ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊಳೆನರಸೀಪುರದಲ್ಲಿ ಮೋಟಮ್ಮ ರೋಡ್‌ಶೋ, ಅನುಪಮ ಅನುಪಸ್ಥಿತಿ

Rashmi Kasaragodu
Updated On : 4 Mar 2013, 11:04 am


ಹೊಳೆನರಸೀಪುರ: ಮಾಜಿ ಸಚಿವೆ ಹಾಗೂ ಕೆಪಿಸಿಸಿ ಸದಸ್ಯೆ ಮೋಟಮ್ಮ ಅವರು ಸೋಮವಾರ ಪಟ್ಟಣದಲ್ಲಿ ಪುರಸಭೆಗೆ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸಿ ಮತಯಾಚಿಸಿದರು. ಆದರೆ ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ನಾಯಕಿ ಅನುಪಮ ಅವರ ಅನುಪಸ್ಥಿತಿ ತಾಲೂಕು ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯವನು                ಮತ್ತೊಮ್ಮೆ ಮತದಾರರ ಮುಂದೆ ತೆರೆದಿಟ್ಟಂತಿತ್ತು. ಬಹಿರಂಗ ಪ್ರಚಾರಕ್ಕೆ ಒಂದು ದಿನ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವೆ ಮೋಟಮ್ಮ ಅವರು ಕೆಲ ಕಾಂಗ್ರೆಸ್ ಮುಖಂಡರೊಂದಿಗೆ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳು ಹಾಗೂ ನಾನಾ ಬಡಾವಣೆಗಳಿಗೆ ತೆರಳಿ ಮತಯಾಚಿಸಿದರು. ಅನುಪಮ ಅನುಪಸ್ಥಿತಿಯೇ ಇಲ್ಲಿ ಪ್ರಮುಖ ವಿಷಯವಾಗಿ ಚರ್ಚೆಗೆ ಒಳಗಾದ ಸನ್ನಿವೇಶದಲ್ಲಿ, ಈ ಕುರಿತಂತೆ ಮಾಧ್ಯಮಗಳು ಕೆಲ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದಾಗ ತಮ್ಮಗಳ ಯಾವುದೇ ದೂರವಾಣಿ ಕರೆಗಳನ್ನೂ ಅನುಪಮ ಅವರು ಸ್ವೀಕರಿಸದೇ, ಉದ್ದೇಶಪೂರ್ವಕವಾಗಿಯೇ ಮೋಟಮ್ಮ ಅವರೊಂದಿಗೆ ಪ್ರಚಾರಕ್ಕೆ ಹೋಗುವುದನ್ನು ತಪ್ಪಿಸಿಕೊಂಡರು ಎಂಬ ಉತ್ತರ ಬಂತು. ಆದರೆ ಈ ಕುರಿತಂತೆ ಅನುಪಮ ಅವರು ಪ್ರತಿಕ್ರಿಯಿಸಿ, ಮೋಟಮ್ಮ ಅವರು ಪ್ರಚಾರಕ್ಕೆ ಆಗಮಿಸುತ್ತಿರುವ ವಿಷಯವನ್ನು ಯಾರೊಬ್ಬರೂ ತಮಗೆ ತಿಳಿಸಿಲ್ಲ. ಮತ್ತು ಈ ಕುರಿತಂತೆ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಉತ್ತರಿಸಿದರು. ರೋಡ್‌ಶೋ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ತಾಲೂಕು ಅಧ್ಯಕ್ಷ ಎಚ್.ಕೆ.ಹರೀಶ್, ಮುಖಂಡರಾದ ಕೆ.ಎಂ.ಶ್ರೀನಿವಾಸ್, ಕೆ.ರಾಜೇಗೌಡ, ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಕೆ.ಎಚ್.ಹೊನ್ನೇಗೌಡ, ಕಾಂಗ್ರೆಸ್ ಅಭ್ಯರ್ಥಿಗಳು, ನೂರಾರು ಕಾರ್ಯಕರ್ತರುಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement