ಕೆಜೆಪಿಯಲ್ಲಿ ಧನಂಜಯಕುಮಾರ್ ದಿನಗೂಲಿ ನೌಕರ
ಬೇಲೂರು: ಕೆಜೆಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯಕುಮಾರ್ ಕೆಜೆಪಿಯಲ್ಲಿ ದಿನಗೂಲಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದು ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹೊಗಳು ಭಟ್ಟನಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್ ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ವಿರುದ್ಧ ದಿನಿತ್ಯ ಆರೋಪ ಮಾಡುವುದು ಅವರ ದಿನನಿತ್ಯ ಕೆಲಸವಾಗಿದೆ. ಈಗಾಗಲೇ ಕೆಜೆಪಿಯಲ್ಲಿ ಸಿದ್ದಲಿಂಗಸ್ವಾಮಿ, ಶೋಭ ಕರಂದ್ಲಾಜೆ ಹಿಡಿತಕ್ಕೆ ಒಳಗಾಗಿದ್ದು ಇದರಿಂದ ಧೃತಿಗೆಟ್ಟಿರುವ ಧನಂಜಯ ಕುಮಾರ್ ಯಡಿಯೂರಪ್ಪನವರ ಮನವನ್ನು ಸಂತಸ ಪಡಿಸಲು ಹುರುಳಿಲ್ಲದ ಆರೋಪಗಳ ಸುರಿಮಳೆಯನ್ನು ಸುರಿಸಿ ಕೃಪಾಕಟಾಕ್ಷಕ್ಕಾಗಿ ಹಾತೊರೆಯುತ್ತಿದ್ದಾರೆ. ಈಗೇನಿದ್ದರೂ ಕೆಜೆಪಿ ಶೋಭಕ್ಕ, ಸ್ವಾಮಿ ಹಾಗೂ ಯಡಿಯೂರಪ್ಪನವರ ಪಕ್ಷವಾಗಿದ್ದು ಅದಕ್ಕೆ ಕೆಎಸ್ಎಸ್ ಎಂದು ಹೆಸರಿಟ್ಟರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಈ ಹಿಂದೆ ಧನಂಜಯ ಕುಮಾರ್ ಸಂಸದರಾಗಿ ನಂತರ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದು ಆಗ ಅವರು ತಮ್ಮ ಕೆಟ್ಟಚಾಳಿ ಹಾಗೂ ಭ್ರಷ್ಟಾಚಾರದಿಂದ ಅವರ ಬದಲು ಸದಾನಂದಗೌಡರಿಗೆ ಟಿಕೆಟ್ ನೀಡಲಾಯಿತು. ಆಗಿನಿಂದಲೇ ಸದಾನಂದಗೌಡರ ಬಗ್ಗೆ ಕಿಡಿಕಾರುತ್ತಿರುವ ಧನಂಜಯ ಕುಮಾರ್ ಈಗ ಕೆಜೆಪಿಯಲ್ಲೂ ಅವರ ಸ್ಥಾನಕ್ಕೆ ಕುತ್ತು ಬಂದ ಹಿನ್ನೆಲೆಯಲ್ಲಿ ಹತಾಶರಾಗಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಹೇಗಾದರೂ ಮಾಡಿ ಧನಂಜಯಕುಮಾರ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವಂತೆ ತಾವು ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
ಸಾಮಾಜಿಕ ತಳಹದಿಯ ಮೇಲೆ ಬಿಜೆಪಿ ಸಂಘಟನೆಗೊಂಡಿದ್ದು, ಪಕ್ಷಕ್ಕಾಗಿ ಸಾವಿರಾರು ಕಾರ್ಯಕರ್ತರು ತ್ಯಾಗ ಮಾಡಿದ್ದು, ಯಾರಿಂದಲೂ ಈ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಬೇಲೂರು ಪುರಸಭೆಯಲ್ಲಿ ಕಾಂಗ್ರೆಸ್ ಮತ್ತು ಜನತಾದಳ ಇದುವರೆವಿಗೂ ಆಡಳಿತ ನಡೆಸಿದ್ದರೂ ಪ್ರವಾಸಿ ಕೇಂದ್ರವಾದ ಬೇಲೂರಿನ ಸಮಗ್ರ ಅಭಿವೃದ್ಧಿಗೆ ಯಾವುದೇ ಯೋಜನೆ ರೂಪಿಸದೇ ವಿಫಲವಾಗಿದೆ.
ರಾಜ್ಯ ಬಿಜೆಪಿ ಸರ್ಕಾರ ಪಟ್ಟಣ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿವುದಲ್ಲದೆ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ಗಾಗಿ ಆದ್ಯತೆ ನೀಡಿ ಕಾರ್ಯನಿರ್ವಹಿಸಿದೆ, ಈ ಬಾರಿಯ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಮತದಾರರು ಸಹಕರಿಸಬೇಕು ಎಂದರು.
ಬಿಜೆಪಿ ಅಧ್ಯಕ್ಷ ಬೆಣ್ಣೂರು ರೇಣುಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಅಮೀತ್ಶೆಟ್ಟಿ, ಲಕ್ಷ್ಮಣ್, ಮೋಹನ್ ಹಾಜರಿದ್ದರು.
ಈಗಾಗಲೇ ಕೆಜೆಪಿಯಲ್ಲಿ ಸಿದ್ದಲಿಂಗಸ್ವಾಮಿ, ಶೋಭ ಕರಂದ್ಲಾಜೆ ಹಿಡಿತಕ್ಕೆ ಒಳಗಾಗಿದ್ದು ಇದರಿಂದ ಧೃತಿಗೆಟ್ಟಿರುವ ಧನಂಜಯ ಕುಮಾರ್ ಯಡಿಯೂರಪ್ಪನವರ ಮನವನ್ನು ಸಂತಸ ಪಡಿಸಲು ಹುರುಳಿಲ್ಲದ ಆರೋಪಗಳ ಸುರಿಮಳೆಯನ್ನು ಸುರಿಸಿ ಕೃಪಾಕಟಾಕ್ಷಕ್ಕಾಗಿ ಹಾತೊರೆಯುತ್ತಿದ್ದಾರೆ.
ಟಿ ಗೋ. ಮಧುಸೂದನ್