ಹಣೆಬರಹ ಬರೆಯಲು ಅಧಿಕಾರಿಗಳ ಅಂತಿಮ ಟಚ್
ಕನ್ನಡಪ್ರಭ ವಾರ್ತೆ ಹಾಸನ ಮಾ.6
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಂತಿಮ ಸಿದ್ದತೆಯನ್ನು ಜಿಲ್ಲಾಡಳಿತ ಮಾಡಿದ್ದು, ಬುಧವಾರ ಚುನಾವಣೆ ಅಧಿಕಾರಿಗಳು, ಸಿಬ್ಬಂದಿ ಮತಯಂತ್ರಗಳನ್ನು ಪಡೆದು ತಮ್ಮ ತಮ್ಮ ವಾರ್ಡ್ಗಳಿಗೆ ತೆರಳಿದರು.
ಜಿಲ್ಲೆಯಲ್ಲಿ 180 ವಾರ್ಡ್ಗಳ ಪೈಕಿ ಮೂರು ವಾರ್ಡ್ಗಳಲ್ಲಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 177 ವಾರ್ಡ್ಗಳಿಗೆ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿ ಸಜ್ಜುಗೊಂಡಿದೆ. ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಇರಿಸಲಾಗಿದ್ದ ಮತಯಂತ್ರಗಳನ್ನು ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, 1 ಮತ್ತು 2ನೇ ಮತಗಟ್ಟೆ ಅಧಿಕಾರಿಗಳು ಬೆಳಗ್ಗೆ ಕಾಲೇಜಿಗೆ ತೆರಳಿ ತಮಗೆ ನಿಯೋಜಿಸಲಾಗಿದ್ದ ಮತಗಟ್ಟೆ ಸಂಖ್ಯೆಯ ಮತಯಂತ್ರಗಳು ಮತ್ತು ಸಂಬಂಧಪಟ್ಟಂತಹ ವಸ್ತುಗಳನ್ನು ಪಡೆದು ತಮಗೆ ನಿಯೋಜಿಸಿಲಾಗಿದ್ದ ವಾಹನಗಳಲ್ಲಿ ವಾರ್ಡ್ಗಳಿಗೆ ತೆರಳಿದರು.
ಇದಕ್ಕೂ ಮೊದಲು ಹಾಸನ ನಗರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಮಂಜುನಾಥ್ ಅವರು, ಬೆಳಗ್ಗೆ 9ಕ್ಕೆ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸಿದರು. ಅರಸೀಕೆರೆ ಪುರಸಭೆಗೆ ಸಂಬಂಧಿದಂತೆ ತಹಸೀಲ್ದಾರ್ ಮಿನಿ ವಿಧಾನಸೌಧದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸಿದರು. ಚನ್ನರಾಯಪಟ್ಟಣದ ಪುರಸಭೆಗೆ ಸಂಬಂಧಿಸಿದಂತೆ ಮಿನಿವಿಧಾನಸೌಧದಲ್ಲಿ, ಹೊಳೆನರಸೀಪುರ ಪುರಸಭೆಗೆ ಸಂಬಂಧಿಸಿದಂತೆ ಮಿನಿವಿಧಾನಸೌಧದಲ್ಲಿ, ಸಕಲೇಶಪುರದ ಪುರಸಭೆಗೆ ಸಂಬಂಧಿಸಿದಂತೆ ಮನಿವಿಧಾನಸೌಧದಲ್ಲಿ, ಬೇಲೂರಿನ ಪುರಸಭೆಗೆ ಸಂಬಂಧಿಸಿದಂತೆ ಮಿನಿವಿಧಾನಸೌಧದಲ್ಲಿ, ಅರಕಲಗೂಡಿನ ಪಟ್ಟಣ ಪಂಚಾಯ್ತಿಗೆ ಸಂಬಂಧಿಸಿದಂತೆ ಮಿನಿವಿಧಾನಸೌಧದಲ್ಲಿ ಹಾಗೂ ಆಲೂರು ಪಟ್ಟಣ ಪಂಚಾಯ್ತಿಗೆ ಸಂಬಂಧಿಸಿದಂತೆ ತಾಲೂಕು ಕಚೇರಿಯಲ್ಲಿ ಆಯಾ ತಹಸೀಲ್ದಾರ್ಗಳು ಮಸ್ಟರಿಂಗ್ ಕಾರ್ಯ ನೆರವೇರಿಸಿ ಅಧಿಕಾರಿಗಳನ್ನು ಆಯಾ ವಾರ್ಡ್ಗಳಿಗೆ ಕಳುಹಿಸಲಾಯಿತು.
ರಾಜ್ಯ ಚುನಾವಣಾ ಆಯೋಗವು ನಿಗಧಿಪಡಿಸಿದಂತೆ ಚುನಾವಣೆಯು ಮಾ.7ರಂದು ಬೆಳಗ್ಗೆ 7ರಿಂದ 5ರತವಕ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ 180 ವಾರ್ಡ್ಗಳಿದ್ದು, ಈ ಪೈಕಿ ಹೊಳೆನರಸೀಪುರ ಪುರಸಭೆಯ 4 ಮತ್ತು 9ನೇ ವಾರ್ಡ್ಗಳು ಹಾಗೂ ಆಲೂರ ಪಟ್ಟಣ ಪಂಚಾಯ್ತಿಯ 2ನೇ ವಾರ್ಡ್ ನಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದಂತೆ 177 ವಾರ್ಡ್ಗಳಲ್ಲಿ 747 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ನಗರಸಭೆಯಲ್ಲಿ 126 ಮತಗಟ್ಟೆಗಳ ಪೈಕಿ 17 ಸೂಕ್ಷ್ಮ, 15 ಅತೀ ಸೂಕ್ಷ್ಮ ಮತಗಟ್ಟೆಗಳು, ಅರಸೀಕೆರೆಯಲ್ಲಿ 45 ಮತಗಟ್ಟೆಗಳ ಪೈಕಿ 5 ಸೂಕ್ಷ್ಮ ಮತ್ತು 6 ಅತೀ ಸೂಕ್ಷ್ಮ ಮತಗಟ್ಟೆಗಳಾಗಿವೆ. ಚನ್ನರಾಯಪಟ್ಟಣದಲ್ಲಿ 39 ಮತಗಟ್ಟೆಗಳ ಪೈಕಿ 6 ಸೂಕ್ಷ್ಮ ಮತ್ತು 3 ಅತೀಸೂಕ್ಷ್ಮ ಮತಗಟ್ಟೆಗಳಾಗಿದೆ. ಹೊಳೆನರಸೀಪುರದಲ್ಲಿ 25 ಮತಗಟ್ಟೆಗಳ ಪೈಕಿ 4 ಅತೀಸೂಕ್ಷ್ಮ, ಸಕಲೇಶಪುರದ 23 ಮತಗಟ್ಟೆಯ ಪೈಕಿ 4 ಅತೀಸೂಕ್ಷ್ಮ ಮತಗಟ್ಟೆ, ಬೇಲೂರಿನ 23 ಮತಗಟ್ಟೆಗಳ ಪೈಕಿ 4 ಅತೀಸೂಕ್ಷ್ಮ ಮತಗಟ್ಟೆ, ಅರಕಲಗೂಡಿನ 15 ಮತಗಟ್ಟೆಗಳ ಪೈಕಿ 2 ಸೂಕ್ಷ್ಮ ಮತ್ತು 2 ಅತೀಸೂಕ್ಷ್ಮ ಮತಗಟ್ಟೆಗಳು ಮತ್ತು ಆಲೂರಿನ 10 ಮತಗಟ್ಟೆಗಳ ಪೈಕಿ 4 ಅತೀಸೂಕ್ಷ್ಮ ಮತಗಟ್ಟೆಗಳಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 2 ಕೆಎಸ್ಆರ್ಟಿಸಿ ಬಸ್ಗಳು, 61 ಮಿನಿ ಬಸ್, ಮ್ಯಾಕ್ಸಿ ಕ್ಯಾಬ್, 65 ಜೀಪುಗಳು ಸೇರಿದಂತೆ 128 ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಲೂರು ಪಟ್ಟಣ ಪಂಚಾಯ್ತಿ. ಮತದಾನದ ಸಿಬ್ಬಂದಿಗಳನ್ನು ಸಾಗಿಸಲು ತಾಲೂಕುವಾರು ವಾಹನಗಳನ್ನು ಅಳವಡಿಸಲಾಗಿತ್ತು.
ಚುನಾವಣೆಗೆ ಭದ್ರತೆ ಒದಗಿಸಲು 2 ಎಎಸ್ಟಿ, 2 ಡಿವೈಎಸ್ಪಿ, 12 ಇನ್ಸ್ಪೆಕ್ಟರ್ಗಳು, 36 ಸಬ್ ಇನ್ಸ್ ಪೆಕ್ಟರ್ಗಳು 99 ಎಎಸ್ಐಗಳು, 445 ಪೇದೆಗಳು, 28 ಮಹಿಳಾ ಪೊಲೀಸ್, 200 ಹೋಂ ಗಾರ್ಡ್ ಗಳು, 3 ಕೆಎಸ್ಆರ್ಪಿ ತುಕಡಿ, 4 ಡಿಆರ್ ಹಾಗೂ 54 ಮೊಬೈಲ್ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.