫಾರಂ ಹಂಚುವ ವೇಳೆಯಲ್ಲಿ ಮಾಡಿಕೊಂಡ ಯಡವಟ್ಟುಗಳು ಈ ಬಾರಿಯ ಚುನಾವಣೆಯಲ್ಲೂ ಜೆಡಿಎಸ್ ಪ್ರಾಬಲ್ಯ ಮೆರೆಯಲು ವೇದಿಕೆ ಕಲ್ಪಿಸಿಕೊಡುತ್ತಿದೆ.
ಯಾರೇ ಬಂದರೂ ಇಲ್ಲಿನ ಕಾಂಗ್ರೆಸ್ ಮತ್ತು ನಾಯಕರನ್ನು ಸರಿಪಡಿಸಲಾಗದಷ್ಟು ಪರಿಸ್ಥಿತಿ ಹದಗೆಟ್ಟಿದೆ. ಈ ಕಾರಣದಿಂದಾಗಿಯೇ ಇಲ್ಲಿನ ಕಾಂಗ್ರೆಸ್ ಹಿಂಬಾಲಕರ ಸ್ಥಿತಿ ಅತಂತ್ರವೆನಿಸತೊಡಗಿ 'ಯಾರೇ ಕೂಗಾಡಲಿ.. ಊರೇ ಹೋರಾಡಲಿ... ನಾವಿರೋದೆ ಹೀಗೆ' ಎಂಬ ಮಟ್ಟಕ್ಕೆ ತಲುಪಿದೆ.
ಸ್ವತಃ ಕಾಂಗ್ರೆಸಿಗರೇ ಸ್ವಪ್ರತಿಷ್ಟೆ-ಗುಂಪುಗಾರಿಕೆ ಮಾಡಿಕೊಂಡು ಪಕ್ಷದ ವತಿಯಿಂದ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಸಂಪೂರ್ಣ ವಿಫಲರಾಗಿದೆ. ಕಡೆಗೆ ಬಿ-ಫಾರಂ ಹಂಚಿಕೆಯಲ್ಲೂ ಮಾಡಿಕೊಂಡ ಯಡವಟ್ಟುಗಳಿಂದ ಜನರ ಮನಸ್ಸಿನಲ್ಲಿದ್ದ ಕಾಂಗ್ರೆಸ್ ಪರ ಅಲೆಯನ್ನು ಹಿಡಿದಿಡುವಲ್ಲಿ ವಿಫಲಗೊಂಡು, ತನ್ನ ಕಾಲ ಮೇಲೆ ತಾನೇ ಚಪ್ಪಡಿ ಎಳೆದುಕೊಳ್ಳುವ ಮಟ್ಟಕ್ಕೆ ತಲುಪಿದೆ.
ಕಾಂಗ್ರೆಸ್ ಮುಖಂಡರ ವರ್ತನೆಗಳು ಸಹಜವಾಗಿ ಪ್ರಸಕ್ತ ಪುರಸಭಾ ಚುನಾವಣೆಗೆ ವಿವಿಧ ವಾರ್ಡ್ಗಳಿಂದ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮುಳುವಾಗುವ ಎಲ್ಲ ಸಾಧ್ಯತೆಗಳೂ ಕಂಡುಬರತೊಡಗಿದೆ. ಆದರೆ ಇಲ್ಲಿನ 3, 5, 7, 10, 17, 19, 21ನೇ ವಾರ್ಡ್ಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಮ್ಮ ಪಕ್ಷಕ್ಕಿಂತಲೂ ತಮ್ಮ ವರ್ಚಸ್ಸು, ಜನರೊಂದಿಗಿನ ಒಡನಾಟ, ಸ್ವಂತ ಬಲವೇ ಶ್ರೀರಕ್ಷೆ ಹೊರತು ಪಕ್ಷ ಹಾಗೂ ಪಕ್ಷದ ಮುಖಂಡರ ವರ್ಚಸ್ಸನ್ನು ನಂಬಿ ಕೂರುವ ಸ್ಥಿತಿಯಲ್ಲಿಲ್ಲ.
ಜೆಡಿಎಸ್ನಲ್ಲೂ ಎಲ್ಲವೂ ಸರಿಯಿಲ್ಲ: ಹಾಗಂತ ಜೆಡಿಎಸ್ನಲ್ಲಿ ಎಲ್ಲವೂ ಸರಿ ಇದೆ ಎಂದರ್ಥವಲ್ಲ. ಆದರೆ ಈ ಪಕ್ಷದಿಂದ ಟಿಕೆಟ್ ಪಡೆದಿರುವವರಿಗೆ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ಪ್ರಭಾವವೇ ಶ್ರೀರಕ್ಷೆ. ಪುರಸಭೆಗೆ ಸ್ಪರ್ಧಿಸಿರುವ ಜೆಡಿಎಸ್ನ ಯಾವುದೇ ಅಭ್ಯರ್ಥಿಯ ಗೆಲುವು ತನ್ನದೇ ಗೆಲುವು ಎನ್ನುವಷ್ಟರ ಮಟ್ಟಿಗೆ ರೇವಣ್ಣ ಅವರು ಪ್ರತಿ ಚುನಾವಣೆಯನ್ನೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವ ಕಾರಣದಿಂದ ಈ ಪಕ್ಷದಲ್ಲಿ ವೈಯಕ್ತಿಕ ವರ್ಚಸ್ಸಿಗಿಂತ ಹೆಚ್ಚಾಗಿ ಜೆಡಿಎಸ್ ನಾಯಕರ ಕೃಪಾಕಟಾಕ್ಷವೇ ಹೆಚ್ಚಿನ ಪ್ರಭಾವ ಬೀರುವುದು ಸಹಜವಾಗಿದೆ. ಜೆಡಿಎಸ್ ಕೂಡ ಈ ಬಾರಿಯ ಚುನಾವಣೆಯಲ್ಲಾದರೂ ಅರ್ಹತೆ, ಜನಸೇವೆಯಲ್ಲಿ ಕಳಕಳಿ ಇರುವ ಪ್ರಾಮಾಣಿಕರನ್ನು ಗುರುತಿಸುವಲ್ಲಿ ವಿಫಲರಾಗಿರುವುದು ವಿಪರ್ಯಾಸ.
ಜೆಡಿಎಸ್ನಲ್ಲಿ ಟಿಕೆಟ್ ಸಿಗದ ನಾಯಕರ ವರ್ತನೆ 'ಬೂದಿ ಮುಚ್ಚಿದ ಕೆಂಡ'ದಂತಿದೆ. ಆದರೆ, ಬಹಿರಂಗಗೊಂಡಿಲ್ಲ. ಈ ಬಾರಿಯೂ 8 ವಾರ್ಡ್ಗಳಲ್ಲಿ ಹಳೆಯ ಮುಖಗಳಿಗೇ ಜೆಡಿಎಸ್ ಮಣೆ ಹಾಕಿದ್ದು, ಈ ಪಕ್ಷದಲ್ಲೂ ಪ್ರತಿಭಾವಂತರು, ಪ್ರಜ್ಞಾವಂತರು, ಸಾಮಾಜಿಕ ಕಳಕಳಿ ಇರುವವರ ಅವಶ್ಯಕತೆ ಕಾಣದಿರುವುದು ವಿಷಾದದ ಸಂಗತಿ.
ಸಮಗ್ರ ಅಭಿವೃದ್ಧಿಗೆ ನೀಡದ ಒತ್ತು: ರೇವಣ್ಣ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬ ವಾತಾವರಣವಿದೆ. ಆದರೆ, ರೇವಣ್ಣ ಅವರಿಗೆ ತನ್ನೂರಿನ ಪುರಸಭೆ ಸಾಂಸ್ಕೃತಿಕವಾಗಿ, ಸಾರ್ವಜನಿಕವಾಗಿ, ಚಾರಿತ್ರಿಕ ಹಿನ್ನೆಲೆಯಲ್ಲಿಯೂ ಅಭಿವೃದ್ಧಿ ಹೊಂದಲಿ ಎನ್ನುವುದು ಮನಗಾಣದಿರುವುದೇ ಇಲ್ಲಿನ ಪ್ರಜ್ಞಾವಂತ ಮತದಾರರ ಮನದಾಳದ ನೋವು.
ಯಾವುದು ಏನೇ ಇರಲಿ, ಈ ಬಾರಿಯೂ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಕಾಯ್ದಿರಿಸಿಕೊಳ್ಳಲು ಎಲ್ಲ ರೀತಿಯಿಂದಲೂ ಯತ್ನಿಸಿದೆ. ಈ ಬಾರಿ ಜೆಡಿಎಸ್ ಅಭ್ಯರ್ಥಿಗಳ ಪರ ವಿಶೇಷ ಆಕರ್ಷಣೆಯ ಪ್ರಚಾರಕರಾಗಿ ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರು ಇಲ್ಲೇ ಠಿಕಾಣಿ ಹೂಡಿದ್ದಾರೆ. ಬಿ-ಫಾರ್ಮ್ ಹಂಚಿಕೆಯಲ್ಲೂ ತಮ್ಮ ಪ್ರಭಾವ ಬಳಸಿ ತೃಪ್ತರು ಹಾಗೂ ಅತೃಪ್ತರ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವಲ್ಲಿ ಸಫಲರಾಗಿರುವುದಲ್ಲದೇ, ಈ ಬಾರಿ ಸ್ಟಾರ್ ಪ್ರಚಾರಕರಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳನ್ನೂ ಹೊರಗೆಡುಹಿದ್ದಾರೆ.
ಈ ಬಾರಿಯ ವಿಶೇಷವೆಂದರೆ 2 ಮತ್ತು 10ನೇ ವಾರ್ಡ್ನಲ್ಲಿ ಸ್ವತಂತ್ರರಾಗಿ ಸ್ಪರ್ಧಿಸಿರುವ ರಂಗನಾಥ್ ಮತ್ತು ಎಚ್.ವಿ.ಸುರೇಶ್ ಕುಮಾರ್ ಸಹ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೇ ಟಾಂಗ್ ನೀಡಲು ಸಕಲ ರೀತಿಯ ಯತ್ನವನ್ನೂ ಮಾಡುತ್ತಿರುವುದು ಅಚ್ಚರಿಯ ಸಂಗತಿಗಳಲ್ಲೊಂದು.
-ಎಚ್.ಡಿ.ಗುರುಪ್ರಸಾದ್