'ಭಾರತ ಇಂದಿಗೂ ಮೂಢನಂಬಿಕೆಗೆ ಸಿಲುಕಿ ನರಳುತ್ತಿದೆ'
ಹಾಸನ: ಭಾರತ ದೇಶ ಮೂಢನಂಬಿಕೆಯನ್ನೇ ಜೀವನಾಧಾರ ಹಾಗೂ ಬದುಕಿನ ಸಿದ್ಧಾಂತ ಮಾಡಿಕೊಂಡು ಬದುಕುತ್ತಿದೆ ಹಾಗಾಗಿ ಸ್ವಾತಂತ್ರ್ಯ ಸಿಕ್ಕಿ 70ವರ್ಷ ಸಮೀಪಿಸುತ್ತಿದ್ದರೂ ಅಂಧಕಾರದಲ್ಲಿ ಸಿಲುಕಿ ಜಗತ್ತಿನ ಬಡರಾಷ್ಟ್ರಗಳ ಸಾಲಿನಲ್ಲೇ ನರಳುತ್ತಿದೆ ಎಂದು ಬಿಜಿವಿಎಸ್ ಹಾಸನ ಜಿಲ್ಲಾ ಕಾರ್ಯದರ್ಶಿ ಅಹಮದ್ ಹೇಳಿದರು. ದುದ್ದ ಹೋಬಳಿ ಅರಸೀಹಳ್ಳಿ ಗ್ರಾಮದಲ್ಲಿ ಪುಷ್ಪರವಿ ರಾಷ್ಟ್ರೀಯ ಕೈಗಾರಿಕಾ ತರಬೇತಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಇತ್ತೀಚೆಗೆ ವೈಜ್ಞಾನಿಕ ಮನೋಧರ್ಮ ಮತ್ತು ಮೂಢನಂಬಿಕೆ ಕುರಿತು ಅವರು ಉಪನ್ಯಾಸ ನೀಡಿದರು. ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಸರ್ಕಾರಿ ರತ್ನಾಕರರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಡಿ.ಟಿ.ಶಿವಣ್ಣ ಮಾತನಾಡಿ, ಹಳ್ಳಿ ಜನರ ನಂಬಿಕೆಗಳು ಮುಗ್ಧತೆಯಿಂದ ಕೂಡಿರುತ್ತವೆ. ಆ ಮುಗ್ಧತೆಯನ್ನು ಆಳುವ ವರ್ಗ ಪುರೋಹಿತರು ಮತ್ತು ಮಠಾಧೀಶರ ಮೂಲಕ ಅಂಧಕಾರದಲ್ಲಿ ದೂಡುತ್ತಿವೆ ಎಂದರು. ಶಿಕ್ಷಕ ಎಚ್.ಜಿ. ಮಂಜುನಾಥ್, ಪುಷ್ಪರವಿ ಐ.ಟಿ.ಐ ಪ್ರಾಂಶುಪಾಲ ರೇವಣ್ಣಗೌಡ, ಗ್ರಾಮಸ್ಥರಾದ ರವಿ ಇದ್ದರು. ಶಿಬಿರಾಧಿಕಾರಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಶಿಬಿರಾರ್ಥಿಗಳು ಹಾಗೂ ಊರಿನ ಶಾಲಾ ಮಕ್ಖಳು ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.