ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಭ್ರಷ್ಟಾಚಾರ ವಿರುದ್ಧ ಸೆಣಸಲು ಜೆಡಿಯು ಬೆಂಬಲಿಸಿ

Rashmi Kasaragodu
Updated On : 4 Mar 2013, 11:04 am

ಹೊಳೆನರಸೀಪುರ: ರಾಜ್ಯದಲ್ಲಿನ ಪ್ರಮುಖ ರಾಜಕೀಯ ಪಕ್ಷಗಳು ನಡೆಸುತ್ತಿರುವ ಭ್ರಷ್ಟಾಚಾರ ಹಾಗೂ ರಾಜಕೀಯ ದಿವಾಳಿತನದ ವಿರುದ್ಧ ಸೆಣಸುವ ಕಾವಲುಗಾರರಾಗಿ ಕಾರ್ಯನಿರ್ವಹಿಸಲು ಜೆಡಿಯುನ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಅವರು ಮತದಾರರನ್ನು ಕೋರಿದರು.
ಪಟ್ಟಣದಲ್ಲಿನ ಪುರಸಭೆಗೆ ಜೆಡಿಯು ವತಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ಪರ ಮತಯಾಚನೆಗೆ ತೆರಳುವ ಸಂದರ್ಭದಲ್ಲಿ ಸುದ್ದಿಗಾಗರರೊಂದಿಗೆ ಸೋಮವಾರ ಮತನಾಡಿದ ಅವರು, ನಮ್ಮನ್ನಾಳುವ ಸರ್ಕಾರಗಳು ಎಲ್ಲ ಕ್ಷೇತ್ರಗಳನ್ನೂ ಖಾಸಗೀಕರಣಕ್ಕೆ ಒಳಪಡಿಸುತ್ತಿದ್ದು, ಇದು ಪ್ರಜಾಪ್ರಭುತ್ವದ ಆಶಯಕ್ಕೆ ಮಾರಕವಾಗಿದೆ ಎಂದು ಅವರು ಹೇಳಿದರು. ಎಲ್ಲಿಯವರೆಗೆ ಮತದಾರರು ಪ್ರಜ್ಞಾವಂತರಾಗುವುದಿಲ್ಲವೋ ಅಲ್ಲಿಯವರೆಗೆ ಸುಸ್ಥಿರ ಸಮಾಜದ ನಿರ್ಮಾಣ ಸಾಧ್ಯವಾಗದು ಎಂದು ವಿಷಾದಿಸಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯವನ್ನಾಳಿದ ಎಲ್ಲ ಸರ್ಕಾರಗಳಿಂದಲೂ ಭ್ರಷ್ಟಾಚಾರ ಮಿತಿಮೀರಿದ್ದು, ಕಳೆದ 5 ವರ್ಷಗಳಲ್ಲಿ ಎಷ್ಟು ಮುಖ್ಯಮಂತ್ರಿಗಳು ಬದಲಾಗಿದ್ದಾರೆ, ನಡೆದಿರುವ ಭ್ರಷ್ಟಾಚಾರ ಎಷ್ಟು, ಪ್ರಜ್ಞಾವಂತ ರಾಜಕಾರಣಿಗಳ ಕೊರತೆಯಿಂದಾಗಿ ಅಧಿಕರ ಲಾಬಿ, ಗಣಿ ಲಾಬಿ-ಭೂ ಲಾಬಿ, ಶಿಕ್ಷಣದ ಜತೆಗೆ ಭ್ರಷ್ಟಾಚಾರ, ಅಭಿವೃದ್ಧಿ ಲಾಬಿಗಳೂ ನಡೆಯುತ್ತಿದ್ದು ಇವುಗಳ ದಮನಕ್ಕಾಗಿ ಜೆಡಿಯು ಪಕ್ಷವನ್ನು ಬೆಂಬಲಿಸುವಂತೆ ಅವರು ಕೋರಿದರು.
ಪ್ರಸಕ್ತ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಕೂಡ ಜೆಡಿಯುನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತಂತೆ ತಮಗೆ ಸಾಕಷ್ಟು ಆಹ್ವಾನಗಳು ಬರುತ್ತಿದ್ದು, ಈ ಹೊಂದಾಣಿಕೆಯ  ಮೂಲಕ ರಾಷ್ಟ್ರೀಯ ಪಕ್ಷಗಳು ನಡೆಸುತ್ತಿರುವ ಭ್ರಷ್ಟಾಚಾರದ ಅವಾಂತರಗಳನ್ನು ಕೊನೆಗಾಣಿಸುವ ಅವಶ್ಯಕತೆ ಇದೆ. ಜೆಡಿಯುಗೆ ಅಧಿಕೃತ ಚಿಹ್ನೆಯನ್ನು ಸಕಾಲದಲ್ಲಿ ನೀಡದ ಕಾರಣದಿಂದಾಗಿಯೇ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಯು ವತಿಯಿಂದ ಸ್ಪರ್ಧಿಸಬಯಸಿದ್ದ ನೂರಾರು ಆಕಾಂಕ್ಷಿಗಳು ಗೊಂದಲದಿಂದ ನಾಮಪತ್ರಗಳನ್ನು ಹಿಂಪಡೆದಿದ್ದಾರೆ ಎಂದು ಅವರು ವಿಷಾದಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಾತಿ-ವರ್ಗ ಭೇದವಿಲ್ಲದೇ ಯುವ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದ ನಾಡಗೌಡ ಅವರು, ಪ್ರಮುಖ ರಾಜಕೀಯ ಪಕ್ಷಗಳ ವಿರುದ್ಧ ಜೆಡಿಯು ತತ್ವ-ಸಿದ್ದಾಂತದ ಮೇಲೆ ಸಾಮ್ರಾಜ್ಯಶಾಹಿ ಮತ್ತು ಕುಟುಂಬಶಾಹಿ ಆಡಳಿತದ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಜೆಡಿಯು ತಾಲೂಕು ಅಧ್ಯಕ್ಷ ಮಳಲಿ ನಾರಾಯಣ್, ಜಿಲ್ಲಾಧ್ಯಕ್ಷ ಡಿ.ಎಚ್.ಸತೀಶ್, ರಾಜ್ಯ ಕಾರ್ಯದರ್ಶಿ ಸತ್ಯನಾರಾಯಣ, ರಾಜ್ಯ ಖಜಾಂಚಿ ವೆಂಕಟಸ್ವಾಮಿ, ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ರಾಮಚಂದ್ರಯ್ಯ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸತೀಶ್, ಜಿಲ್ಲಾ ಪ್ರಧಾನ ಕಾರ್ಯದಶರ್ ವೆಂಕಟೇಶ್, ಜಿಲ್ಲಾ ಎಸ್.ಸಿ-ಎಸ್.ಟಿ ಘಟಕದ ಅಧ್ಯಕ್ಷ ಎಚ್.ಡಿ.ಪುಟ್ಟಯ್ಯ, ಪುರಸಭೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಅಬ್ದುಲ್ ಮುನಾಫ್ ಮೊದಲಾದವರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement