ಶಿಕ್ಷಣ ಎಲ್ಲರಿಗೂ ಸಿಗಬೇಕು: ಪ್ರಾಂಶುಪಾಲ ಗುರುರಾಜ್
ಹಾಸನ: ನಗರ ಪ್ರದೇಶದ ಮಕ್ಕಳಿಗೆ ಸಿಗುವ ಶಿಕ್ಷಣ ಹಳ್ಳಿಯ ಮಕ್ಕಳಿಗೂ ಸಿಗುವಂತೆ ಮಾಡಿದರೆ ದೇಶ ಸದೃಢವಾಗುತ್ತದೆ ಎಂದು ಪ್ರಾಂಶುಪಾಲ ಗುರುರಾಜ್ ತಿಳಿಸಿದರು.
ಗಂಡಸಿ ಹ್ಯಾಂಡ್ ಪೋಸ್ಟ್ ಪುಷ್ಪರವಿ ರಾಷ್ಟ್ರೀಯ ಕೈಗಾರಿಕಾ ತರಬೇತಿ ಸಂಸ್ಥೆಯ ವತಿಯಿಂದ ತಾಲೂಕಿನ ದುದ್ದ ಹೋಬಳಿಯ ಅರಸೀಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಉಪನ್ಯಾಸ ನೀಡಿ, ನಮ್ಮ ಕನಿಷ್ಠ ಮೂಲ ಅವಶ್ಯಕತೆಗಳಾದ ಶುದ್ಧ ನೀರು, ಆರೋಗ್ಯ, ಉತ್ತಮ ಶಿಕ್ಷಣ ನೀಡುವುದಕ್ಕೆ ಸಾದ್ಯವಾಗುತ್ತಿಲ್ಲ. ಇಂದಿನ ಯುವಜನತೆ ಶ್ರಮ ಪಡದೆ ಸುಲಭವಾಗಿ ಹಣ ಮಾಡುವ ದಾರಿ ಹುಡುಕುತ್ತಿದ್ದಾರೆ, ಧರ್ಮ, ಜಾತಿ, ಪ್ರಾಂತೀಯ ಹೆಸರಿನಲ್ಲಿ ಇಂದಿನ ರಾಜಕಾರಣಿಗಳು ಒಡಕು ಉಂಟುಮಾಡುತ್ತಿದ್ದಾರೆ ಎಂದರು.
ರಾಜ್ಯ ರಾಜ್ಯಗಳ ಮಧ್ಯೆ ಮನಸ್ತಾಪ, ಜಿಲ್ಲೆ ಜಿಲ್ಲೆಗಳ ಮಧ್ಯೆ ಒಡಕು, ಜಾತಿ ಜಾತಿಗಳಲ್ಲಿ ಮಠಗಳು ಹುಟ್ಟಿ ಒಗ್ಗಟ್ಟು ಒಡೆಯುವ ಕೆಲಸ ನಡೆಯುತ್ತಿದೆ. ಆರೋಗ್ಯಕರ ಭಾರತಕ್ಕಾಗಿ ಆರೋಗ್ಯಕರ ಯುವಜನತೆ ಎಂದರೆ ಪ್ರತಿಯೊಬ್ಬ ಭಾರತದ ನಾಗರಿಕನಿಗೂ ಉತ್ತಮ ಶಿಕ್ಷಣ, ಶಿಕ್ಷಣಕ್ಕೆ ತಕ್ಕ ಕೆಲಸ, ಕೆಲಸಕ್ಕೆ ತಕ್ಕ ದುಡಿಮೆ ಕೊಟ್ಟರೆ ದೇಶ ಪ್ರಗತಿ ಸಾಧಿಸುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಕಿರಿಯ ತರಬೇತಿ ಅಧಿಕಾರಿ ಯೋಗನಾಥ್ ಮಾತನಾಡಿ, ಎನ್ಎಸ್ಎಸ್ ಮಹಾತ್ಮ ಗಾಂಧೀಜಿಯವರ ಕನಸು. ಅವರ ಜನ್ಮ ಜಯಂತಿ ಅಂಗವಾಗಿ ಜಾರಿಗೆ ಬಂದ ಒಂದು ಯೋಜನೆ. ಭಾರತದ ಗ್ರಾಮಗಳಲ್ಲಿ ಇಂಥ ಶಿಬಿರಗಳನ್ನು ಆಯೋಜಿಸಿ ಗ್ರಾಮಗಳ ಉದ್ಧಾರ, ಸೇವಾ ಮನೋಭಾವನೆ ಮೂಡಿಸುವ ಒಂದು ಕಾರ್ಯಕ್ರಮ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.