ಕೋಟೆ ಕಟ್ಟಲು ನಡೆದಿದೆ ಮತ ಬೇಟೆ
ಪಿ. ಶಾಂತಕುಮಾರ್
ಅರಸೀಕೆರೆ: ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ಗಾಗಿ ಹೋರಾಟ ನಡೆಸುತ್ತಿರುವ ವಿವಿಧ ಪಕ್ಷಗಳ ಮುಖಂಡರಿಗೆ ಈಗ ಎದುರಾಗಿರುವ ಪುರಸಭಾ ಚುನಾವಣೆ ನುಂಗಲಾರದ ತುತ್ತಾಗಿದ್ದರೂ ಒಲ್ಲದ ಮನಸ್ಸಿನಿಂದಲೇ ಮಿನಿ ಮಹಾಸಮರಕ್ಕೆ ಸಜ್ಜಾಗಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಬೇಕಾದರೆ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅನಿವಾರ್ಯತೆ ಹಿನ್ನೆಲೆಯಲ್ಲಿ ತಮ್ಮ ಅಭ್ಯರ್ಥಿಗಳ ಗೆಲವಿಗಾಗಿ ಹರಸಾಹಸ ನಡೆಸುತ್ತಿದ್ದು, ಸ್ತ್ರೀ ಶಕ್ತಿ ಸಂಘಗಳ ಓಲೈಕೆ, ಮತದಾರರನ್ನು ಓಲೈಸುವ ಎಲ್ಲಾ ರೀತಿಯ ರಾಜಕೀಯ ಆಟ ಆರಂಭವಾಗಿದೆ. ಹೊಸ ಅಭ್ಯರ್ಥಿಗಳು ತಮ್ಮ ಪಕ್ಷದ ನಾಯಕರೊಂದಿಗೆ ಮನೆ ಮನೆಗೆ ತೆರಳಿ ಭರವಸೆಗಳನ್ನು ನೀಡಿ ಹೊಸ ಅನುಭವ ಪಡೆಯುತ್ತಿದ್ದರೆ, ಈ ಹಿಂದೆ ಆಯ್ಕೆಯಾಗಿದ್ದ ಕೆಲ ಸದಸ್ಯರಿಗೆ ತಮ್ಮ ವಾರ್ಡ್ಗಳಲ್ಲಿ ಕುಡಿಯುವ ನೀರು, ಸ್ವಚ್ಚತೆ ಸೇರಿದಂತೆ ಇನ್ನಿತರ ಸೌಲಭ್ಯಗಳ ಬಗ್ಗೆ ಮತದಾರರಿಂದ ನಿಂದನೆ ಅನುಭವಿಸುವಂತಾಗಿದೆ. ತಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬ ಅನುಭವದ ಅರಿವು ಮೂಡಲಾರಂಭಿಸಿದೆ.
ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್, ಕೆಜೆಪಿ ನೇರ ಸ್ಪರ್ಧೆ ಎದುರಿಸುತ್ತಿದ್ದರೆ ಇನ್ನು ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ಹಣಾಹಣಿ ಇದೆ. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಕೆಜೆಪಿ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿದ್ದೆ. ಬಿಜೆಪಿ, ಎಸ್ಡಿಪಿಐ, ಪಕ್ಷೇತರ ಅಭ್ಯರ್ಥಿಗಳು ಇತರ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿ ಗೆಲವಿನ ನಗೆ ಬೀರುವ ವಿಶ್ವಾಸದಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಪುರಸಭಾ ಚುನಾವಣೆಯ 25 ವರ್ಷಗಳ ಇತಿಹಾಸ ಕೆದಕಿ ನೋಡಿದಾಗ ಒಂದು ಬಾರಿ ಜನತಾದಳ, 3 ಬಾರಿ ಕಾಂಗ್ರೆಸ್, 2 ಬಾರಿ ಜೆಡಿಎಸ್ ಆಡಳಿತ ಸೂತ್ರ ಹಿಡಿದಿವೆ. 2002ರ ಚುನಾವಣೆಯಲ್ಲಿ ಪುರಸಭೆಯ 23 ಸ್ಥಾನಗಳ ಪೈಕಿ ಕಾಂಗ್ರೆಸ್ 12, ಜೆ.ಡಿ.ಎಸ್. 9 ಸ್ಥಾನ ಪಡೆದು ಕಾಂಗ್ರೆಸ್ ಎರಡೂವರೆ ವರ್ಷ ಆಡಳಿತ ಸೂತ್ರ ಹಿಡಿದು ಕೆ.ಸಿ.ಯೋಗೀಶ್ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡಿದರೂ ಮುಂದಿನ ಅವಧಿಯಲ್ಲಿ ಪಕ್ಷಾಂತರದ ಹಾವಳಿಯಿಂದ ಜೆಡಿಎಸ್ನ ಪಿ.ದೇವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾದರು.
7 ಮಂದಿ ಅಧ್ಯಕ್ಷರು: 2007ರ ಚುನಾವಣೆಯಲ್ಲಿ 27 ಸ್ಥಾನಗಳ ಪೈಕಿ ಜೆಡಿಎಸ್22, ಕಾಂಗ್ರೇಸ್ 2, ಬಿಜೆಪಿ 2, ಪಕ್ಷೇತರ 1 ಸ್ಥಾನ ಪಡೆಯುವ ಮೂಲಕ ಅಧಿಕಾರಕ್ಕೇರಿದ ಜೆಡಿಎಸ್ 7 ಮಂದಿ ಅಧ್ಯಕ್ಷರನ್ನಾಗಿ ಮಾಡಿ ಇತಿಹಾಸ ನಿರ್ಮಿಸಿತು. ಮಾಜಿ ಅಧ್ಯಕ್ಷರ ಪೈಕಿ 16ನೇ ವಾರ್ಡಿನಿಂದ ರುಕ್ಮಿಣಿ ಜಯಕುಮಾರ್, 17ನೇ ವಾರ್ಡಿನಿಂದ ಜಿ.ಟಿ.ಗಣೇಶ್, 23ನೇ ವಾರ್ಡಿನಿಂದ ಸಮೀವುಲ್ಲಾ ಸ್ಪರ್ಧೆಯಲ್ಲಿದ್ದು ಪ್ರತಿಷ್ಠಿತ ಕ್ಷೇತ್ರವೆನಿಸಿದೆ. 6 ಮಂದಿ ಮಾಜಿ ಅಧ್ಯಕ್ಷರುಗಳಾದ ಎನ್.ಹೆಚ್.ಸಿದ್ದರಾಮಶೆಟ್ಟಿ, ಎ.ಎಸ್.ಸಿದ್ದಮ್ಮ, ಪಿ.ದೇವಕುಮಾರ್, ರಿಯಾನಬಾನು ರಿಜ್ವಾನ್, ಎಂ.ಜಿ. ರಿಯಾನಬಾನು ಸ್ಪರ್ಧಾ ಕಣದಿಂದ ಹಿಂದೆ ಸರಿದಿರುವುದು ನಾಗರಿಕರಲ್ಲಿ ಆಶ್ಚರ್ಯ ಮೂಡಿಸಿದೆ.
ಪುರಸಭೆಯ 27 ವಾರ್ಡ್ಗಳ ಪೈಕಿ, ಜೆಡಿಎಸ್.27 ಸ್ಥಾನಗಳಲ್ಲಿ, ಕಾಂಗ್ರೆಸ್ 26 ಸ್ಥಾನಗಳಲ್ಲಿ, ಕೆಜೆಪಿ.21ಸ್ಥಾನಗಳಲ್ಲಿ, ಬಿಜೆಪಿ 13 ಸ್ಥಾನಗಳಲ್ಲಿ ಹಾಗೂ ಪಕ್ಷೇತರರು 14 ಸ್ಥಾನಗಳಲ್ಲಿ ಒಟ್ಟು 101 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 21ನೇ ವಾರ್ಡ್ ಪಟ್ಟಣದ ಅತಿ ಪ್ರತಿಷ್ಟಿತ ಕ್ಷೇತ್ರವಾಗಿದ್ದು ಕಳೆದ 3 ಬಾರಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅತಿ ಹೆಚ್ಚು ಮತಗಳ ಅಂತರದಿಂದ ಜಯಶಾಲಿಯಾಗಿದ್ದ ಬಿ.ಎನ್.ವಿದ್ಯಾಧರ, 21ನೇ ವಾರ್ಡ್ ಮಾತ್ರವಲ್ಲದೆ ಪಟ್ಟಣದ ನಾಗರಿಕರ ಕುಂದುಕೊರತೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದ್ದು, ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಇವರು ಜೆಡಿಎಸ್ನ ಕರ್ನಾಟಕ ರಕ್ಷಣಾ ವೇದಿಕೆ ನಗರಾಧ್ಯಕ್ಷ ಕಿರಣ್ ಕುಮಾರ್ ಅವರನ್ನು ಎದುರಿಸುತ್ತಿದ್ದು ಈ ಕ್ಷೇತ್ರದ ಫಲಿತಾಂಶ ನಗರದ ನಾಗರಿಕರ ಕುತೂಹಲಕ್ಕೆ ಕಾರಣವಾಗಿದೆ.
ಶಿವಲಿಂಗೇಗೌಡರ ಶ್ರಮ: ಜೆಡಿಎಸ್ಗೆ ನೆಲೆ ಇಲ್ಲದ ಕ್ಷೇತ್ರದಲ್ಲಿ ತಮ್ಮ ನಿರಂತರ ಹೋರಾಟ ಮತ್ತು ಪರಿಶ್ರಮದಿಂದ ಜನರ ಪ್ರೀತಿ ವಿಶ್ವಾಸಗಳಿಂದ ಭದ್ರಕೋಟೆ ನಿರ್ಮಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಮುಂದಿನ ವಿಧಾನಸಭೆಗೆ ತಮ್ಮ ಹಾದಿ ಸುಗಮಪಡಿಸಿಕೊಳ್ಳಲು ಅವಿರತ ಶ್ರಮ ವಹಿಸಿ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಮಾಜಿ ಸಚಿವ ಬಿ.ಶಿವರಾಂ ರಾಜ್ಯ ಹಿಂದುಳಿದ ವರ್ಗಗಳ ಕಾಂಗ್ರೆಸ್ ಕಾರ್ಯದರ್ಶಿ ಜೆ.ಪಿ.ಜಯಣ್ಣ, ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಪರಮೇಶ್ವರಪ್ಪ ಇನ್ನಿತರ ಮುಖಂಡರ ಒಗ್ಗಟ್ಟಿನ ಹೋರಾಟ ಅಭ್ಯರ್ಥಿಗಳಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿದ್ದು ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.
ಕೆಜೆಪಿ ಸುಸ್ಥಿತಿ, ಬಿಜೆಪಿ ದುಸ್ಥಿತಿ: ಬಿಜೆಪಿ ಬಿ.ಎಸ್.ಯಡಿಯೂರಪ್ಪನವರ ಹೊಸಪಕ್ಷಕ್ಕೆ ಬಂದಿದೆಲ್ಲವೂ ಲಾಭವೇ, ಕೆಲವು ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡುತ್ತಿದ್ದು ಖಾತೆ ತೆರೆಯುವುದು ನಿಶ್ಚಲವಾಗಿದೆ. ತಮ್ಮ ಅಭ್ಯರ್ಥಿಗಳ ಪರವಾಗಿ ರಾಜ್ಯ ಕಾರ್ಯದರ್ಶಿ ಎಂ.ಡಿ.ಲಕ್ಷ್ಮೀನಾರಾಯಣ, ರಾಜ್ಯ ಮಹಿಳಾ ಅಧ್ಯಕ್ಷೆ ಮಂಜುಳ ಪ್ರಚಾರ ನಡೆಸಿದ್ದಾರೆ. ಅಲ್ಲದೇ ಸ್ಥಳೀಯ ಮುಖಂಡರುಗಳಾದ ಡಾ.ಲೋಕೇಶ್, ಜಿ.ಎಸ್.ಗುರುಸಿದ್ದಪ್ಪ, ಜೆ.ಸಿ.ಪುರ ಜಗದೀಶ್, ಕೆ.ವಿ.ಎನ್.ಶಿವು, ಗಂಜಿಗೆರೆ ಬಸವರಾಜ್, ಸೇರಿದಂತೆ ಅನೇಕ ನಾಯಕರು ಮನೆ ಮನೆ ಸುತ್ತಿ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.