ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಸೀಕೆರೆ ಪುರಸಭೆ ಶೇ. 78 ರಷ್ಟು ಮತದಾನ

Rashmi Kasaragodu
Updated On : 7 Mar 2013, 11:07 am

ಕನ್ನಡಪ್ರಭ ವಾರ್ತೆ  ಅರಸೀಕೆರೆ  ಮಾ7
ಪಟ್ಟಣ ಪುರಸಭೆಯ 27 ವಾರ್ಡ್‌ಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ.78ರಷ್ಟು ಮತದಾನವಾಗಿದ್ದು ಒಂದೆರಡು ಘಟನೆಯನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿತ್ತು.
ಮುಂಜಾನೆ 7 ಗಂಟೆಗೆ ಪ್ರಾರಂಭವಾದ ಮತದಾನ ಒಟ್ಟು 45 ಮತಗಟ್ಟೆಗಳಲ್ಲಿ ನಡೆಯಿತು. ಮತದಾನಕ್ಕಾಗಿ ತಾಲೂಕು ಆಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರಿಂದ ಯಾವುದೇ ಗೊಂದಲಗಳು ಸಂಭವಿಸಲಿಲ್ಲ. 6 ಅತಿ ಸೂಕ್ಷ್ಮ, 6 ಸೂಕ್ಷ್ಮ ಹಾಗೂ 33 ಸಾಮಾನ್ಯ ಮತಗಟ್ಟೆಗಳಲ್ಲಿ ಮತದಾರರು ಯಾವುದೇ ಅಡಚಣೆಯಿಲ್ಲದೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ ನೀರಸವಾಗಿ ಆರಂಭವಾದ ಮತದಾನ ಬಿಸಿಲೇರುತ್ತಿದ್ದಂತೆ ಚುರುಕುಗೊಂಡಿತು. ಅತಿ ಸೂಕ್ಷ್ಮ ಮತಗಟ್ಟೆಯಾದ ವಿವೇಕಾನಂದ ಶಿಕ್ಷಣ ಕಾಲೇಜು, ಆದಿಚುಂಚನಗಿರಿ ಹಿಪ್ರಾ ಶಾಲೆ, ನಿವೇದಿತಾ ಕಾನ್ವೆಂಟ್, ಬಾಲಕರ ಪ ಪೂ.ಕಾಲೇಜು, ಸಹಿಉ ಪ್ರಾ ಶಾಲೆ, ಹಾಸನ ರಸ್ತೆಯ ಆಲ್ ಅಮೀನ್ ಕಾಲೇಜು ಮತಗಟ್ಟೆಗಳಲ್ಲಿ ಮತದಾನ ಬೆಳಗ್ಗೆಯಿಂದಲೇ ಬಿರುಸು ಪಡೆದುಕೊಂಡಿತು. ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
21ನೇ ವಾರ್ಡ್‌ನ ನಿವೇದಿತಾ ಕಾನ್ವೆಂಟ್ ಎಡಭಾಗದ ಮತದಾನ ಕೇಂದ್ರದ ಸಮೀಪ ಅಕ್ರಮ ಮತದಾನಕ್ಕೆ ಹಾರ್ನಳ್ಳಿ ಗ್ರಾಮದಿಂದ ಜನರನ್ನು ಕರೆತರಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷೇತರ ಅಭ್ಯರ್ಥಿ ಬಿ.ಎನ್. ವಿದ್ಯಾಧರ್ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಪೊಲೀಸರು ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಕೂಡಲೇ ಸ್ಥಳದಿಂದ ತೆರಳುವಂತೆ ಉಭಯ ಮುಖಂಡರಿಗೆ ಸೂಚಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಮಾತಿನ ಚಕಮಕಿ ಗೊಂದಲ:  13ನೇ ವಾರ್ಡ್‌ನ ಸಕಿಪ್ರಾ ಶಾಲೆ, ಗೊಲ್ಲರಹಟ್ಟಿ ಮತದಾನ ಕೇಂದ್ರದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಅಭ್ಯರ್ಥಿಯ ಪತಿಗೆ ಧಮಕಿ ಹಾಕಿದರೆಂಬ ಕಾರಣಕ್ಕೆ ಹಾಗೂ ಒಂದೂವರೆ ಗಂಟೆಗೂ ಹೆಚ್ಚು ಕಾಲ ಈ ವಾರ್ಡ್‌ನಲ್ಲೆ ಇದ್ದು ಮತದಾರರನ್ನು ಓಲೈಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ಶಿವರಾಂ ಬೆಂಬಲಿಗರು ಹಾಗೂ ಶಾಸಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಸುದ್ದಿ ತಿಳಿದ ಎಲ್ಲಾ ಪಕ್ಷದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸುತ್ತಿರುವುದನ್ನು ಅರಿತ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು.
ಇನ್ನುಳಿದಂತೆ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿತ್ತು. ಮತಗಟ್ಟೆಯ ಹೊರಭಾಗದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಪರ ಮತ ನೀಡುವಂತೆ ಕೇಳಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement