ಗಾಂಧಿ ಹೆಸರು ಸೇರಿಸಿ, ನಾಡಗೀತೆ ಬದಲಾಯಿಸಿ: ಪಾಪು ಅಭಿಪ್ರಾಯ
ಅರಸೀಕೆರೆ: ಮಹಾತ್ಮ ಗಾಂಧೀಜಿಯವರಂತಹ ವ್ಯಕ್ತಿಗಳ ಸಾಧನೆ ಸೇರಿಸದಿರುವ ನಾಡಗೀತೆಯ ಬಗ್ಗೆ ತಮಗೆ ಅಸಮಾಧಾನವಿದೆ ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ತಿಳಿಸಿದ್ದಾರೆ.
ಪಟ್ಟಣದ ಸಮೀಪವಿರುವ ಕಸ್ತೂರ ಬಾ ಟ್ರಸ್ಟ್ ಆವರಣದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಡಗೀತೆಯಲ್ಲಿ ಅಂತಹ ಮಹತ್ವದ ಸಾಧನೆ ಸಾರುವ ಸಾಲುಗಳಿಲ್ಲ. ಎಲ್ಲ ರಾಜ್ಯದಲ್ಲಿಯೂ ಇರುವಂತೆ ಸಸ್ಯ ಸಂಪತ್ತು, ನದಿ, ನೊರೆ, ತೊರೆಗಳಿವೆ ಎಂದರು.
ಎಲ್ಲ ರಾಜ್ಯಗಳಲ್ಲಿಯೂ ರಾಜಮನೆತನಗಳು ಆಡಳಿತ ನಡೆಸಿವೆ. ಆದರೆ ಕರ್ನಾಟಕದಲ್ಲಿ ಏನೋ ವಿಶೇಷತೆ ಇದೆ ಎಂಬಂತೆ ಬಿಂಬಿಸಲು ಹೊರಟಿರುವ ನಾಡಗೀತೆಯ ಸಾಲುಗಳನ್ನು ಬದಲಾಯಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಆಂಗ್ಲರ ಆಡಳಿತದ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಲು ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಟ ನಡೆಸಿದ ಮಹನೀಯರುಗಳಾದ ಮಹಾತ್ಮ ಗಾಂಧೀಜಿಯಂತಹ ಹೆಸರುಗಳನ್ನು ಸೇರಿಸುವ ಅಗತ್ಯವಿದೆ. ಅವರ ಕೊಡುಗೆ ವಿಶ್ವಮನ್ನಣೆ ಪಡೆದಿದೆ. ಆದ್ದರಿಂದ ಕೂಡಲೇ ಗಾಂಧೀಜಿಯ ಹೆಸರನ್ನು ನಾಡಗೀತೆಯಲ್ಲಿ ಸೇರಿಸಬೇಕೆಂಬುದು ತಮ್ಮ ಬೇಡಿಕೆಯಾಗಿದೆ ಎಂದು ಆಗ್ರಹಿಸಿದರು. ಕೆಲ ಸಾಹಿತಿಗಳು ಮತಿಭ್ರಮಣೆಗೊಂಡವರಂತೆ ಪಂಪನ ಪೂರ್ವಿಕರು ಇನ್ನೂ ಬದುಕಿದ್ದಾರೆಂದು ಹೇಳುವ ಮೂಲಕ ಅಗ್ಗದ ಪ್ರಚಾರ ಪಡೆಯಲು ಹೊರಟಿದ್ದಾರೆಂದು ಎಂ.ಚಿದಾನಂದಮೂರ್ತಿಯವರನ್ನು ಪರೋಕ್ಷವಾಗಿ ಟೀಕಿಸಿದರು.