ತಾಳಿ ಕಟ್ಟುವ ಶುಭ ವೇಳೆ ಹೂಮಾಲೆ ಹಾಕಲು ನಿರಾಕರಿಸಿದ ವಧು
ಕನ್ನಡಪ್ರಭ ವಾರ್ತೆ ಹಾಸನ ಮಾ 7
ತಾಳಿ ಕಟ್ಟುವ ಶುಭ ವೇಳೆ ಹೂಮಾಲೆ ಹಾಕಲು ವಧು ನಿರಾಕರಿಸಿದ ಪರಿಣಾಮ ಮದುವೆ ಮನೆ ರಣರಂಗವಾದ ತೀವ್ರ ಕುತೂಹಲ ಘಟನೆ ನಗರದಲ್ಲಿ ಗುರುವಾರ ನಡೆಯಿತು.
ಕೈ ಹಿಡಿದು ಜೀವನಪೂರ್ತಿ ಜೊತೆ ಬಾಳಬೇಕು ಎಂಬೆಲ್ಲ ಕನಸು ಕಟ್ಟಿದ ವರನನ್ನು ಕಲ್ಯಾಣ ಮಂಟಪವೇರಿದ್ದ ವಧು ವಿವಾಹಕ್ಕೆ ಒಲ್ಲೆ ಎಂದ ಕಾರಣ ವಿವಾಹ ಮುರಿದು ಬಿತ್ತು. ಪರಿಣಾಮ ಸಂಭ್ರಮ ತುಂಬಿ ತುಳುಕಬೇಕಾಗಿದ್ದ ಮದುವೆ ಮನೆ ರಣರಂಗವಾಗಿ ಮಾರ್ಪಟ್ಟಿತ್ತು. ನಿಶ್ಚಿತಾರ್ಥಕ್ಕೂ ಮೊದಲೇ ನಾನು ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದೇನೆ, ಈ ಮದುವೆ ಬೇಡ ಎಂದು ಹೇಳದೆ ಕಲ್ಯಾಣ ಮಂಟಪದಲ್ಲಿ ವಿವಾಹಕ್ಕೆ ನಿರಾಕರಿಸಿದ ಯುವತಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಲಾಯಿತು.
ಕಡೇ ಪಕ್ಷ ಕಲ್ಯಾಣಕ್ಕೆ ಕೆಲವು ದಿನಗಳು ಇರುವಾಗಲಾದರೂ ಮದುವೆಗೆ ನಿರಾಕರಿಸಿದ್ದರೆ ಲಕ್ಷಾಂತರ ರು. ವೆಚ್ಚವಾಗುವುದು ತಪ್ಪುತ್ತಿತ್ತು. ನೆಂಟರಿಷ್ಟರ ಮುಂದೆ ಅಪಮಾನ, ಅವಮಾನಕ್ಕೇ ಈಡಾಗುವುದೂ ತಪ್ಪುತ್ತಿತ್ತು ಎಂದು ವರನ ಕಡೆಯವರು ಮದುವೆ ಹೆಣಿನ ಕಡೆಯವರ ವಿರುದ್ಧ ತಿರುಗಿ ಬಿದ್ದರು.
ದೂರವಾಣಿ ಸಂಭಾಷಣೆ: ವಿವಾಹ ನಿಶ್ಚಯ ನಂತರ ವಧು ಮತ್ತು ವರ ಇಬ್ಬರು ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ವಧು ತನಗೆ ಈ ಮದುವೆ ಇಷ್ಟ ಇಲ್ಲ ಎನ್ನದೆ ವರನೊಂದಿಗೆ ಚೆನ್ನಾಗಿಯೇ ಮಾತನಾಡಿಕೊಂಡಿದ್ದಳು. ಇದರಿಂದ ವರ ತನ್ನನ್ನು ವಧು ವಿವಾಹವಾಗಲು ಸಂಪೂರ ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ತನ್ನ ಮನೆಯವರಿಗೆ ವಿವಾಹ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವಂತೆ ಹೇಳಿದರು. ಅದೇ ರೀತಿ ವಧುವಿನ ಮನೆಯವರು ಸಾಲಸೋಲ ಮಾಡಿ ಮಗಳ ಮದುವೆಗೆ ಹಣ ಹೊಂದಿಸಿ ಕೊಂಡಿದ್ದರು.
ಮನೆಯವರು ಕಷ್ಟಪಟ್ಟು ಹಣ ಹೊಂದಿಸಿಕೊಂಡು ಸಮಾಜ ಒಪ್ಪುವಂತೆ ವಿವಾಹ ಮಾಡಲು ಮುಂದಾಗಿ ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು, ಬಂಧು ಬಳಗದವರನ್ನೆಲ್ಲ ಮದುವೆಗೆ ಆಹ್ವಾನಿಸಿ ಬುಧವಾರ ಎಲ್ಲರು ಕಲ್ಯಾಣ ಮಂಟಪಕ್ಕೆ ಬಂದು ತಂಗಿದ್ದರು. ರಾತ್ರಿ ಎಲ್ಲಾ ರೀತಿಯ ವಿವಾಹದ ಶಾಸ್ತ್ರೋಕ್ತಗಳನ್ನು ಒಪ್ಪಿಗೆಯಿಂದಲೇ ಪಾಲ್ಗೊಂಡ ವಧು, ಲಗ್ನದ ದಿನವಾದ ಗುರುವಾರ ಬೆಳಗ್ಗೆ ಎದ್ದೇಳುತ್ತಿದ್ದಂತೆ ತನಗೆ ಈ ವಿವಾಹ ಇಷ್ಟವಿಲ್ಲ. ತಾನು ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಳು.
ಯಾಕೆ ಹಿಂಗಾಯ್ತು?....
ನಗರದ ಬೀರನಹಳ್ಳಿಕೆರೆ, ರಾಘವೇಂದ್ರ ಕಾಲೋನಿಯ ಮಂಜುಳ ಮತ್ತು ಮೌನೇಶಚಾರ್ ಎಂಬುವರ ಪುತ್ರಿ ನಂದಿನಿ ಎಂಬ ವಧು ನನಗೆ ಈ ಮದುವೆ ಬಿಲ್ಕುಲ್ ಬೇಡವೇ ಬೇಡ, ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಈ ವಿವಾಹವಾಗುವುದಿಲ್ಲ ಎಂದು ಪಟ್ಟು ಹಿಡಿದವಳು.
ತಾಲೂಕಿನ ದುದ್ದ ಹೋಬಳಿಯ ಚಿಕ್ಕಕಡಲೂರು ಗ್ರಾಮದ ಸರೋಜಮ್ಮ ಮತ್ತು ಸೂರ್ಯನಾರಾಯಣಚಾರ್ ಎಂಬುವರ ಪುತ್ರ ಧರ್ಮಚಾರ್ ನೊಂದಿಗೆ 5 ತಿಂಗಳ ಹಿಂದೆ ನಂದಿನಿ ವಿವಾಹವನ್ನು ಗುರು ಹಿರಿಯರು ನಿಶ್ಚಯಿಸಿದ್ದರು. ಆ ಸಂದರ್ಭದಲ್ಲಿ ವರನು ನನಗೆ ಇಷ್ಟವಿದೆ ಎಂದು ವಧು ಒಪ್ಪಿಕೊಂಡಿದ್ದರಿಂದ ಮಾ.6 ಮತ್ತು 7 ರಂದು ನಗರದ ಶ್ರೀಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ವಿವಾಹ ನಿಗದಿ ಮಾಡಲಾಗಿತ್ತು.
ವೈದ್ಯನೊಂದಿಗೆ ಲವ್ವಿ, ಡವ್ವಿ
ನೂರಾರು ಮಂದಿ ಬಂಧು-ಬಳಗದವರು, ಸ್ನೇಹಿತರು, ಹಿತೈಷಿಗಳು ವಿವಾಹದಲ್ಲಿ ಪಾಲ್ಗೊಂಡು ಶುಭ ಹಾರೈಸಲು ನೆರೆದಿದ್ದರು. ಬಗೆ ಬಗೆಯ ಅಡುಗೆಗಳನ್ನು ಮಾಡಲಾಗಿತ್ತು. ಪುರೋಹಿತರು, ಓಲಗದವರು, ಪೋಟೋ ವಿಡಿಯೋದವರ ಮುಂದೆ ವಿವಾಹ ನಡೆಯುತ್ತಿದ್ದ ಸಂದರ್ಭದಲ್ಲಿ ವಧು ತಾನು ಕಿರಣ್ ಎಂಬ ವೈದ್ಯ ಯುವಕನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ನಾನು ವಿವಾಹವಾಗುತ್ತೇನೆ ವಿನಾ ಯಾವುದೇ ಕಾರಣಕ್ಕೂ ಬೇರೆ ಯುವಕನಿಂದ ಮಾಂಗಲ್ಯ ಕಟ್ಟಿಸಿಕೊಳ್ಳುವುದಿಲ್ಲ ಎಂದಳು.
ವಧು ತನ್ನನ್ನು ವಿವಾಹವಾಗಲು ಒಪ್ಪುತ್ತಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆ ವರ ಧರ್ಮಚಾರ್ ತಾನು ಸಹ ಈ ವಿವಾಹವಾಗುವುದಿಲ್ಲ ಎಂದರು. ಆಗ ಎರಡು ಮನೆಯವರನ್ನು ಒಪ್ಪಿಸಿ ಮತ್ತೆ ವಧುವರನ ವಿವಾಹ ನಡೆಸಲು ಸಮಾಜದ ಹಿರಿಯವರು ಮುಂದಾದರು. ಆದರೆ ಮಾತಿನ ಚಕಮಕಿ ನಡೆದು, ವಾಗ್ವದ ಉಂಟಾಗಿ ಕೊನೆಗೂ ವಿವಾಹ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ವಿವಾಹಕ್ಕೆ ಆಗಮಿಸಿದ್ದ ಬಂಧು ಬಳಗದವರು ವಾಪಸ್ ತೆರಳಿದರು. ಮಾಡಿದ್ದ ಭಕ್ಷ ಸವಿಯಲು ಜನ ಇಲ್ಲದಂತಾಗಿ ಮಾಡಿದ್ದ ಅಡುಗೆ ಮಣು ಪಾಲಾಯಿತು. ಕೆಲವೇ ಕ್ಷಣದಲ್ಲಿ ಗಿಜಿಗುಡುತ್ತಿದ್ದ ಕಲ್ಯಾಣ ಮಂಟಪ ಕೆಲವೇ ಸಮಯದಲ್ಲಿ ಖಾಲಿ ಖಾಲಿಯಾಗಿ ನೀರಸ ಮೌನ ತಾಳಿತು. ಈ ಸಂಬಂಧವಾಗಿ ವರನ ಕಡೆಯವರು ನಗರದ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದರು.
ಲಗ್ನವಾಗಬಬೇಕು ಎನ್ನುವಷ್ಟರಲ್ಲಿ ವಿವಾಹ ಬೇಡ ಎಂದ ವಧುವನ್ನು ನಾನೂ ವಿವಾಹವಾಗುವುದಿಲ್ಲ. ಆಕೆ ಬೇರೆ ಯುವಕನನ್ನು ಪ್ರೀತಿಸಿರುವುದಾಗಿ ಇಷ್ಟು ದಿನಗಳವರೆಗೆ ಹೇಳದೆ ಮದುವೆ ಮನೆಯಲ್ಲಿ ಹೇಳಿದ್ದಾಳೆ. ಆದ್ದರಿಂದ ಆಕೆಯನ್ನು ಗುರುಹಿರಿಯರೆಲ್ಲ ಒಪ್ಪಿಸಿದರೂ ನಾನು ವಿವಾಹವಾಗುವುದಿಲ್ಲ.
ಟಿ ಧರ್ಮಾಚಾರ್, ವರ
ನಾನು ಮನೆಯಲ್ಲಿ ಮೊದಲೇ ಹೇಳಿದ್ದೆ, ಈ ಮದುವೆ ಇಷ್ಟ ಇಲ್ಲ ಅಂತ. ಆದ್ರು ಸಹ ಮನೆಯಲ್ಲಿ ನನ್ನ ಮಾತಿಗೆ ಗಿವಿಗೊಡಲಿಲ್ಲ. ನನ್ನ ಮನಸಿನಲ್ಲಿ ಏನೋ ಒಂದು ರೀತಿಯಲ್ಲಿ ಆತ್ಮ ಮಾತನಾಡಿದಂತಾಗಿ ಮದುವೆ ಬೇಡ ಅನ್ನಿಸಿತು. ಮದುವೆ ನನಗೆ ಇಷ್ಟವಿಲ್ಲ. ಧರ್ಮಚಾರ್ ನಾವಿಬ್ಬರು ಅಣ ತಂಗಿ ಇದ್ದಂತೆ.
ಟಿ ನಂದಿನಿ, ವಧು