ದಂಪತಿ ಅನ್ಯೂನ್ಯವಾಗಿದ್ದರೆ ಬದುಕು ಕೇಸರಿ ಬಾತು, ಸರಿಯಿಲ್ಲದಿರೆ 'ರಾಹುಕೇತು'
ಕನ್ನಡಪ್ರಭ ವಾರ್ತೆ ್ಣ ಹಾಸನ ್ಣ ಮಾ. 9
ಗಂಡ ಹೆಂಡತಿ ಅನ್ಯೂನ್ಯವಾಗಿದ್ದರೆ ಬದುಕು ಕೇಸರಿ ಬಾತು ಇಲ್ಲದಿರೇ ಅವರೆ ರಾಹು ಕೇತು..
ಹೀಗೆ ಹಾಸ್ಯದ ಜೊತೆ ವಾಸ್ತವ ಮಿಶ್ರಣ ಮಾಡಿ ಮಾತು ಆರಂಭಿಸಿದವರು ಕನ್ನಡ ಪೂಜಾರಿ ಹಾಗೂ ಕನ್ನಡ ಸಾಹಿತ್ಯ ಪರಿಚಾರಿಕ ಹಿರೇಮಗಳೂರು ಕಣ್ಣನ್.
ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲಾ ಘಟಕ, ವಕೀಲರ ಸಂಘದ ಆಶ್ರಯದಲ್ಲಿ ಶನಿವಾರ ನಡೆದ ದಾಂಪತ್ಯದನುಬಂಧ ಕೌಟುಂಬಿಕ ವ್ಯಾಜ್ಯಗಳ ಮಧ್ಯಸ್ಥಿಕೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ದಾಂಪತ್ಯ ಸಾಫಲ್ಯ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.
ದಾಂಪತ್ಯ ಕೇವಲ ಜೋಡಿ ಇದ್ದಂತೆ ಮಾತ್ರವಿರದೆ ಜೋಡು ಇದ್ದಂತೆ ಇರಬೇಕು. ನಾಲಿಗೆಯಲ್ಲಿ ಸಂಸ್ಕಾರ, ಸಂಯಮ, ಸಹಿಷ್ಣುತೆ,ಕುಟುಂಬದ ಎಲ್ಲಾ ಸದಸ್ಯರನ್ನು ಗೌರವಿಸುವ ಮನೋಭಾವ ಇದ್ದರೆ ಬಹುತೇಕ ದಾಂಪತ್ಯ ಸುಖಮಯವಾಗಿರುತ್ತವೆ. ಮಾತಿಗೂ ಮನಸಿಗೂ ಸಂಬಂಧವಿದೆ. ಸೋತುಗೆಲ್ಲುವ ಮನಸ್ಸು ಇದ್ದ ಕುಟುಂಬ ಸದಾ ಆನಂದವಾಗಿರುತ್ತದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಮಧ್ಯಸ್ಥಿಕ ಕೇಂದ್ರದ ನಿರ್ದೇಶಕ ಎ.ವಿ ಚಂದ್ರಶೇಖರ್ ಮಾತನಾಡಿ, ಆಧುನಿಕ ಯುಗದಲ್ಲಿ ನ್ಯಾಯಾಂಗ ಇಲಾಖೆ ಜವಾಬ್ದಾರಿ ಹೆಚ್ಚಾಗಿದೆ. ವಕೀಲರು ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದಾರೆ ಎಂದು ನುಡಿದರು.ಅಂತಾರಾಷ್ಟ್ರಿಯ ಲಯನ್ಸ್ ಜಿಲ್ಲಾ ರಾಜ್ಯಪಾಲ ಎಂ.ಬಿ.ಸದಾಶಿವ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ವಿಜಯ ಕುಮಾರಿ ಮಾತನಾಡಿ, ಇಂತಹ ಹೆಚ್ಚಿನ ಕಾರ್ಯಾಗಾರಗಳು ನಡೆಯಬೇಕೆಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮುಸ್ತಫಾ ಹುಸೇನ್ ಸಣ್ಣ ಪಟ್ಟ ಸಮಸ್ಯೆಗಳಿಗೂ ವಿಚ್ಚೇದನ ಬಯಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಮಾತು ಕತೆ ಮೂಲಕ ಬಗೆಹರಿಸಿ ಮತ್ತೆ ಒಂದಾಗಿ ಬಾಳುವಂತೆ ಮಾಡುವುದು, ಇದಕ್ಕೆ ಮಧ್ಯಸ್ಥಗಾರರನ್ನು ಸಿದ್ದಪಡಿಸುವುದು ಈ ಕಾರ್ಯಾಗಾರದ ಉದ್ದೇಶ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ವಿಶ್ವನಾಥ ಇದ್ದರು. ಕಾರ್ಯದರ್ಶಿ ಜಿ.ಎಸ್.ವಿಶ್ವನಾಥ್ ವಂದಿಸಿದರು. ಮಂಜುನಾಥ್ ಇತರರು ಇದ್ದರು.