ಶಿಕ್ಷಣದ ಕೊರತೆಯೇ ಮಹಿಳಾ ಸಬಲೀಕರಣಕ್ಕೆ ಅಡ್ಡಿ
ಕ.ಪ್ರ. ವಾರ್ತೆ ಹಾಸನ ಮಾ 8
ಜಿಲ್ಲಾಡಳಿತ ಸೇರಿದಂತೆ ನಗರದ ನಾನಾ ಕಡೆಗಳಲ್ಲಿ ನಾನಾ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮಹಿಳೆಯರ ಸಬಲೀಕರಣಕ್ಕೆ ಅನೇಕ ಕಾನೂನುಗಳನ್ನು ಜಾರಿಗೆ ತಂದಿದ್ದರೂ ಶಿಕ್ಷಣದ ಕೊರತೆಯಿಂದಾಗಿ ಮಹಿಳಾ ಸಬಲೀಕರಣಕ್ಕೆ ಅಡ್ಡಿಯುಂಟಾಗಿದ್ದು, ಹೆಚ್ಚಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಚ್.ಜಿ.ವಿಜಯಕುಮಾರಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ರಾಜ್ಯ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ನಾನಾ ಮಹಿಳಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಇನ್ನೂ ಶಿಕ್ಷಣದಿಂದ ವಂಚಿತರಾಗಿ ಅವಿದ್ಯಾವಂತರಾಗುತ್ತಿದ್ದಾರೆ ಎಂದರು.
ಮಹಿಳೆಯರ ರಕ್ಷಣೆಗೆ ಹೆಚ್ಚಿನ ಒತ್ತು: ಮೊದಲು ಮಹಿಳೆಯರಿಗೆ ಆಸ್ತಿಯ ಹಕ್ಕು ಇರಲಿಲ್ಲ. ಆಸ್ತಿಯನ್ನು ಅನುಭವಿಸಬಹುತ್ತಿತ್ತು. ಅದು ಬದಲಾವಣೆಯಾಗಿ ಮಹಿಳೆಯರಿಗೆ ಪುರುಷರಷ್ಟೇ ಸಮಾನವಾದ ಆಸ್ತಿಯ ಹಕ್ಕನ್ನು ನೀಡಲಾಯಿತು ಹಾಗೂ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡಲಾಯಿತು. ಕಾನೂನನ್ನು ಆಯುಧವಾಗಿ ಬಳಸದೆ ರಕ್ಷಣೆಗಾಗಿ ಉಪಯೋಗಿಸಿಕೊಳ್ಳಬೇಕು. ಕಾನೂನು ಮಹಿಳಾ ಸ್ವಾತಂತ್ರ್ಯವನ್ನು ರಕ್ಷಿಸುತ್ತಿದೆ. ಮಹಿಳೆಯರ ರಕ್ಷಣೆಗಾಗಿ ಹಲವು ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಮಾತನಾಡಿ ಮಹಿಳೆಯರ ಸಬಲೀಕರಣ ಹಾಗೂ ರಕ್ಷಣೆ ನಮ್ಮ ಗುರಿಯಾಗಿದ್ದು, ದೇಶದಲ್ಲಿ ಕಾನೂನಿನ ಗುರಿ ಹಾಗು ಸಂವಿಧಾನದ ಗುರಿ ಕೂಡಾ ಇದೇ ಆಗಿದೆ. ಪುರುಷನಂತೆ ಸರಿ ಸಮನಾಗಿ ಮಹಿಳೆ ಮುಂದೆ ಬರಲು ಸರ್ಕಾರವು ನಾನಾ ಕ್ರಮಗಳನ್ನು ಕೈಗೊಂಡಿದೆ. ಒಂದು ಕಡೆ ಎಲ್ಲಾ ಕ್ಷೇತ್ರದಲ್ಲೂ ಸಮಾನತೆ ಸಿಗುತ್ತಿದ್ದರೇ ಮತ್ತೊಂದು ಕಡೆ ಮಹಿಳೆಯರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸರ್ಕಾರ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರಿಗೆ ದಂಡ ವಿಧಿಸಿ ಶಿಕ್ಷೆ ವಿಧಿಸುವುದರಿಂದ ಇಂಥ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಅದನ್ನು ಪುರುಷರ ಮನೋಭಾವವನ್ನು ಬದಲಾಯಿಸುವ ಮೂಲಕ ಮಹಿಳೆಯರಿಗೆ ಮೇಲೆ ಗೌರವ ಹಾಗೂ ಒಳ್ಳೆಯ ಭಾವನೆ ಮೂಡುವಂತೆ ಮಾಡಬೇಕು ಎಂದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್, ಧಾರವಾಡದ ದೀಕ್ಷಾಸಂಸ್ಥೆಯ ಸಂಸ್ಥಾಪಕಿ ಹಾಗು ನಿರ್ದೇಶಕಿ ಎಸ್.ಆರ್.ಡಿಸಿಲ್ವ ಲಿನೆಟ್, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಚ್.ನಾಗರಾಜ್, ನಿವೃತ್ತ ಶಿಕ್ಷಕಿ ಕೆ.ವಿ.ಕಮಲಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಸಿ.ಚಿದಾನಂದ, ವಕೀಲ ಕೆಂಚಪ್ಪ ಹಾಗೂ ಇತರರು ಇದ್ದರು.
ಎನ್ಡಿಆರ್ಕೆ ಕಾಲೇಜಿನಲ್ಲಿ: ಮಹಿಳೆಯ ಪುರುಷರಂತೆ ಸಮಾನಳಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಸೇವೆ ಸಲ್ಲಿಸುತ್ತಿದ್ದಾಳೆ ಎಂದು ವಕೀಲೆ ಗಿರಿಜಾಂಬಿಕ ಹೇಳಿದರು. ಎನ್ಡಿಆರ್ಕೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಮಹಿಳಾ ದೌರ್ಜನ್ಯ ವಿರೋಧಿ ಘಟಕದಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳನ್ನು ವಾಹನದಲ್ಲಿ ಸುರಕ್ಷಿತವಾಗಿ ಬಿಡುವ ಕೆಲಸ ಮಾಡುತ್ತಿರುವ ತಾರಾ ಅರುಣಕುಮಾರ್ರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಸಿಕೆಎಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಪಿ.ವಿಜಯಕುಮಾರ್, ಶಾಲಿ ವರ್ಗೇಸ್, ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕಿ ಶಾಹಿದಾ ಬೇಗಂ, ಪ್ರಾಂಶುಪಾಲ ಕೆ.ಶಾಮಭಟ್, ಆಂಗ್ಲ ವಿಭಾಗದ ನೀಲಕಂಠ ಮನ್ವಚಾರ್, ಜೋಸೆಫ್, ಸಮಾಜ ಶಾಸ್ತ್ರ ವಿಭಾಗದ ತಿಮ್ಮಪ್ಪಗೌಡ, ವಾಣಿಜ್ಯ ವಿಭಾಗದ ಅರುಣಕುಮಾರ್, ಜಯಣ್ಣ, ಗ್ರಂಥಾಲಯ ವಿಭಾಗದ ಅರ್ಜುನ್ ಇತರರು ಇದ್ದರು.
ಮಹಿಳೆಯರ ಸಬಲೀಕರಣಕ್ಕೆ ಅನೇಕ ಕಾನೂನುಗಳನ್ನು ಜಾರಿಗೆ ತಂದಿದ್ದರೂ ಶಿಕ್ಷಣದ ಕೊರತೆಯಿಂದಾಗಿ ಮಹಿಳಾ ಸಬಲೀಕರಣಕ್ಕೆ ಅಡ್ಡಿಯುಂಟಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ
ಟಿ ನ್ಯಾ. ವಿಜಯಕುಮಾರಿ