ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಭಾಗಿದ ರಾಮೇಶ್ವರಸ್ವಾಮಿ ದೇಗುಲ ಹಿಂಭಾಗ ಗೋಡೆ

Rashmi Kasaragodu
Updated On : 4 Mar 2013, 10:48 am

ರಾಮನಾಥಪುರ: ರಾಮನಾಥಪುರ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಚತುರ್ಯುಗ ಮೂರ್ತಿ ರಾಮೇಶ್ವರಸ್ವಾಮಿ ದೇವಸ್ಥಾನದ ಹಿಂಭಾಗದ ಗೋಡೆ ಶಿಥಿಲಗೊಂಡು ಓರೆಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಬೀಳುವ ಹಂತ ತಲಪಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಹಿಂಭಾಗದ ಗೋಡೆ ಬೀಳುವ ಮುಂಚೆ ಮತ್ತೊಂದು ತಡೆಗೋಡೆ ನಿರ್ಮಿಸುವಂತೆ ಸಂಬಂಧ ಪಟ್ಟ ಹಾಸನ ಜಿಲ್ಲಾಧಿಕಾರಿಗಳು, ತಾಲೂಕು ಮುಜರಾಯಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮೂಲ ದೇವರು ರಾಮೇಶ್ವರ: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ರಾಮನಾಥಪುರದಲ್ಲಿ 64 ದೇವಾಲಯ ಮೂರ್ತಿಗಳು ಕಾವೇರಿ ನದಿ ತೀರದಲ್ಲಿದ್ದು, ದೇವಾಲಯಗಳ ಸುತ್ತ ಹಾಗೂ ಕಾವೇರಿ ನದಿ ದಂಡೆಯ ಪಕ್ಕ ಸ್ವಚ್ಛತೆ ಇಲ್ಲದೇ ಇರುವುದರಿಂದ ಸಂಬಂಧಪಟ್ಟವರು ಭಕ್ತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೆಕಾಗಿದೆ. ಇಲ್ಲಿಯ ದೇವಾಲಯಗಳಿಗೆ ಪೂಜೆಗಳಲ್ಲಿ ಪಾಲ್ಗೊಳ್ಳಲು ಪ್ರತಿನಿತ್ಯ ರಾಮನಾಥಪುರಕ್ಕೆ ಸಾವಿರಾರು ಭಕ್ತರು ಬರುತ್ತಿದ್ದಾರೆ. ಹೀಗಾಗಿ ಕಾವೇರಿ ನದಿಯಲ್ಲಿ ಇರುವ ವಹ್ನಿ ಪುಷ್ಕರಣಿ, ಗಾಯತ್ರೀ ಶಿಲೆ ಸೇರಿದಂತೆ ನದಿ ಮಧ್ಯದಲ್ಲಿರುವ ಪಾಪ ಕಳೆವ ಗೋಗರ್ಭಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಸ್ನಾನ ಮಾಡಿದರೆ ಜನ್ಮಾಂತರಗಳ ಪಾಪ ತೊಡೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಕಾರಣದಿಂದ ಜನ ಸಾಗರವೇ ಹರಿದು ಬರುತ್ತಿದೆ.
ರಜಾ ದಿವಸ ಭಾನುವಾರ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ, ಚತುರ್ಯುಗ ಮೂರ್ತಿ ರಾಮೇಶ್ವರಸ್ವಾಮಿ, ಅಗಸ್ಥೇಶ್ವರಸ್ವಾಮಿ, ಪಟ್ಟಾಭಿರಾಮಸ್ವಾಮಿ, ವರದಾನ ಶ್ರೀ ಬಸವೇಶ್ವರಸ್ವಾಮಿ ಮುಂತಾದ ದೇವಸ್ಥಾನಗಳಲ್ಲಿಯೂ ಭಕ್ತರು ಪೂಜೆ ಸಲ್ಲಿಸುತ್ತಾರೆ.
ಹರಕೆ: ಇಲ್ಲಿಯ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಭಕ್ತರು ಹರಕೆ ತೀರಿಸುತ್ತಾರೆ. ತಮ್ಮ ಮೈ ಮೇಲೆ ಇರುವ ಚರ್ಮವ್ಯಾಧಿ ಮುಂತಾದ ಕಾಯಿಲೆಗಳು ಇರುವವರು ಕಾವೇರಿ ನದಿಯಲ್ಲಿ ಸ್ನಾನಮಾಡಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರಿಗೆ ಪೂಜೆ ವೇಳೆ ಶುದ್ಧ ಬೆಳ್ಳಿಯ ನಾಗರಹೆಡೆ ಮುಂತಾದ ಹರಕೆ ತಿರಿಸುವುದು ಇಲ್ಲಿಯ ಪದ್ದತಿ. ಇಂತಹ ಪುರಾತನ ಕಾಲದ ಹತ್ತಾರು ದೇವಸ್ಥಾನಗಳು ಮರ-ಗಿಡಗಳು ಬೆಳೆದುಕೊಂಡು ಶಿಥಿಲವಾಗಿ ಬೀಳುತ್ತಿದ್ದು, ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿಸುವಂತೆ ಸಂಬಂಧಪಟ್ಟ ಮುಜರಾಯಿ ಇಲಾಖೆಯವರನ್ನು  ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement