ನಿಯಮ ಗಾಳಿಗೆ ತೂರಿ ಅಭ್ಯರ್ಥಿ ಬಂಧನ: ಶಾಸಕರ ದೂರು
ಕನ್ನಡಪ್ರಭ ವಾರ್ತೆ, ಬೇಲೂರು, ಮಾ.7
ಪಟ್ಟಣದ 7 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಕಾಯಿ ಶಿವು ಅವರನ್ನು ಬಂಧಿಸುವಾಗ ನೀತಿ ನಿಯಮ ಗಾಳಿಗೆ ತೂರಲಾಗಿದೆ ಎಂದು ಶಾಸಕ ವೈ.ಎನ್.ರುದ್ರೇಶ್ಗೌಡ ದೂರಿದರು. ಬುಧವಾರ ರಾತ್ರಿ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 7 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಕಾಯಿಶಿವು 11 ನೇ ವಾರ್ಡಿನಲ್ಲಿರುವ ರಾಘವೇಂದ್ರ ಮಠಕ್ಕೆ ವ್ಯಾನಿನಲ್ಲಿ ಹೋಗಿದ್ದರು. ಆಗ ದಿಢೀರ್ ದಾಳಿ ಮಾಡಿದ ಪೊಲೀಸರು ವ್ಯಾನಿನೊಳಗೆ 6 ಲೀ. ಮದ್ಯದ ಬಾಟಲ್ ಹಾಗೂ ಚಾಲಕನ ಬಳಿ ಇದ್ದ 40 ಸಾವಿರ ರು.ಗಳನ್ನು ವಶಪಡಿಸಿಕೊಂಡಿದ್ದಾರೆ. ದೇಗುಲಕ್ಕೆ ತೆರಳಿದ್ದ ಕಾಯಿಶಿವು ಅವರನ್ನು ವ್ಯಾನಿನಲ್ಲಿ ಇಲ್ಲದಿದ್ದರೂ ಬಂಧಿಸಿದ್ದಾರೆ. ಅಲ್ಲದೆ ಮದ್ಯದ ಬಾಟಲ್ ಕಾರಿನಲ್ಲಿ ಹೇಗೆ ಬಂತು ಎಂದು ತಮಗೆ ತಿಳಿದಿಲ್ಲ ಎಂದು ಕಾಯಿ ಶಿವು ಅಲವತ್ತು ಕೊಂಡರೂ ತರಾತುರಿಯಲ್ಲಿ ಎಫ್ಐಆರ್ ತಯಾರಿಸಿದ್ದಾರೆ. ಇದಕ್ಕೆ ಜೆಡಿಎಸ್ನ ಕೆಲ ಮುಖಂಡರು ಕೈ ಜೋಡಿಸಿದ್ದು ಒಬ್ಬ ಆಮಾಯಕ ಬಡವ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವ್ಯಕ್ತಿಯ ಮೇಲೆ ದೌರ್ಜನ್ಯ ಎಸೆಗಿದ್ದಾರೆ ಎಂದು ದೂರಿದರು..
ಬ್ಲಾಕ್ ತಾಲೂಕು ಅಧ್ಯಕ್ಷ ಮಾದವೇಗೌಡ, ಜಿಪಂ ಮಾಜಿ ಸದಸ್ಯ ಕೃಷೇಗೌಡ ಇದ್ದರು.