ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

22 ಖಾಸಗಿ ವಿವಿಗೆ ರಾಜ್ಯಪಾಲರ ಅಂಕಿತ ಬೇಡ

Rashmi Kasaragodu
Updated On : 4 Mar 2013, 10:45 am

ಕ.ಪ್ರ. ವಾರ್ತೆ೤ ಹಾಸನ೤ ಮಾ. 4:
ರಾಜ್ಯ ಸರ್ಕಾರ 22 ಖಾಸಗಿ ವಿಶ್ವವಿದ್ಯಾಲಯ ಪ್ರಾರಂಭಿಸಲು ಅನುಮತಿ ನೀಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಡೈರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ರಸ್ತೆ ತಡೆ ನಡೆಸಿದರು. ನಂತರ ಬಿ.ಎಂ.ರಸ್ತೆ ಮೂಲಕ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಖಾಸಗಿ ವಿಶ್ವ ವಿದ್ಯಾಲಯದ ವಿಧೇಯಕವನ್ನು ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದಿರುವುದು, ರಾಜ್ಯದಲ್ಲಿ ಖಾಸಗಿ ವಿವಿಗಳಿಗೆ ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಪೂರ್ಣ ಸಹಕಾರ ನೀಡಿದಂತಾಗುತ್ತದೆ. ಖಾಸಗಿ ವಿವಿಗಳಿಗೆ ಇಷ್ಟೊಂದು ಪ್ರಮಾಣದಲ್ಲಿ ಅವಕಾಶ ನೀಡಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದರು.
ರಾಜ್ಯ ಸರ್ಕಾರ ಖಾಸಗಿ ವಿವಿಗಳ ಬಗ್ಗೆ ಯಾವುದೇ ಸೂಕ್ತ ಚರ್ಚೆಯನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಮಾಡದೇ ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ. ಅನೇಕ ಖಾಸಗಿ ಕಾಲೇಜುಗಳು ಅತ್ಯಂತ ಕಳಪೆಯಾಗಿದ್ದು, ಅವುಗಳ ಮಾಹಿತಿಯನ್ನು ಪಡೆಯದೆ ಅವಕಾಶವನ್ನು ಕಲ್ಪಿಸಲಾಗಿದೆ. ಬಹುತೇಕ ಖಾಸಗಿ ವಿವಿಗಳು ಹಣವನ್ನು ಮಾಡುವ ಉದ್ದೇಶದಿಂದ ಮಾತ್ರ ಪ್ರಾರಂಭವಾಗಿವೆ.
 ಅರ್ಹತೆಯಿಲ್ಲದ ಖಾಸಗಿ ವಿವಿಗಳಿಗೆ ರಾಜ್ಯಪಾಲರು ಅಂತಿಮ ಅಂಕಿತವನ್ನು ಹಾಕಬಾರದು ಎಂದು ಒತ್ತಾಯಿಸಿದರು. ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ವಿವಿ, ಅಲಯನ್ಸ್ ವಿವಿ, ಅರ್ಕ ವಿವಿ, ಶ್ರೀದಯಾನಂದ ಸಾಗರ ವಿವಿ, ಅಮೃತ ಸಿಂಚನಾ ವಿವಿ, ರೈ ಪೌಂಡೇಷನ್ ವಿವಿ, ಪಿಇಎಸ್ ಸಂಸ್ಥೆ, ವೆಲ್ಲೂರು ಎಂಜಿನಿಯರಿಂಗ್ ಕಾಲೇಜು, ಶ್ರೀದೇವರಾಜ ಅರಸು ವಿವಿ, ಎಂ.ಎಸ್.ರಾಮಯ್ಯ ವಿವಿ, ಆದಿಚುಂಚನಗಿರಿ ಖಾಸಗಿ ವಿವಿ, ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ವಿವಿ ಮುಂತಾದವುಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.  
ಭಾರೀ ಭ್ರಷ್ಟಾಚಾರ: ಇದರಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಿಗಳಿವೆ. 22 ವಿವಿಗಳಲ್ಲಿ 18 ವಿವಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲಿವೆ. ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ ಹೊರತುಪಡಿಸಿ ಉಳಿದೆಲ್ಲಾ ವಿವಿಗಳು ವ್ಯಾಪಾರೀಕರಣ ನಡೆಸುತ್ತಿವೆ. ಇಷ್ಟೊಂದು ವಿವಿಗಳು ಬೆಂಗಳೂರಿಗೆ ಅವಶ್ಯಕತೆ ಇಲ್ಲ ಎಂದು ಆರೋಪಿಸಿದರು.
ಹತ್ತಾರು ವರ್ಷಗಳಿಂದ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಡೆಸಿದ ಒಳ್ಳೆಯ ಇತಿಹಾಸವಿರುವವರು ಶೈಕ್ಷಣಿಕ ಉದ್ದೇಶಕ್ಕಾಗಿಯೇ ಖಾಸಗಿ ವಿಶ್ವವಿದ್ಯಾಲಯಗಳನ್ನು ರಾಜ್ಯದಲ್ಲಿ ಪ್ರಾರಂಭಿಸಿರುವುದಕ್ಕೆ ವಿರೋಧವಿಲ್ಲ. ಆದರೆ ಗುಣಮಟ್ಟವಿಲ್ಲದ, ಬೆಂಗಳೂರಿನ ಗಾರ್ಡನ್ ಸಿಟಿಯಂತಹ ಕಾಲೇಜುಗಳಿಗೆ ಯಾವುದೇ ಮಾನದಂಡಗಳಿಲ್ಲದೆ ಖಾಸಗಿ ವಿವಿಗೆ ಅನುಮತಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಪ್ರಾರಂಭದಲ್ಲಿ ಅನುಮತಿ ನೀಡಲಾದ ಎರಡು ಖಾಸಗಿ ವಿವಿಗಳಲ್ಲಿ ಒಂದಾದ ಬಿಸಿನೆಸ್ ಅಲಯನ್ಸ್ ಕಾಲೇಜಿನಲ್ಲಿ 2007ರಲ್ಲಿ ಎಂಬಿಎ ಶುಲ್ಕ 7 ಲಕ್ಷ ಇತ್ತು. ಅದೇ ಖಾಸಗಿ ವಿವಿಯಾದ ಮೇಲೆ 12.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅದೇ ರೀತಿ ರಾಜ್ಯದ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಪಾರೀಕರಣ ನಡೆಯುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ನರೇಶ್, ನಗರ ಸಹ ಕಾರ್ಯದರ್ಶಿ ಯತೀಶ್, ಪ್ರವೀಣ್, ಮಂಜುನಾಥ್, ಕಿರಣ್, ರಾಕೇಶ್, ಕುಮಾರ್, ಮೋಹನ್, ಪುನೀತ್, ಗುರು, ಯತೀಶ್, ಸಂದೇಶ್, ಸತೀಶ್, ನವೀನ್, ಪ್ರಕಾಶ್, ಸುರೇಶ್, ಸುಹಾಸ್, ರಂಜಿತ, ಪಲ್ಲವಿ, ಚೈತ್ರ, ಕಾವ್ಯ, ಹರ್ಷಿತ, ಸೌಮ್ಯ, ಶೃತಿ, ಮಂಜುಳ, ಸವಿತಾ, ರಮ್ಯ, ಶೋಭ, ಸ್ವಾತಿ, ಕೋಮಲ್, ಸ್ವಾಮಿ, ಅರುಣ್, ಅಭಿಷೇಕ್, ಪ್ರೀತಮ್ ಹಾಗೂ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement