ಅಣು ವಿದ್ಯುತ್ ಉತ್ಪಾದನೆ ಅನಿವಾರ್ಯ
ಕ.ಪ್ರ. ವಾರ್ತೆ ಹಾಸನ ಮಾ.7
ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬೇಕಾದರೆ ಭವಿಷ್ಯದಲ್ಲಿ ಅಣುವಿದ್ಯುತ್ ಉತ್ಪಾದನೆ ಅನಿವಾರ್ಯ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಈಶ್ವರಪ್ಪ ತಿಳಿಸಿದರು.
ನಗರದ ವೆಂಕಟೇಶ್ವರ ಪಪೂ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಣು ವಿದ್ಯುತ್ ಉತ್ಪಾದನಾ ಕಾರ್ಯಾಗಾರಗಳ ನಿರ್ವಹಣೆಯಲ್ಲಿನ ಬೇಜವಾಬ್ದಾರಿಯಿಂದ ಅವಘಡಗಳು ಸಂಭವಿಸುತ್ತವೆಯೇ ವಿನಾ ಅಣು ವಿದ್ಯುತ್ತಿನಿಂದ ಅಲ್ಲ. ವೈಜ್ಞಾನಿಕ ಮನೋಭಾವ ರೂಢಿಸಿಕೊಂಡು ಭ್ರಷ್ಟಾಚಾರ ನಿರ್ಮೂಲನೆಗೆ ಯುವಜನತೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಜಸ್ಥಾನದ ಶಿವಾಜಿ ಫೌಂಡೇಷನ್ ನಡೆಸಿದ ರಾಷ್ಟ್ರಮಟ್ಟದ ಸಾಮಾನ್ಯ ಜ್ಞಾನ ಮತ್ತು ಪರಿಸರ ಜ್ಞಾನ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ ಪಿಯುಸಿ ವಿದ್ಯಾರ್ಥಿನಿ ತೃಪ್ತಿದಾಸ್, ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿನಿ ಅಮಿನಾ ಸುಲ್ತಾನ, ರಾಷ್ಟ್ರೀಯ ವಿಜ್ಞಾನ ಒಲಂಪಿಯಾಡ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಅಭಿಷೇಕ್, ಡಿ.ವೈಶಾಖ್, ತ್ರಿಲೋಕ್ನಾಗ್, ಎಚ್.ಜಿ.ಸಂಯಜ್, ಸಿಂಚನ, ಬಿ.ಆರ್. ಆದಿತ್ಯ, ರಾಜ್ಯ ವಿಜ್ಞಾನ ಪರಿಷತ್ತು ನಡೆಸಿದ ವಿದ್ಯಾರ್ಥಿ - ವಿಜ್ಞಾನಿನೇರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳು ಹಾಗೂ ಚಿತ್ರದುರ್ಗದ ತಾರಾಮಂಡಲ ನಡೆಸಿದ ವಿಜ್ಞಾನದ ಕಥೆ ಹೇಳುವ ಸ್ಪರ್ಧೆಯಲ್ಲಿ ವಿಜೇತ ಕಾಲೇಜಿನ 150 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳ ಸಾಧನೆಗೆ ಮಾರ್ಗದರ್ಶಕ ಬಿ.ಟಿ.ರಾಜು ಅವರಿಗೆ ಚಿತ್ರದುರ್ಗದ ತಾರಾಮಂಡಲ ಉತ್ತಮ ಸಂಯೋಜಕ ಶಿಕ್ಷಕ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಮಾಡಿದ್ದು, ಪ್ರಶಸ್ತಿ ಪುರಸ್ಕೃತ ಉಪನ್ಯಾಸಕರನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಜಿ.ಪಿ.ಉದಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರು ಇದ್ದರು. ಸಂಗೀತ ಪ್ರಾರ್ಥಿಸಿದರು. ಶ್ರೀಹಿತ ನಿರೂಪಿಸಿದರು. ಅಮೀನಾ ಸುಲ್ತಾನ ವಂದಿಸಿದರು. ವಿಜೇತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.