ಶಾಸಕ ಮಂಜುಗೆ ನಿರಾಶೆ ಕಾಡುತ್ತಿದೆ: ನಂಜುಂಡಸ್ವಾಮಿ ಟೀಕೆ
ಹಾಸನ: ಅರಕಲಗೂಡು ಶಾಸಕ ಎ. ಮಂಜು ಅವರಿಗೆ ಇತ್ತೀಚೆಗೆ ಹತಾಶೆ ಕಾಡುತ್ತಿದೆ. ಅವರು ಕಳೆದ ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಏನೊಂದು ಗಮನ ನೀಡದೆ ಕೇವಲ ಪ್ರಚಾರದ ರಾಜಕೀಯ ಗಿಮಿಕ್ ಮಾಡುತ್ತಿದ್ದ ಅವರಿಗೆ ಇದೀಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಭೀತಿ ಮೂಡಲಾರಂಭಿಸಿದೆ ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎ. ನಂಜುಂಡಸ್ವಾಮಿ ತಿಳಿಸಿದ್ದಾರೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ತಾಲೂಕಿನ ಎಚ್ಆರ್ಪಿ ವಡ್ಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರವನ್ನು ಎ. ಮಂಜು ಉದ್ಘಾಟಿಸಬೇಕಿತ್ತು. ಅಧ್ಯಕ್ಷತೆಯನ್ನು ತಮಗೆ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣವೊಡ್ಡಿ ಕಾರ್ಯಕ್ರಮವನ್ನೇ ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.